ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶವನ್ನು ವೃದ್ಧಿಸಲು ಈಗಿನಿಂದಲೇ ಶಿಕ್ಷಣ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು ಶಾಸಕ ಪಿ.ರವಿಕುಮಾರ್ ಸೂಚನೆ ನೀಡಿದರು.ನಗರದ ಜಿಪಂ ಕಾವೇರಿ ಸಭಾಂಗಣದಲ್ಲಿ ನಡೆದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಂಡ್ಯ ತಾಲೂಕು ವ್ಯಾಪ್ತಿ ಶಾಲೆಗಳ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆಯಾಗಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಾಲಾ ಮುಖ್ಯಸ್ಥರು ಉತ್ತಮ ಫಲಿತಾಂಶ ಬರುವಂತೆ ಮಾಡಬೇಕು ಎಂದರು.
ಎಲ್ಲಾ ಶಾಲೆಗಳಲ್ಲೂ ಮೂಲ ಸೌಕರ್ಯ ಸಮರ್ಪಕವಾಗಿ ಇದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ದುರಸ್ತಿಗೊಳ್ಳಬೇಕಾದ ಶಾಲೆಗಳ ಪಟ್ಟಿ ಸಿದ್ಧ ಪಡಿಸಿ ಮಾಹಿತಿ ನೀಡಬೇಕು. ಮಕ್ಕಳಿಗೆ ಶಾಲೆಗಳಲ್ಲಿ ಮಾನಸಿಕ ಒತ್ತಡ ನಿವಾರಣೆ ಮಾಡಲು ವಿವಿಧ ಕಾರ್ಯಕ್ರಮ ರೂಪಿಸಬೇಕು. ಕೌನ್ಸೆಲಿಂಗ್ ಮಾಡಿಸಿ ಮಕ್ಕಳ ಕೌಶಲ್ಯ ಮತ್ತು ಶೈಕ್ಷಣಿಕ ವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.ಅನರ್ಹ ಬಿಪಿಎಲ್ ಕಾರ್ಡ್ ಬಳಕೆದಾರರ ಹೆಸರನ್ನು ಕೈ ಬಿಡಲು ಸೂಚಿಸಲಾಗಿದೆ. ಮೊದಲ ಹಂತದಲ್ಲಿ ತಾಲೂಕಿನ 1667 ಬಿಪಿಎಲ್ ಕಾರ್ಡ್ ಬಳಕೆದಾರರನ್ನು ಅರ್ಹ ಪಟ್ಟಿಯಿಂದ ಕೈ ಬೀಡಲಾಗಿದೆ. ಅಧಿಕಾರಿಗಳು ಬಿಪಿಎಲ್ ಬಳಕೆದಾರರ ಪಟ್ಟಿ ಕೈ ಬಿಡುವ ಮೊದಲು ಅವರ ಆರ್ಥಿಕ ಸ್ಥಿತಿ ಅವಲೋಕಿಸಿ ರದ್ದು ಪಡಿಸಬೇಕು ಅರ್ಹರು ಬಿಪಿಎಲ್ ಪಟ್ಟಿಯಿಂದ ಕೈ ಬಿಡದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ತಾಲೂಕು ವ್ಯಾಪ್ತಿಯ ಕೆಲ ಆಸ್ಪತ್ರೆಗಳಲ್ಲಿ ವೈದ್ಯರು ರಾತ್ರಿ ವೇಳೆಯಲ್ಲಿ ಇರುವುದಿಲ್ಲವೆಂದು ದೂರು ಕೇಳಿ ಬರುತ್ತಿವೆ. ಎಲ್ಲಾ ಆಸ್ಪತ್ರೆಗಳಲ್ಲೂ ರಾತ್ರಿ ವೇಳೆಯಲ್ಲಿ ವೈದ್ಯರು ಇರಬೇಕು. ವೈದ್ಯರ ಲಭ್ಯತೆ ಇಲ್ಲದಿದ್ದರೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಆರೋಗ್ಯ ಕೇಂದ್ರಗಳಿಗೆ ವೈದ್ಯರನ್ನು ನೇಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದರು.ಭತ್ತ ರಾಗಿ ಖರೀದಿ ಕೇಂದ್ರದಲ್ಲಿ ನೋಂದಣಿ ಪ್ರಾರಂಭಿಸಲಾಗಿದೆ. ಶೀಘ್ರ ಖರೀದಿ ಪ್ರಾರಂಭಿಸಲಾಗುವುದು. ಕೃಷಿ ಇಲಾಖೆಗೆ ಸೇರಿದ ಯೋಜನೆ ರೈತರಿಗೆ ತಿಳಿಸಬೇಕು. ಗುಂಪು ಕರೆ, ಪೋಸ್ಟರ್, ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಚಾರ ಮಾಡಬೇಕು ಎಂದರು.
ತಾಲೂಕು ವ್ಯಾಪ್ತಿಯಲ್ಲಿ 15 ಜನರಿಗೆ ಹನಿ ನೀರಾವರಿ ಯೋಜನೆಯಡಿ ಅನುದಾನ ನೀಡಲಾಗಿದೆ. ಈರುಳ್ಳಿ ಶೇಖರಣಾ ಘಟಕ ನಿರ್ಮಾಣಕ್ಕೆ 11 ಜನರಿಗೆ ಅನುದಾನ ನೀಡಲಾಗಿದೆ. ಅಧಿಕಾರಿಗಳು ಸಾಮಾಜಿಕ ಜಾಲತಾಣ ಬಳಸಿ ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸಬೇಕು ಎಂದರು.ಪಶುಗಳಿಗೆ ನೀಡಲಾಗುವ ಆಹಾರದಲ್ಲಿ ಕಲಬೆರಕೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಜಾನುವಾರಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಎಂದರು.
ಮಂಡ್ಯ ತಾಲೂಕು ವ್ಯಾಪ್ತಿಯಲ್ಲಿ ರೇಷ್ಮೆ ಕೃಷಿಗೆ ಬೇಡಿಕೆ ಹೆಚ್ಚಾಗಿದೆ. ತಾಲೂಕಿನ 68.37 ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಬೆಲ್ಲದ ಗುಣಮಟ್ಟ ಕಳಪೆಯಾಗಿದೆ ಎಂಬ ದೂರು ಕೇಳಿ ಬರುತ್ತಿವೆ. ಆಹಾರ ಸಂರಕ್ಷಣಾಧಿಕಾರಿ ವಿಶೇಷ ತಂಡ ರಚಿಸಿ ಜಿಲ್ಲೆಯ ಆಲೆಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಎಂದು ಸೂಚಿಸಿದರು.ಪದವಿ ಪಡೆದ 921 ಹಾಗೂ 25 ಡಿಪ್ಲೊಮಾ ಒಟ್ಟು 936 ನಿರುದ್ಯೋಗಿಗಳು ಯುವನಿಧಿ ಯೋಜನೆ ಪಡೆದುಕೊಳ್ಳುತ್ತಿದ್ದಾರೆ. ಯುವನಿಧಿ ಕುರಿತಾಗಿ ಎಲ್ಲಾ ಕಾಲೇಜುಗಳಲ್ಲಿ ಪ್ರಚಾರ ಮಾಡಬೇಕು. ಎಲ್ಲಾ ಯುವನಿಧಿ ಫಲಾನುಭವಿಗಳನ್ನು ಒಗ್ಗೂಡಿಸಿ ಅವರಿಗೆ ವಿವಿಧ ಕಾರ್ಯಾಗಾರಗಳನ್ನು ರೂಪಿಸಬೇಕು ಎಂದರು.ತಾಲೂಕಿನಲ್ಲಿ 18 ಹಾಸ್ಟೆಲ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಸುಮಾರು 1750 ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 2 ಬಾಲಕಿಯರ ಹಾಸ್ಟೆಲ್ ಕಾಮಗಾರಿ ನಡೆಯುತ್ತಿದೆ ಎಂದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುವ ಆಹಾರದ ಗುಣಮಟ್ಟದ ಕಳಪೆಯಾಗಿದೆ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಶೀಘ್ರವೇ ಪರಿಶೀಲಿಸಬೇಕು. ನಾನು ಸಹ ಪರೀಕ್ಷೆ ಮಾಡುತ್ತೇನೆ. ಅಧಿಕಾರಿಗಳು ಹಾಸ್ಟೆಲ್ ಗಳಿಗೆ ತಿಂಗಳಿಗೆ 2 ರಿಂದ 3 ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿ ಎಂದು ತಾಕೀತು ಮಾಡಿದರು.ಬ್ಯಾಂಕ್ ಗಳು ರೈತರಿಗೆ ಸಾಲ ಮರುಪಾವತಿ ಮಾಡುವಂತೆ ಒತ್ತಾಯ ಮಾಡುತ್ತಿವೆ. ಯಾವುದೇ ಬ್ಯಾಂಕ್ ಒತ್ತಾಯದಿಂದ ಸಾಲ ಮರುಪಾವತಿ ಮಾಡಿಸಿಕೊಂಡರೆ ಬ್ಯಾಂಕ್ ನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಎಲ್ಲೆಡೆ ಚಿರತೆ ಉಪಟಳ ಹೆಚ್ಚಾಗಿರುವುದರಿಂದ ರೈತರು ಆತಂಕಕ್ಕೀಡಾಗಿದ್ದಾರೆ. ಅಗತ್ಯವಿರುವ ಕಡೆ ಬೋನು ಇಟ್ಟು ಚಿರತೆ ಹಿಡಿಯಬೇಕು. ಜನ ಜಾನುವಾರುಗಳಿಗೆ ಹಾನಿಯಾಗದಂತೆ ಕ್ರಮ ವಹಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿ ಹೇಳಿದರು.ನ್ಯಾಷನಲ್ ಹೈವೇ ಬಳಿ ತಡರಾತ್ರಿಯಾದರೂ ಮದ್ಯ ಮಾರಾಟ ಮಾಡುತ್ತಿದ್ದಾರೆ. ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ, ತಡ ರಾತ್ರಿ ಮದ್ಯ ಮಾರಾಟ ಮಾಡುವವರ ಲೈಸೆನ್ಸ್ ಅನ್ನು ರದ್ದು ಗೊಳಿಸಬೇಕು ಎಂದರು.
ಸಭೆಯಲ್ಲಿ ತಾಲೂಕು ಆಡಳಿತಾಧಿಕಾರಿ ಶಿವಲಿಂಗಯ್ಯ, ತಹಸೀಲ್ದಾರ್ ವಿಶ್ವನಾಥ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರುದ್ರಪ್ಪ, ಡಿ.ವೈ.ಎಸ್ಪಿ ಲಕ್ಷಿ ನಾರಾಯಣ್, ತಾಪಂ ಲೋಕೇಶ್ ಮೂರ್ತಿ, ಯೋಜನಾಧಿಕಾರಿ ವೆಂಕಟರಾವ್ ಸೇರಿದಂತೆ ಹಗಲು ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))