ಕಳೆದ ವರ್ಷದ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶಿಕ್ಷಣ ಪ್ರೇಮಿಗಳಿಗೆ ನೋವು, ಆಘಾತ ತಂದಿದೆ. ಆದರೆ, ಈ ಬಾರಿ ಎಸ್ಎಸ್‌ಎಲ್‌ಸಿ ಫಲಿತಾಂಶದಲ್ಲಿ ನಾಡು ಈ ಕಡೆಗೆ ತಿರುಗಿ ನೋಡುವಂತೆ ಫಲಿತಾಂಶ ಸುಧಾರಣೆಗೆ ಕ್ರಮ ವಹಿಸಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ಇಂಡಿ
ಕಳೆದ ವರ್ಷದ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶಿಕ್ಷಣ ಪ್ರೇಮಿಗಳಿಗೆ ನೋವು, ಆಘಾತ ತಂದಿದೆ. ಆದರೆ, ಈ ಬಾರಿ ಎಸ್ಎಸ್‌ಎಲ್‌ಸಿ ಫಲಿತಾಂಶದಲ್ಲಿ ನಾಡು ಈ ಕಡೆಗೆ ತಿರುಗಿ ನೋಡುವಂತೆ ಫಲಿತಾಂಶ ಸುಧಾರಣೆಗೆ ಕ್ರಮ ವಹಿಸಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶ್ರೀ ಯಶವಂತರಾಯಗೌಡ ವಿ.ಪಾಟೀಲ ಫೌಂಡೇಷನ್ (ರಿ) ಪಡನೂರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡ 2025-26ನೇ ಸಾಲಿನ ತಾಲೂಕು ಮಟ್ಟದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ಒಂದು ದಿನದ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿಸಿದರು.ಕಾರ್ಯಾಗಾರದ ಕಾರ್ಯಕ್ರಮ ಅಚ್ಚುಕಟ್ಟಾಗಿ ಯಶಸ್ವಿ ಮಾಡಿದರೆ ಸಾಲದು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚಿನ ಸಾಧನೆ ಮಾಡಿದಾಗ ಈ ಕಾರ್ಯಾಗಾರ ಮಾಡಿದಕ್ಕೂ ಸಾರ್ಥಕತೆ ಆಗುತ್ತದೆ. ಫಲಿತಾಂಶ ಸುಧಾರಣೆಗಾಗಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಸರ್ಕಾರದ ಯೋಜನೆಗಳು ಸದುಪಯೋಗಪಡಿಸಿಕೊಂಡು ಫಲಿತಾಂಶ ಸುಧಾರಣೆಯಾಗಲು ಶಿಕ್ಷಣ ಇಲಾಖೆ, ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.ವಿದ್ಯಾರ್ಥಿಗಳು ಪರೀಕ್ಷೆಯನ್ನು ಸರಳವಾಗಿ, ಭಯಮುಕ್ತವಾಗಿ ಎದುರಿಸಬೇಕು. ಕಾಪಿ ಮಾಡಿ ಪರೀಕ್ಷೆ ಪಾಸ್ ಮಾಡಿದರೆ ಭವಿಷ್ಯದ ಬದುಕಿನ ಪರೀಕ್ಷೆಯಲ್ಲಿ ಪಾಸ್ ಆಗಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಬದುಕು ಬಂಗಾರವಿದ್ದಂತೆ. ಬಂಗಾರದ ಭವಿಷ್ಯ ಉಜ್ವಲಗೊಳಿಸಿಕೊಳ್ಳಲು ನಿರಂತರ ಓದಿನಕಡೆಗೆ ಗಮನ ಕೊಡಬೇಕು. ನಿರಂತರ ಓದಿನಿಂದ ಜ್ಞಾನ, ಪಾಂಡಿತ್ಯ ಬೆಳೆಯುತ್ತದೆ. ಸಾಧನೆಯ ಶಿಖರ ತಲುಪಲು ಛಲದಿಂದ ಓದಬೇಕು. ಸಾಧನೆಯ ಮೂಲಕ ತಂದೆ, ತಾಯಿ, ಕಲಿತ ಶಾಲೆ, ವಿದ್ಯೆ ಕಲಿಸಿದ ಗುರುಗಳ ಹೆಸರು ತರಬೇಕು ಎಂದರು.ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಕುರಿತು ಆತ್ಮವಿಶ್ವಾಸ ಹಾಗೂ ಕಲಿಕಾ ಪ್ರೇರೇಪಣೆ ಮೂಡಿಸಬೇಕು. ಪಾಲಕರು ಮತ್ತು ಮಕ್ಕಳಲ್ಲಿ ಸಂತಸದ ಭಾವನೆ ಮೂಡಿಸುವ ಮೂಲಕ ಮಕ್ಕಳಿಗೆ ಪರೀಕ್ಷಾ ಭಯ ನಿವಾರಣೆ ಮಾಡಬೇಕು. ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬಿ ಮನೋಸ್ಥೈರ್ಯ ಬೆಳೆಸಿ ಪರೀಕ್ಷೆಗೆ ಅಣಿಗೊಳಿಸಬೇಕು ಎಂದ ಅವರು, ಎಲ್ಲ ಶಾಲೆಗಳಲ್ಲಿ ಶೇ.100 ರಷ್ಟು ಫಲಿತಾಂಶ ಬರಲು ಇಲಾಖೆ, ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಶ್ರಮವಹಿಸಬೇಕು ಎಂದು ತಿಳಿಸಿದರು.ಶ್ರೀ ಯಶವಂತರಾಯಗೌಡ ಪಾಟೀಲ ಫೌಂಡೇಷನ್ ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದು ಸಂತಸದ ಸಂಗತಿ. ಅರಣ್ಯ ಬೆಳವಣಿಗೆ, ಶೈಕ್ಷಣಿಕ ಪ್ರಗತಿ, ಯುವಕರಿಗೆ ಪ್ರೇರಣೆಯಾಗುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹಾಕಿಕೊಳ್ಳುವ ಮೂಲಕ ಉತ್ತಮ ಕೆಲಸ ಮಾಡುತ್ತಿದೆ ಎಂದರು.ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೀರಯ್ಯ ಸಾಲಿಮಠ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಂದಿನ ಭವಿಷ್ಯ ರೂಪಿಸುವ ಪರೀಕ್ಷೆಯಾಗಿದೆ. ವಿದ್ಯಾರ್ಥಿಗಳು ನಿಮ್ಮ ಭವಿಷ್ಯ ರೂಪಿಸಿಕೊಳ್ಳಲು ಸತತ ಅಧ್ಯಯನ ಮಾಡಬೇಕು. ಪರಿಶ್ರಮದಿಂದ ಸಾಧನೆ ಮಾಡಲು ಸಾಧ್ಯ. ಓದುವ, ಸಾಧಿಸುವ ಛಲ ಹೊಂದಬೇಕು. ಆತ್ಮವಿಶ್ವಾಸ ಮುಟ್ಟುವ ಕೆಲಸ ಶಿಕ್ಷಕರು ಮಾಡಬೇಕು. ಶ್ರೀ ಯಶವಂತರಾಯಗೌಡ ವಿ. ಪಾಟೀಲ ಫೌಂಡೇಷನ್ ಹೊರತಂದ ಯಶೊಪಥ ವಿದ್ಯಾರ್ಥಿಗಳಿಗೆ ದಿಕ್ಸೂಚಿಯಾಗಲಿದೆ ಎಂದು ಹೇಳಿದರು. ಸಾಧನೆ ಮಾಡುವವರೆಗೆ ಪುಸ್ತಕದ ವಿಷಯಗಳು ಗೆಳೆಯರನ್ನಾಗಿ ಮಾಡಿಕೊಂಡು ಹೆಚ್ಚು ಹೆಚ್ಚು ಸಮಯ ಕಳೆಯಬೇಕು. ಮೋಬೈಲ್ ಗೀಳಿನಿಂದ ಹೊರಬಂದು, ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.ಶ್ರೀ ಯಶವಂತರಾಯಗೌಡ ವಿ ಪಾಟೀಲ ಫೌಂಡೇಷನ್ ಗೌರವಾಧ್ಯಕ್ಷೆ ಶಿವಲೀಲಾ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಸ್.ಮುಜಾವರ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಆರ್.ನಡಗಡ್ಡಿ, ರಾಘವೇಂದ್ರ ಕುಲಕರ್ಣಿ ಮಾತನಾಡಿದರು. ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ, ಉಪ ವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಹಶೀಲ್ದಾರ ಬಿ.ಎಸ್.ಕಡಕಭಾವಿ, ತಾಪಂ ಇಒ ಡಾ.ಭೀಮಾಶಂಕರ ಕನ್ನೂರ, ಪ್ರಾಂಶುಪಾಲ ಡಾ.ರಮೇಶ ಆರ್.ಎಸ್ ಉಪಸ್ಥಿತರಿದ್ದರು.ಈ ವೇಳೆ ಪ್ರಶಾಂತ ಕಾಳೆ, ಸದಾಶಿವ ಪ್ಯಾಟಿ, ಮಹೇಶ ಹೊನ್ನಬಿಂದಗಿ, ಸಂತೋಷ ಪರಸೆನವರ, ಶಿವಯೋಗೆಪ್ಪ ಚನಗೊಂಡ, ಧನರಾಜ ಮುಜಗೊಂಡ, ನಗರಸಭೆ ಪೌರಾಯುಕ್ತ ಶಿವಾನಂದ ಪೂಜಾರಿ, ಎಇಇ ದಯಾನಂದ ಮಠ, ಸಿಡಿಪಿಒ ಗೀತಾ ಗುತ್ತರಗಿಮಠ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಪೂಜಾರಿ, ಸಿಪಿಐ ಪ್ರದೀಪ ಭಿಸೆ, ಹಣಮಂತ ಅರವತ್ತು ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಇದೆ ಸಂದರ್ಭದಲ್ಲಿ ಶ್ರೀ ಯಶವಂತರಾಯಗೌಡ ವಿ ಪಾಟೀಲ ಫೌಂಡಷನ್ ಹೊರತಂದ ಯಶೋಪಥ ವಿದ್ಯಾರ್ಥಿಗಳ ಕೈಪಿಡಿ ಬಿಡುಗಡೆಗೊಳಿಸಲಾಯಿತು. ಪುಂಡಲೀಕ ಹೂಗಾರ ಸ್ವಾಗತಿಸಿದರು. ಎ.ಒ.ಹೂಗಾರ ನಿರೂಪಿಸಿದರು. ವಿನೋದ ಶಹಾಪೂರ ವಂದಿಸಿದರು.