ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ ಸಮುದಾಯದ ಸಮೀಪ ಪೆಟ್ಟಿ ಅಂಗಡಿಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡರು ಒತ್ತಾಯಿಸಿದರು.ಪಟ್ಟಣದ ಡಾ.ಬಿ.ಅರ್.ಅಂಬೇಡ್ಕರ್ ಭವನದಲ್ಲಿ ಮಳವಳ್ಳಿ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿಯಿಂದ ನಡೆದ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಪಂಗಡಗಳ ಕುಂದೂಕೊರತೆ ಸಭೆಯಲ್ಲಿ ಗಮನ ಸೆಳೆದರು.
ದಲಿತ ಬಡಾವಣೆಗಳಲ್ಲಿ ಹೆಚ್ಚುತ್ತಿರುವ ಅಕ್ರಮ ಮದ್ಯಮಾರಾಟ ತಡೆಯಬೇಕು, ದಲಿತರ ಬೀದಿ, ಜಮೀನುಗಳ ರಸ್ತೆ ಒತ್ತುವರಿ ತೆರವು, ದೇವಸ್ಥಾನ ಹೋಟೆಲ್‌ಗಳಲ್ಲಿ ಈಗಲೂ ಅಸ್ಪೃಶ್ಯತೆ ಆಚರಣೆ ಜೀವಂತ, ಇವುಗಳ ತಡೆಯುವಂತೆ ಒತ್ತಾಯಿಸಿದರು.ಮುಖಂಡ ಮಾರ್ಕಾಲು ಮಾಧು ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಿಂದ ದಲಿತರು ಪ್ರಶ್ನೆ ಮಾಡುವ ಹಂತದಲ್ಲಿ ಬದುಕುತ್ತಿದ್ದೇವೆ. ಎಲ್ಲಲೂ ಒಗ್ಗಟ್ಟಿನಿಂದ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಚರ್ಚೆ ಮಾಡಬೇಕೆ ಹೊರತು ನಮ್ಮಲ್ಲಿಯೇ ಭಿನ್ನಾಭಿಪ್ರಾಯ ಮಾಡಬಾರದೆಂದು ಸಲಹೆ ನೀಡಿದರು.
ಅಕ್ರಮ ಮದ್ಯ ಮಾರಾಟ ಹೆಚ್ಚಾಗುತ್ತಿರುವುದರಿಂದ ಸಭೆಗೆ ಅಬಕಾರಿ ಅಧಿಕಾರಿಗಳನ್ನು ಕರೆಸಬೇಕು. ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಅಕ್ರಮ ಮದ್ಯ ಮಾರಾಟಗಾರರ ನಡುವೆ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಹಳ್ಳಿಗಳಲ್ಲಿ ಯಾವುದೇ ಭಯವಿಲ್ಲದೇ ಮದ್ಯ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳು ಗಮನ ನೀಡಬೇಕು ಎಂದು ಆಗ್ರಹಿಸಿದರು.ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರಸ್ವಾಮಿ ಮಾತನಾಡಿ, ದೂರು ಪ್ರತಿದೂರಿಗೆ ಸಂಬಂಧಿಸಿದಂತೆ ಯಾರೇ ದೂರು ನೀಡಿದರೂ ಅದನ್ನು ಸ್ವೀಕರಿಸುವುದು ಪೊಲೀಸ್ ಅಧಿಕಾರಿಗಳ ಕರ್ತವ್ಯವಾಗಿದೆ. ಎರಡು ದೂರಿನ ಬಗ್ಗೆ ಕೂಲಂಕುಶ ತನಿಖೆ ನಡೆಸಿ ದೌರ್ಜನ್ಯಕ್ಕೆ ಒಳಗಾದವರಿಗೆ ಸೂಕ್ತ ನ್ಯಾಯ ದೊರಕಿಸಿಕೊಡುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಹಲವು ಗ್ರಾಮಗಳಿಂದ ಆಗಮಿಸಿದ್ದ ಮುಖಂಡರು ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ಡಿವೈಎಸ್ಪಿ ಯಶವಂತ್ ಕುಮಾರ್ ಮಾತನಾಡಿ, ಮುಖಂಡರು ಪ್ರಸ್ತಾಪಿಸಿರುವ ಸಮಸ್ಯೆಗಳ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.ಸಭೆಯಲ್ಲಿ ಸಿಪಿಐ ಶ್ರೀಧರ್, ರವಿಕುಮಾರ್, ಪಿಎಸ್ ಐ ಲೋಕೇಶ್, ಪ್ರಕಾಶ್, ರವಿಕುಮಾರ್, ಸೇರಿದಂತೆ ಹಲವಾರು ದಲಿತ ಮುಖಂಡರು ಹಾಜರಿದ್ದರು. ಇದಕ್ಕೂ ಮುನ್ನ ಪೊಲೀಸ್ ಅಧಿಕಾರಿಗಳು, ಮುಖಂಡರು ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಬುದ್ದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
;Resize=(128,128))