ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಅಪೌಷ್ಟಿಕತೆ, ರಕ್ತಹೀನತೆ ಕೊರತೆ ನೀಗಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಯೋಜನೆ ರೂಪಿಸಿದೆ. ಅವುಗಳನ್ನು ಸರಿಯಾಗಿ ಕಾರ್ಯರೂಪಕ್ಕೆ ತರುವ ಮೂಲಕ ತಾಯಿ ಮರಣ ಸಂಭವಿಸದಂತೆ ನೋಡಿಕೊಳ್ಳಬೇಕೆಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಜಿಪಂ ಸಭಾಭವನದಲ್ಲಿ ಶನಿವಾರ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೌಷ್ಟಿಕತೆಯ ಬಗ್ಗೆ ಆಶಾ ಕಾರ್ಯಕರ್ತೆಯರ ಸಭೆಯಲ್ಲಿ ತಿಳಿಸಿ, ಗರ್ಭಿಣಿ ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರದಂತೆ ಆಶಾ ಕಾರ್ಯಕರ್ತೆಯರು ನಿಗಾವಹಿಸಬೇಕು. ಶಾಲಾ ದಾಖಲಾತಿ, ಆಧಾರ್ ಕಾರ್ಡ್, ತಾಯಿ ಕಾರ್ಡ್ ನೀಡಿ ಬಾಲ್ಯ ವಿವಾಹ ನಡೆಯದಂತೆ ನೋಡಿಕೊಳ್ಳಬೇಕು. ಬಾಲ್ಯ ವಿವಾಹ ನಡೆಯುತ್ತಿದ್ದಲ್ಲಿ ವಿವಿಧ ಇಲಾಖೆಯ ಜೊತೆ ಜಂಟಿಯಾಗಿ ನಿಲ್ಲಿಸುವ ಕಾರ್ಯವಾಗಬೇಕು ಎಂದು ಸಲಹೆ ನೀಡಿದರು.
ಅವಶ್ಯಕತೆಗೆ ಅನುಗುಣವಾಗಿ ಔಷಧಿ ಇಂಡೆಂಟ್ ನೀಡಬೇಕು. ಹೆಚ್ಚುವರಿಯಾಗಿ ಖರೀದಿಸಿದ ಔಷಧಿಯನ್ನು ಇ-ಔಷಧಿ ಪೋರ್ಟಲ್‌ನಲ್ಲಿ ದಾಖಲು ಮಾಡಲು ಸೂಚಿಸಿದರು. ತಾಲೂಕು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸರಿಯಾದ ಸರಿಯಾದ ಸಮಯಕ್ಕೆ ಬರುತ್ತಿರುವ ಬಗ್ಗೆ ಮೇಲಧಿಕಾರಿಗಳು ನಿಗಾವಹಿಸಬೇಕು. ಪ್ರತಿದಿನ ಹಾಜರಾತಿ ವಿಶ್ಲೇಷಣೆ ಮಾಡಬೇಕು. ಸರಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಆಗಾಗ್ಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಂದಾಗ ಮಾತ್ರ ಸುಧಾರಣೆ ತರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ರಾಷ್ಟ್ರೀಯ ಟಿಬಿ ನಿರ್ಮೂಲನೆ ಯೋಜನೆಯಡಿ ಜಿಲ್ಲೆಯಲ್ಲಿ ಈಗಾಗಲೇ 27 ಗ್ರಾಮಗಳನ್ನು ಟಿಬಿ ಮುಕ್ತ ಗ್ರಾಮಗಳನ್ನಾಗಿ ಘೋಷಿಸಲಾಗಿದೆ. ಇನ್ನೂ 64 ಗ್ರಾಮಗಳನ್ನು ಘೋಷಿಸಲು ಶಿಫಾರಸ್ಸು ಮಾಡಲಾಗುತ್ತಿದೆ. ಗ್ರಾಮಗಳಲ್ಲಿ ಪರೀಕ್ಷೆ ಗುಣಮಟ್ಟದಿಂದ ಕೂಡಿರಬೇಕು. ಟಿಬಿ ಮುಕ್ತ ಗ್ರಾಮ ಎಂದು ಘೋಷಿಸಿದ ಮೇಲೆ ಪ್ರಕರಣಗಳು ಕಂಡುಬರಬಾರದು. ಆ ನಿಟ್ಟಿನಲ್ಲಿ ಕೆಲಸ ಆಗಬೇಕು. ಗೃಹ ಆರೋಗ್ಯ ಯೋಜನೆಯಡಿ ಗ್ರಾಮೀಣ ಪ್ರದೇಶದ ಮನೆ ಮನೆಗೆ ತೆರಳಿ 30 ಮೇಲ್ಪಟ್ಟವರಿಗೆ 14 ಅಸಾಂಕ್ರಾಮಿಕ ರೋಗಗಳನ್ನು ಪತ್ತೆ ಹಚ್ಚಿ ಉಚಿತವಾಗಿ ಔಷಧಿ ವಿತರಣೆ ನೀಡುವ ಕಾರ್ಯ ಸರಿಯಾಗಿ ನಡೆಯಬೇಕಿದೆ ಎಂದು ಹೇಳಿದರು.
ಮನೆ ಮನೆಗೆ ತೆರಳಿದ ಸಂದರ್ಭದಲ್ಲಿ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಗಳ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಂಜುನಾಥ ಡಿ.ಎನ್., ಜಿಲ್ಲಾ ಶಸ್ತ್ರ ಚಿಕಿತ್ಸಕ ಮಹೇಶ ಕೋನಿ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ರಾಜಕುಮಾರ ಯರಗಲ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಎಸ್.ಜಿ. ಮಠ ಸೇರಿದಂತೆ ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ತಾಲೂಕು ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಜಿಲ್ಲೆಯಲ್ಲಿ ಮಾರಾಟ ಮಾಡುವ ಅಂಗಡಿಗಳ ಮೇಲೆ ಹೆಚ್ಚಿನ ದಾಳಿ ನಡೆಸಬೇಕು. ಶಾಲೆ ಮತ್ತು ಕಾಲೇಜುಗಳಿಗೆ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಹಾಗೂ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟವಾಗುವುದನ್ನು ತಡೆಯುವ ಕಾರ್ಯವಾಗಬೇಕು.
- ಶಶಿಧರ ಕುರೇರ ಜಿಪಂ ಸಿಇಓ