ನೀರಿನ ಸಮಸ್ಯೆ ಬಾರದಂತೆ ಮುನ್ನೆಚ್ಚರಿಕೆ ಕ್ರಮವಹಿಸಿ

| Published : Mar 28 2024, 12:48 AM IST

ಸಾರಾಂಶ

ಬೇಸಿಗೆ ಆರಂಭವಾಗಿರುವುದರಿಂದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ತಾಲೂಕು ಪಂಚಾಯಿತಿ ಇಒ ಪ್ರಕಾಶ್‌ ಹೇಳಿದರು.

ಮೊಳಕಾಲ್ಮುರು: ಬೇಸಿಗೆ ಆರಂಭವಾಗಿರುವುದರಿಂದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ತಾಲೂಕು ಪಂಚಾಯಿತಿ ಇಒ ಪ್ರಕಾಶ್‌ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಕುಡಿಯುವ ನೀರಿನ ವಿಚಾರವಾಗಿ ನಡೆದ ವಿವಿಧ ಇಲಾಖೆ ಅಧಿಕಾರಿಗಳ ತುರ್ತು ಸಭೆಯಲ್ಲಿ ಮಾತನಾಡಿದರು.

ತಾಲೂಕಿಗೆ ಎದುರಾಗಿರುವ ತೀವ್ರ ಬರಗಾಲದಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು. ಸಂಬಂಧಿಸಿದ ಪಿಡಿಒಗಳು ಕೇಂದ್ರ ಸ್ಥಾನದಲ್ಲಿದ್ದು ಎದುರಾಗಬಹುದಾದ ಕುಡಿಯುವ ನೀರಿನ ಸಮಸ್ಯೆಗಳನ್ನು ಪರಿಹರಿಸಬೇಕು. ಎಲ್ಲಿಯೂ ನೀರಿನ ಕೊರತೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸಾರ್ವಜನಿಕರಿಗೆ ನೆರವಾಗಬೇಕು. ದೂರುಗಳು ಬಂದಲ್ಲಿ ನೀವೇ ಹೊಣೆಗಾರರಾಗುತ್ತೀರಿ ಎಂದು ಪಿಡಿಒಗಳಿಗೆ ಎಚ್ಚರಿಸಿದರು.

ಕುಡಿಯುವ ನೀರು ಕಡಿಮೆಯಾಗಿರುವ ಹಳ್ಳಿಗಳನ್ನು ಪಟ್ಟಿ ಮಾಡಿ ತುರ್ತು ಕ್ರಮಕೈಗೊಳ್ಳಬೇಕು. ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿದ್ದರೆ ಹೆಚ್ಚುವರಿ ಪೈಪ್‌ಗಳನ್ನು ಇಳಿಸಬೇಕು. ಅದಕ್ಕೂ ನೀರು ಬಾರದಿದ್ದಲ್ಲಿ ಬೋರ್ ಕೊರೆಸಬೇಕು. ಜತೆಗೆ ಸ್ಥಳೀಯವಾಗಿ ಹಳ್ಳಿಗೆ ಹತ್ತಿರವಿರುವ ರೈತರ ಕೊಳವೆ ಬಾವಿಗಳನ್ನು ಬಳಸಿಕೊಂಡು ನೀರು ಸರಬರಾಜು ಮಾಡಬೇಕು ಎಂದರು.

ಬೇಸಿಗೆ ಆರಂಭಗೊಂಡಿದ್ದು, ಬಿಸಿಲಿನ ತಾಪಮಾನ ಹೆಚ್ಚುತ್ತಿದೆ. ಅಗತ್ಯ ಇರುವ ಕಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು. ಈಗಾಗಲೇ ಟ್ಯಾಂಕರ್ ನೀರು ಸರಬರಾಜಿಗೆ ಆದೇಶ ಸಿಕ್ಕಿದ್ದು, ತೀರಾ ನೀರಿನ ಕೊರತೆ ಕಂಡುಬರುವ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಸರಬರಾಜು ಮಾಡಲು ಕ್ರಮ ವಹಿಸಬೇಕೆಂದು ತಾಕೀತು ಮಾಡಿದರು.

ಏಪ್ರಿಲ್ ಅಂತ್ಯದೊಳಗೆ ಮಳೆ ಬಾರದಿದ್ದಲ್ಲಿ ಕೋನಸಾಗರ, ಬಸಾಪುರ, ಮಲ್ಲೇಹರಿವು, ರಾಯಾಪುರ ಮ್ಯಾಸರಹಟ್ಟಿ, ಸಿದ್ದಯ್ಯನ ಕೋಟೆ, ನೇರ್ಲಹಳ್ಳಿ, ಗುಂಡ್ಲೂರು, ಬೊಮ್ಮದೇವರ ಹಳ್ಳಿ, ರಾಜಾಪುರ, ಬೊಮ್ಮಕ್ಕನ ಹಳ್ಳಿ, ಚಿಕ್ಕೋಬನಹಳ್ಳಿ, ಚಿಕ್ಕುಂತಿ, ತುಮಕೂರ್ಲಹಳ್ಳಿ, ರಾಮಸಾಗರ, ಚಿಕನ್ನಹಳ್ಳಿ, ವೀರಾಪುರ, ತಳವಾರಹಳ್ಳಿ, ಪೂಜಾರಹಟ್ಟಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎನ್ನುವ ಮಾಹಿತಿ ಇದ್ದು ಸಂಬಂಧಿಸಿದ ಪಂಚಾಯಿತಿ ಪಿಡಿಒಗಳು ಈ ಕುರಿತು ಮುನ್ನೆಚ್ಚರಿಕೆ ಕ್ರಮವಹಿಸುವಂತೆ ತಿಳಿಸಿದರು.

ಈ ವೇಳೆ ನೀರು ಸರಬರಾಜು ಇಲಾಖೆಯ ಎಇಇ ಹರೀಶ, ಜಿಪಂ ಎಇಇ ನಾಗನಗೌಡ, ಎಡಿ ಯಶವಂತ, ವ್ಯವಸ್ಥಾಪಕ ನಂದೀಶ ಇದ್ದರು.