ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಅನಗತ್ಯವಾಗಿ ರೋಗಿಗಳನ್ನು ಶಿವಮೊಗ್ಗಕ್ಕೆ ಶಿಫಾರಸ್ಸು ಮಾಡಿದಲ್ಲಿ, ಸಾರ್ವಜನಿಕರಿಂದ ದೂರು ಕೇಳಿಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಕ್ಷೇತ್ರದ ಶಾಸಕ ಬಿ.ವೈ.ವಿಜಯೇಂದ್ರ ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.ತಾಲೂಕಿನಲ್ಲಿ ಡೆಂಘೀ ಪ್ರಕರಣ ಹೆಚ್ಚಳದ ಬಗ್ಗೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿನ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲಿಸಿ ವರದಿ ಪಡೆಯಲು ಬುಧವಾರ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ, ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಎಲ್ಲ ಸೌಲಭ್ಯ ಕಲ್ಪಿಸಿಕೊಟ್ಟ ಶಿಕಾರಿಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಬಗ್ಗೆ ಸಂಸದ ರಾಘವೇಂದ್ರ ಹೆಚ್ಚಿನ ನಿಗಾವಹಿಸಿದ್ದು, ಅನಗತ್ಯವಾಗಿ ರೋಗಿಗಳನ್ನು ಶಿವಮೊಗ್ಗಕ್ಕೆ ಶಿಫಾರಸ್ಸು ಮಾಡಿದರೆ ಅಲ್ಲಿಯೂ ಸಮಸ್ಯೆಯಾದೀತು ಎಂದು ತಿಳಿಸಿದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಸಿದ್ದಲಿಂಗಪ್ಪ, ಕಳೆದ ಶನಿವಾರ ಹಾವು ಕಚ್ಚಿದ ವ್ಯಕ್ತಿಗೆ ಚಿಕಿತ್ಸೆ ನೀಡದೆ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ ಎಂದು ಆರೋಪಿಸಿ ದರು. ಬಿಜೆಪಿ ನಗರಾಧ್ಯಕ್ಷ ಎಸ್.ಎಸ್ ರಾಘವೇಂದ್ರ, ಆಡಳಿತ ವೈದ್ಯಾಧಿಕಾರಿ ನಿತ್ಯ ಶಿವಮೊಗ್ಗದಿಂದ ಒಡಾಡುತ್ತಿರುವುದೂ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದರು.ತಾಲೂಕು ವೈದ್ಯಾಧಿಕಾರಿ ಡಾ.ನವೀದ್ ಖಾನ್, ಈಗಾಗಲೇ ತಾಲೂಕಿನ 17 ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ 39 ಗ್ರಾಮದಲ್ಲಿ 59 ಡೆಂಘೀ ಪ್ರಕರಣ ಪತ್ತೆಯಾಗಿದ್ದು, ಪಟ್ಟಣ ವ್ಯಾಪ್ತಿಯಲ್ಲಿ ಮನೆಮನೆ ಸಮೀಕ್ಷೆಯಲ್ಲಿ 6 ಪ್ರಕರಣ ದೃಢಪಟ್ಟಿದೆ. ತಾಲೂಕಿನಾದ್ಯಂತ 115 ಪ್ರಕರಣ ಪತ್ತೆಯಾಗಿದೆ ಎಂದು ಮಾಹಿತಿ ನೀಡಿ, ತಡೆಗಟ್ಟಲು ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದರು.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಅರುಣ್ ಕುಮಾರ್, ಫಿಜಿಷಿಯನ್ ಒತ್ತಡದಿಂದ ಕೆಲ ತುರ್ತು ಸಂದರ್ಭದಲ್ಲಿ ತಲೆಗೆ ಪೆಟ್ಟು,ಮೂಳೆ ಮತ್ತಿತರ ತೀವ್ರ ಹೊಡೆತದ ರೋಗಿಗಳನ್ನು ಮಾತ್ರ ಶಿವಮೊಗ್ಗಕ್ಕೆ ಶಿಫಾರಸುಗೊಳಿಸಲಾಗುತ್ತಿದೆ. ಆಸ್ಪತ್ರೆಯಲ್ಲಿ ಕೀಲು ಮೂಳೆ, ಕಿವಿಮೂಗು ಗಂಟಲು ತಜ್ಞ ವೈದ್ಯರ ಕೊರತೆಯಿದ್ದು ಭರ್ತಿಗೆ ಇಲಾಖೆ ಜತೆ ಸತತ ಸಂಪರ್ಕದಲ್ಲಿರುವುದಾಗಿ ತಿಳಿಸಿದರು.ಅರವಳಿಕೆ ತಜ್ಞ ವೈದ್ಯ ಡಾ.ಸುರೇಶ್, ಸ್ಕ್ಯಾನಿಂಗ್ ಯಂತ್ರ ಸುಸ್ಥಿತಿಯಲ್ಲಿದ್ದು, ವೈದ್ಯರು ಮಹಿಳಾ ಮಕ್ಕಳ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಿಗದಿತ ಸಮಯದಲ್ಲಿ ಎರಡೂ ಕಡೆ ನಿರ್ವಹಿಸಲು ಸಮಯ ನಿಗದಿಪಡಿಸಿದಾಗ ಮಾತ್ರ ಸಮಸ್ಯೆ ಪರಿಹಾರವಾಗಲಿದೆ ಎಂದು ತಿಳಿಸಿದಾಗ, ಶಾಸಕರು, ನಿತ್ಯ ಬೆಳಿಗ್ಗೆ ಹಾಗೂ ಸಂಜೆ ಪ್ರತ್ಯೇಕವಾಗಿ ಸಮಯ ನಿಗದಿಪಡಿಸಿಕೊಳ್ಳಲು ಸೂಚಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಮಹೇಶ್ ಹುಲ್ಮಾರ್,ಪ್ರಶಾಂತ ಜೀನಳ್ಳಿ, ಪಾಲಾಕ್ಷಪ್ಪ ಮುಖಂಡ ಗುರುಮೂರ್ತಿ, ಹನುಮಂತಪ್ಪ,ರುದ್ರೇಶ್ ತಜ್ಞ ವೈದ್ಯ ಡಾ.ಶ್ರೀನಿವಾಸ್, ಡಾ.ಮಾರುತಿ, ಡಾ.ಬಸವಕುಲಾಲ್, ಡಾ.ಅನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.