ಸಾರಾಂಶ
ಸಾರ್ವಜನಿಕರು ತಾವು ವಾಸಿಸುವ ಸುತ್ತಮುತ್ತಲ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವುದು ಹಾಗೂ ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳುವುದು ಅತಿ ಮುಖ್ಯ. ಮಳೆಗಾಲ ಆರಂಭವಾಗುವುದರಿಂದ ಚರಂಡಿ ಹಾಗೂ ಅರ್ಧಕ್ಕೆ ನಿಂತು ಹೋದ ಕಟ್ಟಡಗಳಲ್ಲಿ ನೀರು ನಿಂತರೆ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಡೆಂಘೀ ಜ್ವರ ಮಾರಕ ಕಾಯಿಲೆ. ಜ್ವರ ಬಾರದಂತೆ ಮುನ್ನೆಚ್ಚರಿಕೆ ಕ್ರಮವಹಿಸಿ ಎಂದು ಜಿಲ್ಲಾಧಿಕಾರಿ ಡಾ ಕುಮಾರ ಜಾಗೃತಿ ಮೂಡಿಸಿದರು.ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾದಲ್ಲಿ ಹಸಿರು ಬಾವುಟ ಪ್ರದರ್ಶಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಡೆಂಘೀ ರೋಗವನ್ನು ಹೋಗಲಾಡಿಸುವ ಮೊದಲ ಔಷಧಿ ಎಂದರೆ ಅದು ಅರಿವು. ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮವಹಿಸಬೇಕು ಎಂದರು.
ಸಾರ್ವಜನಿಕರು ತಾವು ವಾಸಿಸುವ ಸುತ್ತಮುತ್ತಲ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವುದು ಹಾಗೂ ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳುವುದು ಅತಿ ಮುಖ್ಯ. ಮಳೆಗಾಲ ಆರಂಭವಾಗುವುದರಿಂದ ಚರಂಡಿ ಹಾಗೂ ಅರ್ಧಕ್ಕೆ ನಿಂತು ಹೋದ ಕಟ್ಟಡಗಳಲ್ಲಿ ನೀರು ನಿಂತರೆ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸುವ ಮೂಲಕ ಡೆಂಘೀ ಜ್ವರವನ್ನು ತಡೆಗಟ್ಟಬಹುದು ಎಂದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಮಾತನಾಡಿ, ಡೆಂಘೀ ಜ್ವರದ ಘೋಷ ವಾಕ್ಯ ಪರಿಶೀಲಿಸಿ, ಸ್ವಚ್ಛಗೊಳಿಸಿ, ಮುಚ್ಚಿಡಿ ವಿವರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಕಾಂತರಾಜು, ಡಾ.ಬೆಟ್ಟಸ್ವಾಮಿ, ಎಂ.ಎನ್. ಆಶಾಲತಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಜನರಲ್ಲಿ ಡೆಂಘೀ ಬಗ್ಗೆ ಜಾಗೃತಿ ಮೂಡಿಸಲು ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ನಂತರ ಎಸ್.ಡಿ. ಜಯರಾಮ್ ಪ್ಯಾರಮೆಡಿಕಲ್ ವಿಜ್ಞಾನ ಸಂಸ್ಥೆ ಮತ್ತು ಸದ್ವಿದ್ಯಾ ಪ್ಯಾರಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಕಚೇರಿಯವರೆಗೂ ಜಾಥಾ ನಡೆಯಿತು,ವಿದ್ಯಾರ್ಥಿನಿಯರು ಕೀಟ ಚಿಕ್ಕದು ಕಾಟ ದೊಡ್ಡದು, ವಿದ್ಯೆ ಕದಿಯಲಾಗದ ಸಂಪತ್ತು ಆರೋಗ್ಯ ಕೊಳ್ಳಲಾಗದ ಸಂಪತ್ತು, ಸ್ವಯಂ ರಕ್ಷಣಾ ವಿಧಾನವನ್ನು ಬಳಸಿ ಸೊಳ್ಳೆಗಳನ್ನು ನಿಯಂತ್ರಿಸಿ ಎಂಬ ಜಾಗೃತಿ ಫಲಕಗಳನ್ನು ಜಾಥಾದಲ್ಲಿ ಪ್ರದರ್ಶನ ಮಾಡಿದರು.