ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸಾರ್ವಜನಿಕರಿಗೆ ಸಮಯಕ್ಕೆ ಸರಿಯಾಗಿ ಗ್ಯಾಸ್ ಸಿಲಿಂಡರ್ ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಂಗಪ್ಪ ಅವರು ಸೂಚಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲಿ ಗ್ಯಾಸ್ ಮಾರಾಟ ವಿತರಕರ ಕಂಪನಿಗಳು ಹಾಗೂ ಪೆಟ್ರೋಲ್, ಡೀಸೆಲ್ ಬಂಕ್ ಪ್ರತಿನಿಧಿಗಳೊಂದಿಗಿನ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಸಭೆಯಲ್ಲಿ ಪ್ರತಿನಿಧಿಗಳು ಜನರು ಭಯಭೀತರಾಗಿ (ಪ್ಯಾನಿಕ್) ಅನಗತ್ಯವಾಗಿ ಗ್ಯಾಸ್ ಬುಕ್ ಮಾಡಿ ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದೀರಿ, ಆದರೆ ವಾಸ್ತವದಲ್ಲಿ ಗ್ರಾಹಕರು ಗ್ಯಾಸ್ ಬುಕ್ ಮಾಡಿದ ನಂತರ ವಾರ, ತಿಂಗಳಾನುಗಟ್ಟಲೆ ಆದರೂ ಸಿಲೇಂಡರ್ ಪೂರೈಸಿಲ್ಲವೆಂಬ ಜಿಲ್ಲಾಧಿಕಾರಿಗೆ ದೂರುತ್ತಿದ್ದಾರೆ. ಆದ್ದರಿಂದ ಗೃಹಬಳಕೆಯ ಗ್ಯಾಸ್ ಪೂರೈಕೆಯಲ್ಲಿ ಆಗುತ್ತಿರುವ ವಿಳಂಬವನ್ನು ಆದ್ಯತೆಯ ಮೇರೆಗೆ ಸರಿಪಡಿಸಬೇಕು ಎಂದು ಹೇಳಿದರು.
ಇನ್ನೆರಡು ದಿನಗಳಲ್ಲಿ ಶಾಲೆಗಳು ಆರಂಭವಾಗಲಿದ್ದು, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟ ಒದಗಿಸಲು ಸಿಲಿಂಡರ್ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಸರಕಾರಿ ಶಾಲೆಗಳು ಹಾಗೂ ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಸತಿ ನಿಲಯಗಳಿಗೆ ಅಗತ್ಯವಾದ ಗ್ಯಾಸ್ ಸಂಪರ್ಕ ಒದಗಿಸಬೇಕು. ಶಾಲೆ ಮತ್ತು ವಸತಿ ನಿಲಯಗಳಿಗೆ ಸಿಲಿಂಡರ್ ಒದಗಿಸುವಲ್ಲಿ ಒಟಿಪಿ ಕಡ್ಡಾಯ ಮಾಡಿದಲ್ಲಿ, ಶಾಲೆಯ ಪ್ರಾಂಶುಪಾಲರು ಹಾಗೂ ವಾರ್ಡನ್‌ಗಳು ಸಹ ತಮ್ಮ ಗೃಹ ಬಳಕೆ ಗ್ಯಾಸ್ ಸಂಪರ್ಕ ಹೊಂದಿದ್ದಾರೆ, ಆಗ ಸಮಸ್ಯೆಯಾಗುವುದರಿಂದ ಈ ಕುರಿತು ಉನ್ನತಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿ ಕೊಡಬೇಕು ಎಂದು ತಾಕೀತು ಮಾಡಿದರು.ಜಿಲ್ಲೆಯ ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಮತ್ತು ಡೇಸೆಲ್ ಸ್ಟಾಕ್ ಇದ್ದರೂ ಕೂಡ ಪೆಟ್ರೋಲ್ ಲಭ್ಯವಿಲ್ಲ ಎಂಬ ಫಲಕ ಹಾಕಲಾಗುತ್ತಿದೆ ಎಂದು ಜಿಲ್ಲಾಡಳಿತಕ್ಕೆ ಮಾಧ್ಯಮದವರು ತಿಳಿಸುತ್ತಿದ್ದು, ಈ ರೀತಿ ಮಾಡುವುದು ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪ್ರತಿದಿನ ಲಭ್ಯವಿರುವ ಇಂಧನ ಹಾಗೂ ಆಯಾ ದಿನದ ಇಂಧನ ದರ ಪ್ರದರ್ಶಿಸಿರಿ. ತೈಲ ಪೂರೈಕೆ ವಿಷಯದಲ್ಲಿ ವಿತರಕರು ಜಾಗರೂಕತೆ ವಹಿಸಿ ಸಮಸ್ಯೆ ಉಲ್ಬಣಿಸದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಮುಂಗಾರು ಆರಂಭವಾಗುತ್ತಿದ್ದು, ರೈತರು ಬಿತ್ತನೆಗಾಗಿ ಸಜ್ಜುಗೊಳ್ಳುತ್ತಿದ್ದಾರೆ. ಸಾಕಷ್ಟು ಸಂಖ್ಯೆಯ ರೈತರು ಭೂಮಿ ಉಳುಮೆಗಾಗಿ ಟ್ಯಾಕ್ಟರ್ ಬಳಸುತ್ತಿದ್ದು, ರೈತರಿಗೆ ತೊಂದರೆ ಉಂಟು ಮಾಡದೆ ಪೆಟ್ರೋಲ್ ಡೇಸೆಲ್ ನೀಡಲು ಸೂಚನೆ ನೀಡಿದರು.ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ್ ಕಂಕನವಾಡಿ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಅಜೀತ್ ಮನ್ನಿಕೇರಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸದಾಶೀವ ಬಡಿಗೇರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪಂಕಜಾ ಜೋಶಿ ಸೆರಿದಂತೆ ಇತರರು ಇದ್ದರು.