ಪ್ರತಿ ದಿನ ಹಸಿಕಸ ಮತ್ತು ಒಣಕಸ ಪ್ರತ್ಯೇಕವಾಗಿ ವಿಂಗಡಿಸಿ ವಿಲೇವಾರಿ ಮಾಡುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು

ಕೊಪ್ಪಳ: ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಸುರಕ್ಷತಾ ಕ್ರಮಕೈಗೊಳ್ಳುವ ಕುರಿತು ಸುಪ್ರೀಂ ಕೋರ್ಟ ಆದೇಶದಂತೆ ತಾಪಂನಲ್ಲಿ ತಾಲೂಕು ನೋಡಲ್ ಅಧಿಕಾರಿ ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಸಭೆ ಜರುಗಿತು.

ತಾಪಂ ಇಒ ದುಂಡಪ್ಪ ತುರಾದಿ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿರುವ ಬೀದಿ ನಾಯಿಗಳ ಸಂಖ್ಯೆ ಪಡೆದುಕೊಂಡು ನಾಯಿಗಳು ಇದ್ದಲ್ಲಿ ಸ್ಥಳಾಂತರಿಸಲು ಕ್ರಮ ವಹಿಸಲು ಸಂಬಂಧಿಸಿದವರಿಗೆ ನೋಟಿಸ್‌ ಮೂಲಕ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಪ್ರತಿ ದಿನ ಹಸಿಕಸ ಮತ್ತು ಒಣಕಸ ಪ್ರತ್ಯೇಕವಾಗಿ ವಿಂಗಡಿಸಿ ವಿಲೇವಾರಿ ಮಾಡುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಈ ಕುರಿತು ನೋಡಲ್‌ ಅಧಿಕಾರಿಗಳು ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಶೀಲನಾ ವರದಿ ಸಲ್ಲಿಸುವಂತೆ ಸೂಚಿಸಿದರು.

ನಗರ ಸ್ಥಳೀಯ ಸಂಸ್ಥೆಯಿಂದ ಬೀದಿ ನಾಯಿಗಳನ್ನು ಸ್ಥಳಾಂತರಿಸಲು ಸಹಕರಿಸಲು ಹಾಗೂ ಅವುಗಳ ಪ್ರವೇಶ ನಿರ್ಬಂಧಿಸುವದನ್ನು ಮೇಲ್ವಿಚಾರಣೆ ಮಾಡಲು ತಮ್ಮ ಸಂಸ್ಥೆಯಿಂದ ಒಬ್ಬ ಜವಾಬ್ದಾರಿಯುತ ನೌಕರರನ್ನು ನೋಡಲ್‌ ಅಧಿಕಾರಿಯಾಗಿ ನೇಮಿಸುವಂತೆ ಆದೇಶ ಈಗಾಗಲೇ ಹೊರಡಿಸಲಾಗಿರುತ್ತದೆ. ಒಂದು ವೇಳೆ ಬೀದಿ ನಾಯಿಗಳು ವಾಸ ಮಾಡಲು ಅವಕಾಶ ನೀಡಿದಲ್ಲಿ ಅವುಗಳನ್ನು ಸ್ಥಳಾಂತರಿಸುವ ವೆಚ್ಚ ಸಂಸ್ಥೆಗಳಿಂದ ಭರಣ ಮಾಡುವಂತೆ ಸಂಬಂಧಿಸಿದ ಸಂಸ್ಥೆಗಳಿಗೆ ನೋಟಿಸ್‌ ಜಾರಿ ಮಾಡುವ ಮೂಲಕ ನಗರ ಸ್ಥಳೀಯ ಸಂಸ್ಥೆಯವರು ಕ್ರಮ ವಹಿಸುವಂತೆ ಸಭೆಯಲ್ಲಿ ಸೂಚಿಸಿದರು.

ತಹಸೀಲ್ದಾರ ವಿಠ್ಠಲ್‌ ಚೌಗಲಾ ಮಾತನಾಡಿ, ಬೀದಿ ನಾಯಿಗಳ ಬಗ್ಗೆ ಹೆಚ್ಚಿನ ಗಮನಹರಿಸಿ ಸುರಕ್ಷತಾ ಕ್ರಮ ಕೈಗೊಳ್ಳುವದು. ಒಂದು ವೇಳೆ ಉಲ್ಲಂಘನೆಯಾದ ಮೇಲೆ ಕ್ರಮವಾಗುವದು ನಿಶ್ಚಿತ ಎಂದರು.

ಪಶು ಪಾಲನಾ ಹಾಗು ಪಶು ವೈದ್ಯಕೀಯ ಸೇವೆ ಇಲಾಖಾಧಿಕಾರಿ ವಿನೋದ್ ಮಾತನಾಡಿ, ಗ್ರಾಪಂ ಹಂತದಲ್ಲಿ ಬೀದಿ ನಾಯಿಗಳ ಕುರಿತು ಜಾಗೃತಿ ಮೂಡಿಸಲು ತಿಳಿಸಿದರು.

ಈ ಸಭೆಯಲ್ಲಿ ಕೊಪ್ಪಳ ನಗರಸಭೆ ಆಯುಕ್ತ ವೆಂಕಟೇಶ ನಾಗನೂರು, ಬಿಇಒ ಹನಮಂತಪ್ಪ ಎಚ್‌, ಮಹೇಶ್, ಅಕ್ಷರ ಮಲ್ಲಿಕಾರ್ಜುನ ಗುಡಿ, ತಾಲೂಕು ಮಟ್ಟದ ಅಧಿಕಾರಿಗಳು, ಪಶು ಪಾಲನಾ ಹಾಗು ಪಶು ವೈದ್ಯಕೀಯ ಸೇವೆ ಇಲಾಖಾಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.