ಸಾರಾಂಶ
ರಾಷ್ಟ್ರಮಟ್ಟದಲ್ಲಿ ಕರ್ನಾಟಕ ತಂಡ ಇಲ್ಲಿಯ ವರೆಗೆ ತನ್ನದೇ ಆದ ಸ್ಥಾನ ಕಾಯ್ದುಕೊಂಡು ಬಂದಿದ್ದು
ನರೇಗಲ್ಲ: ಕ್ರೀಡೆಯಲ್ಲಿ ಏಕಾಗ್ರತೆ, ಸಮನ್ವಯತೆ ಇದ್ದಾಗ ಮಾತ್ರ ಜಯ ನಮ್ಮದಾಗಿಸಿಕೊಳ್ಳಲು ಸಾಧ್ಯ. ಆ ನಿಟ್ಟಿನಲ್ಲಿ ತಾವೆಲ್ಲರೂ ಸಂಘಟಾತ್ಮಕವಾಗಿ ತಮಿಳುನಾಡಿನ ಎರೋಡಾದಲ್ಲಿ ಜರುಗುವ 25ನೇ ರಾಷ್ಟ್ರೀಯ ಅಟ್ಯಾಪಟ್ಯಾ ಕ್ರೀಡೆಯಲ್ಲಿ ಭಾಗವಹಿಸಿ ರಾಜ್ಯದ ಕೀರ್ತಿ ಬೆಳಗಿಸಬೇಕು ಎಂದು ರೋಣ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಆರ್.ಎಸ್. ನರೇಗಲ್ಲ ಹೇಳಿದರು.
ಅವರು ಸ್ಥಳೀಯ ಚೈತನ್ಯ ಕ್ರೀಡಾ ಸಂಸ್ಥೆಯ ನೇತೃತ್ವದಲ್ಲಿ ಅ. 25 ರಿಂದ ನ. 6ರ ವರೆಗೆ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಜರುಗಿದ ಕರ್ನಾಟಕ ತಂಡದ ಬಾಲಕಿಯರ ಜೂನಿಯರ್ ಅಟ್ಯಾಪಟ್ಯಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ರಾಷ್ಟ್ರಮಟ್ಟದಲ್ಲಿ ಕರ್ನಾಟಕ ತಂಡ ಇಲ್ಲಿಯ ವರೆಗೆ ತನ್ನದೇ ಆದ ಸ್ಥಾನ ಕಾಯ್ದುಕೊಂಡು ಬಂದಿದ್ದು, ತಾವು ಅದೇ ರೀತಿ ನ. 8 ರಿಂದ 10 ರ ವರೆಗೆ ಜರುಗುವ ಕ್ರೀಡೆಯಲ್ಲಿ ಜಯಗಳಿಸುವಂತಾಗಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಚೈತನ್ಯ ಕ್ರೀಡಾ ಸಂಸ್ಥೆಯ ಅಧ್ಯಕ್ಷ ಎನ್.ಕೆ. ಬೇವಿನಕಟ್ಟಿ ಮಾತನಾಡಿ, ಕ್ರೀಡಾಪಟುಗಳಲ್ಲಿ ಕ್ರೀಡಾ ಮನೋಭಾವನೆ ಮುಖ್ಯ, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ತಾವು ಎದುರಾಳಿ ತಂಡದ ವಿರುದ್ಧ ಆಡುವಾಗ ಆತ್ಮವಿಶ್ವಾಸ ಕಳೆದುಕೊಳ್ಳದೇ ತಂಡದ ಎಲ್ಲ ಸದಸ್ಯರು ಸಂಘಟಾತ್ಮಕವಾಗಿ ಆಡುವ ಮೂಲಕ ಗೆಲುವಿನ ನಗೆ ಬೀರಬೇಕು ಎಂದರು.ಚೈತನ್ಯ ಕ್ರೀಡಾ ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ಕ್ರೀಡಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಇದರಡಿಯಲ್ಲಿ ಹಲವಾರು ಕ್ರೀಡಾಪಟುಗಳು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಕ್ರೀಡಾ ಪ್ರದರ್ಶನ ತೋರುವ ಮೂಲಕ ತಮ್ಮ ಶೈಕ್ಷಣಿಕ ಹಾಗೂ ಉದ್ಯೋಗಾವಕಾಶ ಪಡಿದುಕೊಂಡಿದ್ದಾರೆ ಅದರಂತೆ ತಾವುಗಳು ಅದರ ಸೌಲಭ್ಯ ಪಡೆದುಕೊಳ್ಳಿ ಎಂದರು.
ಈ ವೇಳೆ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಯ ನಿಡಗುಂದಿ ಮಾತನಾಡಿದರು. ಮುಖ್ಯ ತರಬೇತುದಾರ ಮಹಮ್ಮದ ರಫೀಕ ರೇವಡಿಗಾರ, ಸಂಪನ್ಮೂಲ ವ್ಯಕ್ತಿ ಶಿಕ್ಷಕ ವಿ.ಎ. ಕುಂಬಾರ, ಆನಂದ ಕೊಂಡಿ, ಅಂಚಡಗೇರಿಯ ತರಬೇತುದಾರ ರವಿಕುಮಾರ, ಗೌರವ ಸಲಹೆಗಾರ ಉಮೇಶ ನವಲಗುಂದ, ಸಂಸ್ಥೆಯ ಕಾರ್ಯದರ್ಶಿ ಸಂತೋಷ ಯಳಮಲಿ, ರವಿ ಹೊನವಾಡ ಸೇರಿದಂತೆ ಹಲವಾರು ಇದ್ದರು.