ಮಂಗಳೂರು: ಭಾರಿ ಮಳೆ ಪ್ರವಾಹದಿಂದಾಗಿ ರಸ್ತೆ ಹಾನಿ, ಗುಡ್ಡ ಕುಸಿತ, ಮನೆ ಕುಸಿತದಂತಹ ಅಹಿತಕರ ಘಟನೆಗಳು ಸಂಭವಿಸುತ್ತಿದ್ದು, ಮೂಲ ಸೌಕರ್ಯಗಳಿಗೆ ಹಾನಿಯಾಗುವ ಸಾಧ್ಯತೆ ಇರುವುದರಿಂದ, ಮಳೆಗಾಲದಲ್ಲಿ ಯಾವುದೇ ರೀತಿಯ ಅವಘಡಗಳಾಗದಂತೆ ಇಲಾಖೆಗಳು ಸನ್ನದ್ಧರಾಗಿರಬೇಕು. ಕಳೆದ ಬಾರಿ ಹೆಚ್ಚಿನ ಪ್ರವಾಹ ಬಂದಿರುವ ಪ್ರದೇಶಗಳಲ್ಲಿ ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಸೂಚಿಸಿದರು.ಅವರು ಸೋಮವಾರ ಮಂಗಳೂರು ಮಹಾನಗರಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ನಡೆದ ಮುಂಗಾರು ಪೂರ್ವ ಸಿದ್ಧತೆ ಕುರಿತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಳೆಗಾಲದ ಸಂದರ್ಭದಲ್ಲಿ ಮರಗಳು ಬಿದ್ದು ವಿದ್ಯುತ್ ಸ್ಥಗಿತಗೊಂಡರೆ ತಕ್ಷಣವೇ ಪುನರ್ ಸಂಪರ್ಕ ಬಗ್ಗೆ ಕ್ರಮ ಕೈಗೊಳ್ಳಬೇಕು. ತುರ್ತು ಕೆಲಸಗಳ ನಿರ್ವಹಣೆಗಾಗಿ ಕಂಟ್ರೋಲ್ ರೂಮ್ ತೆರೆದು ದೂರವಾಣಿ ಸಂಖ್ಯೆಯನ್ನು ಸಾರ್ವಜನಿಕರಿಗೆ ತಿಳಿಸಬೇಕು. ವಿದ್ಯುತ್ ತಂತಿಗಳ ಮೇಲೆ ಅಪಾಯಕಾರಿ ಮರದ ಕೊಂಬೆಗಳನ್ನು ಕಡಿಯಲು ಕ್ರಮವಹಿಸಬೇಕು ಎಂದು ಅವರು ಮೆಸ್ಕಾಂ ಇಲಾಖೆಗೆ ಸೂಚಿಸಿದರು.ನಗರ ಸ್ಥಳೀಯ ಸಂಸ್ಥೆಗಳು ಎಲ್ಲಾ ನಗರ/ಸ್ಥಳೀಯ ಪ್ರದೇಶ ವ್ಯಾಪ್ತಿಗಳಲ್ಲಿ ಚರಂಡಿಗಳನ್ನು ಸ್ವಚ್ಚಗೊಳಿಸಿ ನೀರು ಸರಾಗವಾಗಿ ಹರಿದು ಹೋಗಲು ಕ್ರಮಕೈಗೊಳ್ಳಬೇಕು. ಮಳೆಗಾಲದಲ್ಲಿ ಸ್ವಚ್ಚತೆಯನ್ನು ಕಾಪಾಡಿ ರೋಗರುಜಿನಗಳು ಹರಡದಂತೆ ಎಚ್ಚರಿಕೆ ವಹಿಸಬೇಕು. ಭಾರಿ ಮಳೆ ಸಂದರ್ಭದಲ್ಲಿ ಕಂಟ್ರೋಲ್ ರೂಂಗಳನ್ನು ದಿನದ 24 ಗಂಟೆ ತೆರೆದಿರಬೇಕು. ಶಾಲೆಗಳ ಪಕ್ಕದಲ್ಲಿರುವ ಅಪಾಯಕಾರಿ ಕೆರೆಕಟ್ಟೆ, ಗುಂಡಿಗಳ ಸ್ಥಳಗಳಿಗೆ ರೆಡ್ ರಿಬ್ಬನ್ ಕಟ್ಟಿ, ಮಕ್ಕಳು ಅಪಾಯಕಾರಿ ಸ್ಥಳಗಳತ್ತ ಹೋಗದಂತೆ ಶಿಕ್ಷಣ ಇಲಾಖೆ ಅಗತ್ಯ ಕ್ರಮ ವಹಿಸಬೇಕು. ಪೋಷಕರ ಸಭೆ ಕರೆದು ಮಕ್ಕಳ ಸುರಕ್ಷತೆಯ ಬಗ್ಗೆ ಸೂಚನೆ ನೀಡಬೇಕು. ಪ್ರವಾಹ ತುರ್ತು ಸಂದರ್ಭಗಳಲ್ಲಿ ಅಗತ್ಯವಿದ್ದಾಗ ಕಾಳಜಿ ಕೇಂದ್ರಗಳ ಸ್ಥಾಪನೆ ವ್ಯವಸ್ಥೆಗೆ ಸೂಕ್ತ ಶಾಲಾ ಕಟ್ಟಡಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.ಅಗ್ನಿ ಶಾಮಕ ದಳ ಮತ್ತು ಎಸ್.ಡಿ.ಆರ್.ಎಫ್. ತಂಡ ಭಾರಿ ಮಳೆ ಸಂದರ್ಭದಲ್ಲಿ ರಕ್ಷಣಾ ಸಾಮಾಗ್ರಿಯೊಂದಿಗೆ ಸನ್ನದ್ದರಾಗಿರಬೇಕು. ನೆರೆ ಉಂಟಾದಲ್ಲಿ ಅವಶ್ಯ ಬೋಟುಗಳ ಶೇಖರಣೆ ಮಾಡಿಸಿಟ್ಟುಕೊಳ್ಳಬೇಕು. ಅವಶ್ಯವಿರುವ ಎಲ್ಲಾ ಪರಿಕರಗಳನ್ನು ಇರಿಸಿಕೊಳ್ಳಬೇಕು. ಪ್ರವಾಹ ಸಂದರ್ಭದಲ್ಲಿ ನದಿಗಳಲ್ಲಿನ ನೀರು ಸರಾಗವಾಗಿ ಹರಿದು ಹೋಗಲು ಹಾಕಿರುವ ಗೇಟುಗಳನ್ನು ತೆರವುಗೊಳಿಸಬೇಕು. ಕಿಂಡಿ ಅಣೆಕಟ್ಟು ಸುರಕ್ಷತೆಯ ಕುರಿತು ಪರೀಕ್ಷೆ ನಡೆಸಿ ಪರೀಶಿಲಿಸಿ ವರದಿಯನ್ನು ನೀಡಬೇಕು ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಪ್ರಾಣಿ-ಪಕ್ಷಿಗಳಿಗೆ ಮಳೆಗಾಲದ ಸಂದರ್ಭದಲ್ಲಿ ಯಾವುದೇ ರೀತಿಯ ಹಾನಿಯಾಗದಂತೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಹೆದ್ದಾರಿ, ರಸ್ತೆ, ಕಟ್ಟಡಗಳ ಮೇಲೆ ಮಳೆ ಬಂದಾಗ, ಗಾಳಿ ಮಳೆಯಿಂದ, ದೊಡ್ಡ ದೊಡ್ಡ ಮರಗಳು ಉರುಳಿ ಬಿದ್ದಾಗ ತಕ್ಷಣಕ್ಕೆ ಸ್ಪಂದಿಸಿ ಮರಗಳನ್ನು ತೆರೆವುಗೊಳಿಸಿ ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಗಣಿಗಾರಿಕೆ ನಡೆದಂತಹ ಪ್ರದೇಶದಲ್ಲಿ ಆಗಿರುವ ಗುಂಡಿಗಳಲ್ಲಿ ನಿಂತ ನೀರಿನಲ್ಲಿ ಈಜಾಡಲು ಹೋಗುವುದರಿಂದ ಜೀವಹಾನಿ ಆಗುತ್ತಿರುವುದರಿಂದ ಗಣಿಗಾರಿಕೆ ನಡೆಸಿದ ಪ್ರದೇಶದಲ್ಲಿ ಆಗಿರುವ ಗುಂಡಿಗಳಲ್ಲಿ ಈಜಾಟವನ್ನು ನಿಷೇಧಿಸಿದೆ ಎಂಬ ಬಗ್ಗೆ ಎಚ್ಚರಿಕಾ ಫಲಕವನ್ನು ಅಳವಡಿಸಬೇಕು. ಗಣಿಗಾರಿಕೆ ಗುಂಡಿಯಲ್ಲಿ ನಿಂತ ನೀರಲ್ಲಿ ಈಜಲು ಹೋಗಿ ಏನಾದರೂ ಅವಘಡ ಸಂಭವಿಸಿದಲ್ಲಿ ಸಂಬಂಧಪಟ್ಟ ಗಣಿ ಮಾಲಕರು/ಗುತ್ತಿಗೆದಾರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.ಮೀನುಗಾರರ ಮರಣ ಪ್ರಮಾಣ ಹೆಚ್ಚುತ್ತಿದ್ದು, ಜೂನ್‍ನಿಂದ ಸೆಪ್ಟೆಂಬರ್ ಮೀನುಗಾರಿಕೆ ಚಟುವಟಿಗೆಗಳನ್ನು ಕಡ್ಡಾಯವಾಗಿ ನಿಷೇಧಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಮೀನುಗಾರರಿಗೆ ಸಮುದ್ರಕ್ಕೆ ತೆರಳದಂತೆ ಸೂಕ್ತ ನಿರ್ದೇಶನ ನೀಡಬೇಕು. ನಗರದಲ್ಲಿ ಜಲಸಿರಿ ಕಾಮಗಾರಿಗೆ ರಸ್ತೆಗಳನ್ನು ಅಗೆದಿದ್ದು, ಸರಿಯಾಗಿ ಗುಂಡಿಗಳನ್ನು ಮುಚ್ಚದಿರುವುದರಿಂದ ವಾಹನ ಸವಾರರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಈ ಸಮಸ್ಯೆಯ ಕುರಿತು ನಗರಪಾಲಿಕೆ ಸೂಕ್ತ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸೂಚಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ರಾಜು.ಕೆ. ಹಾಗೂ ವಿವಿಧ ಇಲಾಖಾಧಿಕಾರಿಗಳು ಇದ್ದರು.