ರಾಮನಗರ: ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳಿಗೆ ಸಂಸದ ಡಾ. ಸಿ.ಎನ್.ಮಂಜುನಾಥ್ ಕಟ್ಟುನಿಟ್ಟಿನ ಸೂಚನೆ ನೀಡಿದರು
ರಾಮನಗರ: ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳಿಗೆ ಸಂಸದ ಡಾ. ಸಿ.ಎನ್.ಮಂಜುನಾಥ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಜನರಿಗೆ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸುವುದು ಅಧಿಕಾರಿಗಳ ಹೊಣೆ. ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಅಧಿಕಾರಿಗಳು ಸಮಸ್ಯೆಗಳನ್ನು ಪತ್ತೆ ಮಾಡಿ ಅವುಗಳನ್ನು ಬಗೆಹರಿಸುವ ಕೆಲಸ ಮಾಡುವ ಮೂಲಕ ಜನರಿಗೆ ಕುಡಿಯುವ ನೀರು ಪೂರೈಸಬೇಕು ಎಂದರು.ಜಿಲ್ಲೆಯ 27 ಗ್ರಾಮ ಪಂಚಾಯಿತಿಗಳ 43 ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿದ್ದು, ಖಾಸಗಿ ಕೊಳವೆ ಬಾವಿಗಳು ಹಾಗೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಟಾಸ್ಕ್ ಫೋರ್ಸ್ ಒಂದು ಮತ್ತು ಎರಡರಲ್ಲಿ 251 ಕುಡಿಯುವ ನೀರು ಕಾಮಗಾರಿಗಳನ್ನು ಹಾಗೂ ಸಂಸದರ ಅನುದಾನದಡಿ (ಎಂಪಿ ಲ್ಯಾಡ್) ಜಿಲ್ಲೆಯಲ್ಲಿ 20 ಕುಡಿಯುವ ನೀರು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಜ್ಞಾನಪ್ರಕಾಶ್ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಕುಡಿಯುವ ನೀರು ಕಾಮಗಾರಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಜಲಜೀವನ್ ಮಿಷನ್ ಯೋಜನೆ ಸಂಪೂರ್ಣವಾಗಿ ಅನುಷ್ಠಾನಗೊಂಡಿಲ್ಲ. ಜಿಲ್ಲೆಯ ಹಲವು ಕಡೆ ಬೋರ್‌ವೆಲ್‌ಗಳನ್ನು ಕೊರೆದಿದ್ದರೂ ಅದಕ್ಕೆ ಪಂಪು ಮೋಟಾರು ಅಳವಡಿಸದೇ ಹೊಸ ಬೋರ್‌ವೆಲ್ ಕೊರೆಯಲಾಗುತ್ತಿದೆ. ಹೊಸದಾಗಿ ನಿರ್ಮಿಸಲಾಗಿರುವ ಓವರ್ ಹೆಡ್ ಟ್ಯಾಂಕ್‌ಗಳಿಗೆ ನೀರು ತುಂಬಿಸದೆ ಖಾಲಿ ಬಿಡಲಾಗಿದೆ. ಕೆಲವೊಂದು ಕಡೆಯ ಕಾಮಗಾರಿಗಳಲ್ಲಿ ಅನಗತ್ಯ ನೀರು ಪೂರೈಸಲಾಗುತ್ತಿದೆ ಎಂದು ದಿಶಾ ಸಮಿತಿ ನಾಮ ನಿರ್ದೇಶಿತ ಸದಸ್ಯರು ಸಭೆಯ ಗಮನಕ್ಕೆ ತಂದರು.ಈಗಾಗಲೇ ಕೊರೆದಿರುವ 52 ಬೋರ್‌ವೆಲ್‌ಗಳಿಗೆ ಪಂಪು ಮೋಟಾರು ಅಳವಡಿಸಲು ಅಗತ್ಯವಿರುವ ಅನುದಾನಕ್ಕೆ ಕ್ರಮ ವಹಿಸಬೇಕು. ಅಂತರ್ಜಲ ಹೆಚ್ಚಿಸಲು ಬೋರ್‌ವೆಲ್‌ಗಳ ಪುನರುಜ್ಜೀವನಕ್ಕೆ ಕ್ರಮ ವಹಿಸಬೇಕು. ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಗಳನ್ನು ಪೂರ್ಣಗೊಳಿಸದ ಹಾಗೂ ಕಳಪೆ ಕಾಮಗಾರಿಗಳನ್ನು ಕೈಗೊಂಡ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಕ್ರಮ ವಹಿಸಬೇಕು. ಸರ್ಕಾರದ ಹಣವನ್ನು ದುಂದು ವೆಚ್ಚ ಮಾಡದೆ ಯೋಜನಾ ಬದ್ಧವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕ್ರಿಯಾ ಯೋಜನೆ ಸಿದ್ದಪಡಿಸಿ ಕಾಮಗಾರಿ ಆರಂಭಿಸಬೇಕು ಎಂದು ಸಂಸದರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ , ಎಂ.ಆರ್.ಎ ಸ್ಕ್ಯಾನ್ , ಅಲ್ಟ್ರಾ ಸೌಂಡ್ ಸ್ಕ್ಯಾನ್ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳ ಹಾಗೂ ವೈದ್ಯರ ಕೊರತೆ ಇದ್ದು, ಬೆಂಗಳೂರು, ಮಂಡ್ಯ ಆಸ್ಪತ್ರೆಗೆ ರೋಗಿಗಳನ್ನು ಕಳುಹಿಸಲಾಗುತ್ತಿದೆ. ಜಿಲ್ಲಾ ಮಟ್ಟದ ಆಸ್ಪತ್ರೆಯಲ್ಲಿ ಯಾವುದೇ ಆರೋಗ್ಯ ಸೌಕರ್ಯಗಳಿಲ್ಲದಿರುವುದು ನೋವಿನ ಸಂಗತಿಯಾಗಿದೆ. ಆಸ್ಪತ್ರೆಗಳಲ್ಲಿನ ಎಲ್ಲಾ ಸಮಸ್ಯೆಗಳ ನಿವಾರಣೆಗೆ ಪರ್ಯಾಯ ಕ್ರಮಗಳನ್ನು ಎಬಿ-ಎಆರ್‌ಕೆ ಅನುದಾನವನ್ನು ಆಸ್ಪತ್ರೆಗಳಲ್ಲಿನ ಮೂಲಭೂತ ಸೌಕರ್ಯ ಪರಿಕರಗಳಿಗೆ ಬಳಸಬೇಕು, ಭಾರತ ಸರ್ಕಾರದ ವತಿಯಿಂದ ನೀಡಲಾಗುತ್ತಿರುವ ಎಚ್‌ವಿವಿ-ಗರ್ಭ ಕಂಟಕ ಕ್ಯಾನ್ಸರ್ ನಿಯಂತ್ರಣಕ್ಕೆ ಸಂಬಂಧಿಸಿದ ಲಸಿಕೆ ನೀಡಿಕೆ ಪ್ರಗತಿ ಸಾಧಿಸಬೇಕು. ಹಾವು, ನಾಯಿ ಕಡಿತಕ್ಕೆ ನೀಡಲಾಗುವ ಔಷಧಿಗಳನ್ನು ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಆಸ್ಪತ್ರೆಗಳಲ್ಲಿ ಲಭ್ಯವಿರಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.ಕಾಡಂಚಿನಲ್ಲಿ ತಡೆಗೋಡೆ ನಿರ್ಮಿಸಿ :
ಮಾನವ-ಪ್ರಾಣಿ ಸಂಘರ್ಷ, ಆನೆಕಾಟ ತಪ್ಪಿಸಲು ಜಿಲ್ಲೆಯ ಗಡಿ ಕಾಡಂಚಿನಲ್ಲಿ ತಡೆಗೋಡೆ ನಿರ್ಮಿಸಲು ಕ್ರಮವಹಿಸಬೇಕು. ಆನೆಗಳು ಆಹಾರ ನೀರು ಅರಸಿ ನಾಡಿಗೆ ಧಾವಿಸುತ್ತದೆ. ಇದನ್ನು ತಪ್ಪಿಸಲು ಕಾಡಿನಲ್ಲಿಯೇ ಸಣ್ಣ ಕೆರೆಗಳನ್ನು ನಿರ್ಮಿಸಿ ನೀರನ್ನು ತುಂಬಿಸಬೇಕು. ಬಾಳೆ ಇನ್ನಿತರ ಆನೆಯ ಆಹಾರ ಗಿಡಗಳನ್ನು ಕಾಡಿನಲ್ಲಿ ಬೆಳೆಸಲು ಕ್ರಮ ಕೈಗೊಳ್ಳಬೇಕು. ರೈತರಿಗೆ ಅರಣ್ಯ ಇಲಾಖೆಯಿಂದ ನೀಡಲಾಗುವ ಸಸಿಗಳನ್ನು ವಿತರಿಸಿ, ಬೆಳೆಸಲು ಕ್ರಮ ಕೈಗೊಳ್ಳಬೇಕು ಎಂದು ಮಂಜುನಾಥ್ ರವರು ಪ್ರಾದೇಶಿಕ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಮೈಸೂರು ಹೆದ್ದಾರಿಯಲ್ಲಿ ಸಂಚರಿಸುವ ವೋಲ್ವೋ ಎಸಿ ಬಸ್‌ಗಳಲ್ಲಿ ಪ್ರತಿ ಪ್ರಯಾಣಿಕರಿಗೂ ಟೋಲ್ ದರ ವಸೂಲಿ ಮಾಡುತ್ತಿರುವ ಕುರಿತು ಸಂಬಂಧಿಸಿದ ಇಲಾಖೆ ಮಂತ್ರಿಗಳ ಬಗ್ಗೆ ಚರ್ಚಿಸಿ ಟೋಲ್ ದರ ವಸೂಲಿ ಮಾಡದಂತೆ ತಿಳಿಸಲಾಗುವುದು ಎಂದು ತಿಳಿಸಿದರು.
ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಚನ್ನಪಟ್ಟಣದ ಬಳಿ 8 ಎಕರೆ ಜಮೀನನ್ನು ಜಿಲ್ಲಾಧಿಕಾರಿಯವರು ಗುರುತಿಸಿ ರಾಷ್ಟ್ರೀಯ ಹೆದ್ದಾರಿಗೆ ನೀಡಿದೆ ಈ ಜಾಗದಲ್ಲಿ ಚನ್ನಪಟ್ಟಣದ ಬೊಂಬೆ ಪಾರ್ಕ್ ಮ್ಯೂಸಿಯಂ, ತಂಗುದಾಣ, ಹೋಟೆಲ್‌ಗಳು ಪೆಟ್ರೋಲ್ ಬಂಕ್ ತಲೆ ಎತ್ತಲಿದೆ ಎಂದು ಸಂಸದ ಮಂಜುನಾಥ್ ಸಭೆಗೆ ತಿಳಿಸಿದರು.ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಜೆ. ಮಂಜುನಾಥ್ , ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಅನ್ಮೋಲ್ ಜೈನ್ , ದಿಶಾ ಸಮಿತಿಯ ನಾಮನಿರ್ದೇಶಿನ ಸದಸ್ಯರದ ಶೋಭಾ, ರೇಖಾ, ರಾಜೇಶ್, ನರಸಿಂಹಮೂರ್ತಿ, ಸಿದ್ದರಾಮು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಬಾಕ್ಸ್ .................ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಶಿಥಿಲಗೊಂಡಿರುವ ಕೊಠಡಿಗಳನ್ನು ಗುರುತಿಸಿ, ಪಟ್ಟಿ ನೀಡುವಂತೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾದ ಭಾಗ್ಯಲಕ್ಷ್ಮಿ ಅವರಿಗೆ ಸೂಚಿಸಿದ ಸಂಸದ ಮಂಜುನಾಥ್ ರವರು, ಶಿಥಿಲಗೊಂಡಿರುವ ಕೊಠಡಿಗಳನ್ನು ಜಿಲ್ಲಾ ಪಂಚಾಯತ್ ಅನುದಾನ ಅಥವಾ ಸಿಎಸ್‌ಆರ್ ಅನುದಾನದಡಿ ದುರಸ್ಥಿ ಮಾಡುವುದಾಗಿ ತಿಳಿಸಿದರು.
ಕೆಲವೊಂದು ಶಾಲೆಯ ಕೊಠಡಿಗಳು ಗ್ರೀನ್ ಬಿಲ್ಡಿಂಗ್ ಅಂದರೆ ಕೊಠಡಿಗಳಲ್ಲಿ ಫಂಗಸ್ ವ್ಯಾಪಿಸಿದೆ, ಅಲ್ಲಿ ಮಕ್ಕಳು ಕುಳಿತು ಪಾಠ ಕೇಳುವುದು ಸಾಧ್ಯವಿಲ್ಲ ಆದ ಕಾರಣ ಉತ್ತಮ ಕೊಠಡಿಗಳನ್ನು ಒದಗಿಸಿಕೊಡಬೇಕು, ಮಕ್ಕಳಿಗೆ ಶಿಕ್ಷಣದಂತೆ ಆರೋಗ್ಯ, ಪೌಷ್ಟಿಕಾಂಶ ಆಹಾರ ಮುಖ್ಯ ಎಂದು ಸಂಸದರು ತಿಳಿಸಿದರು.ಕೋಟ್..............
ತೆಂಗು ಬೆಳೆಯನ್ನು ವಿಮೆ ಯೋಜನೆಯಡಿ ಒಳಪಡಿಸಬೇಕು ಎಂದು ಸಂಸತ್ ಕಲಾಪದಲ್ಲಿ ಚರ್ಚಿಸಿ ಕೇಂದ್ರ ಕೃಷಿ ಮಂತ್ರಿಯವರ ಗಮನಕ್ಕೆ ತರಲಾಗುವುದು, ತೆಂಗು ಬೆಳೆಗೆ ವಿಮೆ ಯೋಜನೆ ಸೌಲಭ್ಯ ಒದಗಿಸಿದರೆ ದಕ್ಷಿಣ ಭಾರತದ ಕರ್ನಾಟಕ, ಕೇರಳ, ತಮಿಳುನಾಡು ರೈತರಿಗೆ ಹೆಚ್ಚು ಅನುಕೂಲವಾಗಲಿದೆ.- ಡಾ.ಸಿ.ಎನ್.ಮಂಜುನಾಥ್, ಸಂಸದರು, ಬೆಂಗಳೂರು ಗ್ರಾಮಾಂತರ ಕ್ಷೇತ್ರ.
----------------------25ಕೆಆರ್ ಎಂಎನ್ 5,6.ಜೆಪಿಜಿ
ರಾಮನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಂಸದ ಡಾ.ಸಿ.ಎನ್.ಮಂಜುನಾಥ್ ರವರ ಅಧ್ಯಕ್ಷತೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆ ನಡೆಯಿತು.----------------------