ಬಿಳುವಾಲ ಗ್ರಾಮದಲ್ಲಿ ಗ್ರಾಪಂ ವ್ಯಾಪ್ತಿಯ ಜನಸಂಪರ್ಕ ಸಭೆ
ಕನ್ನಡಪ್ರಭ ವಾರ್ತೆ, ಕಡೂರುಕಚೇರಿಗಳಿಗೆ ಬರುವ ಜನ ಸಾಮಾನ್ಯರು ಮತ್ತು ಬಡವರಿಗೆ ಆಗಬೇಕಾದ ಕೆಲಸಗಳನ್ನು ಸತಾಯಿಸದೆ ಮಾಡಿಕೊಟ್ಟರೆ ಯಾವ ಕೆಲಸಗಳು ಕಠಿಣವಾಗುವುದಿಲ್ಲ ಎಂದು ಶಾಸಕ ಕೆ.ಎಸ್.ಆನಂದ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಾಲೂಕಿನ ಬಿಳುವಾಲ ಗ್ರಾಮದಲ್ಲಿ ಶನಿವಾರ ಗ್ರಾಪಂ ವ್ಯಾಪ್ತಿಯ ಶಾಸಕರ ಜನಸಂಪರ್ಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ಅಧಿಕಾರಿಗಳು ದೊರಕಿಸಬಹುದಾದ ಬಿಳುವಾಲ, ನಾಗಗೊಂಡನಹಳ್ಳಿ, ಕಲ್ಲಾಪುರ, ಇಂದಿರಾನಗರ ಸೇರಿದಂತೆ ಸುಮಾರು 400 ಕ್ಕೂ ಹೆಚ್ಚು ಮನೆಗಳಿಗೆ ಇ-ಸ್ವತ್ತು ದೊರಕಿಸಿಕೊಡಲು ಸಾಧ್ಯವಾಗಿಲ್ಲ ಅನೇಕ ವರ್ಷಗಳಿಂದ ಗ್ರಾಮದಲ್ಲಿ ಹಿಂದುಳಿದ ವರ್ಗದವರು ಹೆಚ್ಚಾಗಿದ್ದು ಈವರೆಗೂ ಇ-ಸ್ವತ್ತು ನೀಡಲಾಗಿಲ್ಲ. ಇ-ಸ್ವತ್ತಿಗಾಗಿಯೇ ಸರಣಿ ಸಭೆಗಳನ್ನು ನಡೆಸಿ ಎಚ್ಚರಿಸಿದರೂ ಪಟ್ಟಿ ಸೇರಿಸಲು ವಿಳಂಬ ಧೋರಣೆ ಅನುಸರಿಸಲಾಗಿದೆ.ಎಲ್ಲದಕ್ಕೂ ಪ್ರಸ್ತಾವನೆ ಎಂಬ ಸಬೂಬು ಉತ್ತರ ಬರುತ್ತದೆ. ಮೊದಲು ಕಂದಾಯ ಮತ್ತು ಗ್ರಾಮ ಲೆಕ್ಕಿಗರು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಇ-ಸ್ವತ್ತು ಒದಗಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಸೂಚಿಸಿದರು.ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪೌತಿ ಖಾತೆ ಅಂದೋಲನ ನಡೆಸುತ್ತಿದೆ. ಆದರೆ ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷದಿಂದ ಪೌತಿಖಾತೆ ಕೆಲಸಗಳು ಸರಿಯಾಗಿ ಆಗುತ್ತಿಲ್ಲ. ಪಂಚಾಯಿತಿ ವ್ಯಾಪ್ತಿಯಲ್ಲೇ 1300 ಕ್ಕೂ ಅರ್ಜಿಗಳು ಬಾಕಿ ಉಳಿದಿವೆ. ಸರಕಾರದ ಡೆಡ್ ಲೈನ್ ನಿಗಧಿಪಡಿಸುವ ಮುನ್ನವೇ ಪೌತಿ ಖಾತೆ ನಿರೀಕ್ಷಿತಗುರಿ ಸಾಧಿಸಬೇಕು ಎಂದರು.ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಮಾತನಾಡಿ, ಇ-ಸ್ವತ್ತು ಒದಗಿಸುವ ಪ್ರಕರಣದಲ್ಲಿ ಕಂದಾಯಾಧಿಕಾರಿಗಳಿಗೆ ಸೂಚನೆ ನೀಡಿ ಇ-ಸ್ವತ್ತು ದೊರಕಿಸಲು ನಿವೇಶನದಾರರ ಪಟ್ಟಿ ಸಿದ್ಧ ಪಡಿಸಲಾಗಿದೆ. ಇಲ್ಲಿನ ವರದಿ ಕಳೆದ ತಿಂಗಳು ಸಲ್ಲಿಕೆಯಾಗಿದೆ. ತರೀಕೆರೆ ಎ.ಸಿ. ಅವರ ಮೂಲಕ ನೋಟಿಫಿಕೇಷನ್ ಸಿದ್ದಪಡಿಸಿ 10 ದಿನಗಳೊಳಗಾಗಿ ನಿವೇಶನದಾರರಿಗೆ ಇ-ಸ್ವತ್ತು ದೊರಕಿಸಲು ಒತ್ತುಕೊಡಲಾಗುವುದು ಎಂದರು.. ಗ್ರಾಮದ ಸರ್ವೆ ನಂ 34ರಲ್ಲಿ ಸ್ಮಶಾನಕ್ಕಾಗಿ ಜಾಗವನ್ನು ಕಾಯ್ದಿರಿಸಿಕೊಟ್ಟರೆ, ಗ್ರಾಮಸ್ಥರಿಗೆ ಶವ ಸಂಸ್ಕಾರದ ಕಾರ್ಯ ಗಳಿಗೆ ಸಹಕಾರಿಯಾಗಲಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದರು. ಸರ್ವೆ.ನಂ 34 ಜಾಗ ಈಗಾಗಲೇ ಅಮೃತ್ ಮಹಲ್ ಪ್ರದೇಶದ ವ್ಯಾಪ್ತಿಯಲ್ಲಿದೆ. ಯಾವುದೇ ಕಾರಣಕ್ಕೂ ಜಾಗ ಗುರುತಿಸಲು ಸಾಧ್ಯವಿಲ್ಲ ಎಂದು ತಹಸೀಲ್ದಾರ್ ಪೂರ್ಣಿಮಾ ಉತ್ತರಿಸಿದರು. ಇದಕ್ಕೆ ಶಾಸಕ ಕೆ.ಎಸ್. ಆನಂದ್ ಮಾತನಾಡಿ, ಪ್ರಸ್ತುತ ಸರ್ವೆ ನಂ 26ರ ಸುಮಾರು 52 ಎಕರೆ ಗೋಮಾಳ ಜಾಗದಲ್ಲಿ ಜಂಟಿ ಸರ್ವೆ ನಡೆಸಿ ಅವರ ಬೇಡಿಕೆ ಪರಿಗಣಿಸಿ ಮೂಲ ದಾಖಲಾತಿ ಪಹಣಿ ಗಮನಿಸಿ ಅರಣ್ಯ ಜಾಗ ಬೇರ್ಪಡಿಸಿ ದಾಗ ಬದಲಿ ವ್ಯವಸ್ಥೆ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸೂಚನೆ ನೀಡಿದರು. ಕಲ್ಲಾಪುರ ಭಾಗದಲ್ಲಿ ರಾತ್ರಿ ವೇಳೆ ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದೆ ತೋಟದ ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯ ವಾಗುತ್ತಿಲ್ಲ ಎಂದು ಕಲ್ಲಾಪುರ ಗ್ರಾಮದ ಭಾಷಾ ದೂರಿದರು. ಫೀಡರ್ ಓವರ್ ಲೋಡ್ ಸಮಸ್ಯೆಯಿಂದ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಬದಲಿ ವ್ಯವಸ್ಥೆಗೆ ಕ್ರಮ ವಹಿಸಲಾಗುವುದು ಎಂದು ಮೆಸ್ಕಾಂ ಗ್ರಾಮಾಂತರ ಎಂಜಿನಿಯರ್ ಬಸವರಾಜಪ್ಪ ತಿಳಿಸಿದರು.ವಸತಿ ಯೋಜನೆಯಡಿ ಮನೆಗಳನ್ನು ಮಂಜೂರು ಮಾಡುವಂತೆ ಹಂಗಾಮಿ ಸಾಗುವಳಿ ಚೀಟಿ ಖಾಯಂಗೊಳಿಸುವಂತೆ ಅರ್ಜಿಗಳು ಸಲ್ಲಿಕೆಯಾದವು. ಈ ಸಂದರ್ಭದಲ್ಲಿ ಗ್ರಾಮದ ಪ್ರೌಢಶಾಲೆಗೆ ಸ್ಮಾರ್ಟ್ ಕ್ಲಾಸ್ ಕೊಠಡಿಯನ್ನು ಶಾಸಕರು ಉದ್ಘಾಟಿಸಿದರು. ತಾಪಂ ಇಒ ಸಿ.ಆರ್.ಪ್ರವೀಣ್, ಗ್ರಾಪಂ ಆಡಳಿತಾಧಿಕಾರಿ ಸಿಡಿಪಿಒ ಶಿವಪ್ರಕಾಶ್, ಗ್ಯಾರಂಟಿ ಸಮಿತಿ ಸದಸ್ಯ ಸಪ್ತಕೋಟಿ ಧನಂಜಯ್, ಗುಜ್ಜೇನಹಳ್ಳಿ ತಿಪ್ಪೇಶಪ್ಪ ಗ್ರಾಮಸ್ತರು ಮತ್ತಿತರರು ಇದ್ದರು.
18ಕೆಕೆಡಿಯು4. ಕಡೂರು ತಾಲೂಕಿನ ಬಿಳುವಾಲ ಗ್ರಾಮದಲ್ಲಿ ನಡೆದ ಶಾಸಕರ ಜನ ಸಂಪರ್ಕ ಸಭೆಯನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ಸಿ.ಎಸ್.ಪೂರ್ಣಿಮಾ, ಸಿ.ಆರ್.ಪ್ರವೀಣ್, ಧನಂಜಯ್, ತಿಪ್ಪೇಶಪ್ಪ ಶಿವಪ್ರಕಾಶ್ ಇದ್ದರು.