ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ರೈತರ ಹೊಲಗಳಿಗೆ ಸಂಪರ್ಕ ರಸ್ತೆ ನಿರ್ಮಿಸುವ ಮೂಲಕ ಅನುಕೂಲ ಮಾಡಿಕೊಡಲು ಕಂದಾಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.ತಾಲೂಕಿನ ಕವಡಿಮಟ್ಟಿ, ಜಲಪೂರ, ಸರೂರು, ಸರೂರು ತಾಂಡಾ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ಬುಧವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ಅಂಗನವಾಡಿ ಕೇಂದ್ರ ಸಂಪೂರ್ಣ ಶಿಥಿಲಗೊಂಡಿದ್ದು, ಹೊಸದಾಗಿ ನಿರ್ಮಿಸಿ ಕೊಡಬೇಕು ಎಂದು ಕವಡಿಮಟ್ಟಿ ಗ್ರಾಮಸ್ಥರು ಮನವಿ ಮಾಡಿದರು. ಈ ವೇಳೆ ಸಿಡಿಪಿಓ ಶಿವಮೂರ್ತಿ ಕುಂಬಾರ ಮಾತನಾಡಿ, ಕ್ಷೇತ್ರದಲ್ಲಿ ಈಗಾಗಲೇ ಸಮಸ್ಯೆಯ ಸುಳಿಯಲ್ಲಿರುವ 33 ಅಂಗವಾಡಿ ಕೆಂದ್ರಗಳನ್ನು ನಿರ್ಮಿಸಲು ಪ್ರತಿ ಅಂಗನವಾಡಿಗೆ ₹ 18 ಲಕ್ಷ ನಿಗದಿ ಮಾಡಿ ಸರ್ಕಾರ ತಿರ್ಮಾನಿಸಿದೆ. ಶೀಘ್ರ ಕ್ರಮಕೈಗೊಳ್ಳಲಾಗುವುದು ಎಂದರು.ಜಲಪೂರ ಮಾರ್ಗದ ಮೂಲಕ ವಸ್ತಿ ಬಸ್ ಸೇವೆ ಪ್ರಾರಂಭಿಸಬೇಕು. ಕೆಲ ಹೊಗಳಲ್ಲಿ ಸವಳು ಜವಳಿನ ಸಮಸ್ಯೆಯಿಂದ ಉತ್ತಮ ಫಸಲು ಬರುತ್ತಿಲ್ಲ. ಈ ಕೂಡಲೇ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಜಲಪೂರ ಗ್ರಾಮಸ್ಥರು ಬೇಡಿಕೆ ಇಟ್ಟರು. ಬೇಡಿಕೆಗೆ ಸ್ಪಂಧಿಸಿದ ಶಾಸಕರು, ಕೆರೆ ಅಭಿವೃದ್ಧಿಗಾಗಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ, ಹೊಲಗಳ ಸವಳು ಜವಳ ಬಗ್ಗೆ ಹೆಚ್ಚಿನ ನಿಗಾವಹಿಸಿ ಕ್ರಮ ಕೈಗೊಳ್ಳುವಂತೆ ಕೆಬಿಜೆಎನ್ ಎಲ್ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಹಾಗೂ ರಸ್ತೆ ನಿರ್ಮಿಸಲು ಕ್ರೀಯಾಯೋಜನೆ ತಯಾರಿಸಿ ರಸ್ತೆ ಮಾಡಲಾಗುವುದು, ಬಸ್ ಸೇವೆ ಒದಗಿಸುವಂತೆ ಕೆಎಸ್‌ಆರ್ಟಿಸಿ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು. ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳಿಸದೇ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು. ಇದರಿಂದ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಲು ಸಾಧ್ಯ. ಸರ್ಕಾರಿ ಶಾಲೆಯ ಶಿಕ್ಷಕರು ಅರ್ಹತಾ ಪರೀಕ್ಷೆ ಮೂಲಕ ಆಯ್ಕೆಗೊಂಡು ಹುದ್ದೆಗೆ ಬಂದಿರುತ್ತಾರೆ. ಸರ್ಕಾರಿ ಶಾಲಾ ಶಿಕ್ಷಕರಿಗಿಂತಲೂ ಖಾಸಗಿ ಶಾಲಾ ಶಿಕ್ಷಕರಲ್ಲಿ ಖಾಸಗಿ ಶಾಲೆಗಳ ವೈಭವಿಕರಣವಲ್ಲದೇ ಗುಣಮಟ್ಟ ಶಿಕ್ಷಣ ಕಾಣಲು ಸಾಧ್ಯವಿಲ್ಲ. ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಬರುವುದಿಲ್ಲ. ಗ್ರಾಮೀಣ ಭಾಗದ ಬಡವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ. ಎಲ್ಲರು ಮಕ್ಕಳನ್ನು ಖಾಸಗಿ ಶಾಲೆಗಳ ಅವಲಂಬಿಸದೇ ಸರ್ಕಾರಿ ಶಾಲೆಗೆ ಸೇರಿಸಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.ಗ್ರಾಮದಲ್ಲಿ ಸರ್ಕಾರಿ ಜಾಗವಿದ್ದು ಮನೆ ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಸೌಲಭ್ಯಗಳು ಕೂಡ ಸಿಗುತ್ತಿಲ್ಲ. ಇದರಿಂದಾಗಿ ಕಡಬಡವರಿಗೆ ಮನೆ ಇಲ್ಲದಂತಾಗಿದೆ ಎಂದು ಕವಡಿಮಟ್ಟಿ ಗ್ರಾಮಸ್ಥರು ಆರೋಪಿಸಿದರು. ಜತೆಗೆ ಕವಡಿಮಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 32 ಎಕರೆಯಷ್ಟು ಸರ್ಕಾರಿ ಜಾಗೆ ಇದ್ದು, ಸುಮಾರು 4 ಎಕರೆಯಷ್ಟು ಜಮೀನಿನಲ್ಲಿ ಆಶ್ರಯ ಯೋಜನೆಯಡಿ ಮನೆ ನಿರ್ಮಿಸಿ ನಿರಾಶ್ರೀತರಿಗೆ ಹಂಚಿಕೆ ಮಾಡಲು ವಿಶೇಷ ಅನುದಾನದ ಅವಶ್ಯಕತೆ ಇದೆ ಎಂದು ಪಿಡಿಒ ಪಿ.ಎಸ್.ಕಸನಕ್ಕಿ ಶಾಸಕರಿಗೆ ತಿಳಿಸಿದರು. ಇದಕ್ಕೆ ಪಂಚಾಯಿತಿಯಲ್ಲಿ ಸಮಾನ್ಯ ಸಭೆಯಲ್ಲಿ ಚರ್ಚಿಸಿ ಠರಾವು ಮಾಡಿ ನನಗೆ ಕೊಡಿ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರದಿಂದ ಅನುದಾನ ತಂದು ಮನೆ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರುಜಲಧಾರೆಯಲ್ಲಿ ಹೆಚ್ಚುವರಿ ನೀರು ಸಂಗ್ರಹ ಘಟಕ ನಿರ್ಮಿಸಲು ಮುಂದಾಗಿದ್ದು, ಬೇಗ ಸ್ಥಾಪಿಸಿ ಸಾರ್ವಜನಿಕ ರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಗ್ರಾಮದಲ್ಲಿ ನೈರ್ಮಲ್ಯ ಹಾಗೂ ಕೊಳಚೆ ನಿರ್ಮೂಲನೆಗಾಗಿ ಸರ್ಕಾರ ಈಗಾಗಲೇ 2024-25 ಸಾಲಿನಲ್ಲಿ ₹ 1.40 ಕೋಟಿಯಲ್ಲಿ ನರೇಗಾ ಯೋಜನೆಯಡಿ ಗ್ರೇ ವಾಟರ್ ಮ್ಯಾನೇಜಮೆಂಟ್ ಕಾಮಗಾರಿ ಕೈಗೊಳ್ಳಲು ಅನುದಾನ ಮಂಜೂರಾಗಿದೆ. ಗುತ್ತಿಗೆದಾರರು ಅತಿ ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಿಸಲಿದ್ದಾರೆ. ಈ ದಿಸೆಯಲ್ಲಿ ಗ್ರಾಮಗಳ ಮುಖ್ಯ ಹಾಗೂ ಸಂಪರ್ಕ ರಸ್ತೆಗಳ ಅಕ್ಕ ಪಕ್ಕದ ಮನೆಗಳ ಮಾಲಿಕರು ರಸ್ತೆ ಒತ್ತುವರಿಗೆ ಮಾಡಿಕೊಂಡರೆ ತೆರವುಗೊಳಿಸಲು ಮುಂದಾದರೇ ಅವರಿಗೆ ಸಹಕಾರ ನೀಡಿ. ಇದರಿಂದ ಗ್ರಾಮ ಸ್ವಚ್ಛವಾಗಿ ಸೊಳ್ಳೆ, ಮಲೀನ ಹಾಗೂ ರೋಗ ಮುಕ್ತ ಪರಿಸರ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಗ್ರಾಮಸ್ಥರಿಗೆ ಅಪ್ಪಾಜಿ ನಾಡಗೌಡರು ತಿಳಿಸಿದರು.ಈ ವೇಳೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ವೆಂಕಟೇಶ ಒಂದಾಲ, ತಾಲೂಕು ಕೃಷಿ ಅಧಿಕಾರಿ ಸುರೇಶ ಭಾವಿಕಟ್ಟಿ, ಪಶುವೈದ್ಯಾಧಿಕಾರಿ ಎಸ್.ಬಿ.ಮೇಟಿ, ತಾಲೂಕು ಆರೋಗ್ಯಾಧಿಕಾರಿ ಡಾ.ಸತೀಶ ತಿವಾರಿ, ತಾಲೂಕು ಅಕ್ಷರ ದಾಸೋಹದ ಸಹಾಯ ನಿರ್ದೇಶಕ ಎಂ.ಎಂ.ಬೆಳಗಲ್ಲ, ಪಿಎಸ್‌ಐ ಸಂಜಯಕುಮಾರ ತಿಪ್ಪಾರಡ್ಡಿ, ಗ್ರಾಪಂ ಅಧ್ಯಕ್ಷೆ ಶಕುಂತಲಾ ಹಂಡರಗಲ್ಲ, ಪಂಚಾಯತ್ ರಾಜ್ಯ ಸಹಾಯ ನಿರ್ದೇಶಕ ಖೂಬಾಶಿಂಗ್ ಜಾಧವ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ದೇಶಕಿ ಬಸಂತಿ ಮಠ, ಗ್ಯಾರಂಟಿ ಸಮಿತಿ ಸದಸ್ಯ ರಾಮಣ್ಣ ರಾಜನಾಳ ಸೇರಿದಂತೆ ಹಲವರು ಇದ್ದರು.