ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲೆಯಲ್ಲಿ ಪ್ರತಿದಿನ ಉಷ್ಣಾಂಶ ಹೆಚ್ಚುತ್ತಿದೆ. ಪ್ರಸ್ತುತ ಮಾರ್ಚ್ ತಿಂಗಳಲ್ಲಿ ಸರಾಸರಿ 39 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಸಾರ್ವಜನಿಕರು ಬಿಸಿಗಾಳಿ ಹಾಗೂ ಶಾಖದಿಂದ ತಮ್ಮ ದೇಹದ ಆರೋಗ್ಯ ರಕ್ಷಣೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಹೇಳಿದ್ದಾರೆ.ಮಂಗಳವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮುಂಬರುವ ಏಪ್ರಿಲ್ ಹಾಗೂ ಮೇ ಮಾಹೆಯಲ್ಲಿ ಉಷ್ಣಾಂಶವು ಮತ್ತಷ್ಟು ಹೆಚ್ಚುವ ಸಾಧ್ಯತೆಗಳು ಇವೆ. ಇದರಿಂದಾಗಿ ಹೀಟ್ ವೇವ್ ಸ್ಟ್ರೋಕ್ ದೇಹದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದ್ದು, ಹೆಚ್ಚೆಚ್ಚು ನೀರು ಸೇವನೆ, ವಿಶ್ರಾಂತಿ, ಕೆಲಸ ಅವಧಿ ಬದಲಾವಣೆ ಸೇರಿದಂತೆ ಮತ್ತಿತರ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಬಗ್ಗೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.ಪ್ರಸ್ತುತ ಜಿಲ್ಲೆಯಲ್ಲಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಕಂಡು ಬಂದಿಲ್ಲ. ಕಳೆದ ಸಾಲಿನಲ್ಲಿ ನೀರಿನ ಸಮಸ್ಯೆ ಉಂಟಾದ ಗ್ರಾಮ ಅಥವಾ ವಾರ್ಡ್ ಗಳಲ್ಲಿ ಈಗಿನಿಂದಲೇ ಕುಡಿಯುವ ನೀರು ಒದಗಿಸಲು ತಯಾರಿ ಮಾಡಿಕೊಳ್ಳಬೇಕು. ಕಲುಷಿತ ನೀರು ಸರಬರಾಜು ಆಗದಂತೆ ಅಗತ್ಯ ಕ್ರಮವಹಿಸಬೇಕು. ಸ್ಥಳೀಯ ಸಂಸ್ಥೆಗಳು ಕುಡಿಯುವ ನೀರಿನ್ನು ಒದಗಿಸಲು ಎಸ್.ಎಫ್.ಸಿ ಯಲ್ಲಿ ಶೇ. 50 ರಷ್ಟು ಅನುದಾನ ಮೀಸಲಿರಿಸಬೇಕು ಎಂದರು.
ವಿದ್ಯುತ್ ಸರಬರಾಜಿನ ನಾದುರಸ್ತಿಯಲ್ಲಿರುವ ಕಂಬಗಳು, ನೇತಾಡುವ ತಂತಿಗಳ ತೆರವು ಹಾಗೂ ಜಂಗಲ್ ಕ್ಲಿಯರೆನ್ಸ್ ಕಾರ್ಯಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು. ದುರಸ್ತಿ ಸಂದರ್ಭದಲ್ಲಿ ವಿದ್ಯುತ್ ವ್ಯತ್ಯಯವನ್ನು ಸಾರ್ವಜನಿಕರಿಗೆ ಪ್ರಕಟಣೆಯ ಮೂಲಕ ಮಾಹಿತಿ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ರಸ್ತೆ ಬದಿ ಅಪಾಯಕಾರಿ ಮರ ತೆರವು, ಮಳೆ ನೀರು ಹರಿಯಲು ತೋಡು ಹಾಗೂ ಚರಂಡಿಗಳ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಬೇಕು, ಬೆಂಕಿ ಅವಘಡಗಳ ಸಂದರ್ಭದಲ್ಲಿ ಬಂಕಿ ನಂದಿಸುವ ವಾಹನಗಳ ಕೊರತೆಯಿದ್ದಲ್ಲಿ ಕೂಡಲೆ ಸರಕಾರಕ್ಕೆ ಪತ್ರ ಬರೆದು ಅವುಗಳನ್ನು ತರಿಸುವ ಕಾರ್ಯವಾಗಬೇಕು ಎಂದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಖಾಸಗಿ ಬೋರ್ವೆಲ್‌ಗಳಿಂದ ನೀರು ಪಡೆಯಲು ಒಪ್ಪಂದ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಕುಂದಾಪುರ ಡಿಎಫ್‌ಒ ಗಣಪತಿ, ಕಾರ್ಕಳ ವನ್ಯಜೀವಿ ವಿಭಾಗದ ಡಿಎಫ್‌ಒ ಶಿವರಾಮ ಎಂ. ಬಾಬು, ಎಎಸ್ಪಿ ಸಿದ್ದಲಿಂಗಪ್ಪ, ಸಹಾಯಕ ಕಮೀಷನರ್ ಮಹೇಶ್ಚಂದ್ರ ಮತ್ತಿತರ ಅಧಿಕಾರಿಗಳು ಇದ್ದರು.