ಹೆಚ್ಚು ಮತದಾನವಾಗುವಂತೆ ಕ್ರಮ ವಹಿಸಿ: ಜಿ.ಪ್ರಭು

| Published : Apr 03 2024, 01:32 AM IST

ಸಾರಾಂಶ

ಜಿಲ್ಲೆಯಲ್ಲಿ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿಗೆ ಸಂಬಂಧಿಸಿದಂತೆ ಬಹಳಷ್ಟು ಕಾರ್ಯಕ್ರಮಗಳು ಜರುಗುತಿದ್ದು, ಈ ಎಲ್ಲದರ ಫಲವಾಗಿ ಜಿಲ್ಲೆಯಲ್ಲಿ ಹೆಚ್ಚು ಮತದಾನವಾಗುವಂತೆ ನಾವೆಲ್ಲರೂ ನೋಡಿಕೊಳ್ಳಬೇಕಾಗಿದೆ ಎಂದು ಜಿಪಂ ಸಿಇಒ ಹಾಗೂ ಸ್ವೀಪ್ ಕಮಿಟಿ ಅಧ್ಯಕ್ಷ ಜಿ.ಪ್ರಭು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರುಜಿಲ್ಲೆಯಲ್ಲಿ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿಗೆ ಸಂಬಂಧಿಸಿದಂತೆ ಬಹಳಷ್ಟು ಕಾರ್ಯಕ್ರಮಗಳು ಜರುಗುತಿದ್ದು, ಈ ಎಲ್ಲದರ ಫಲವಾಗಿ ಜಿಲ್ಲೆಯಲ್ಲಿ ಹೆಚ್ಚು ಮತದಾನವಾಗುವಂತೆ ನಾವೆಲ್ಲರೂ ನೋಡಿಕೊಳ್ಳಬೇಕಾಗಿದೆ ಎಂದು ಜಿಪಂ ಸಿಇಒ ಹಾಗೂ ಸ್ವೀಪ್ ಕಮಿಟಿ ಅಧ್ಯಕ್ಷ ಜಿ.ಪ್ರಭು ತಿಳಿಸಿದ್ದಾರೆ.ನಗರದ ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯವತಿಯಿಂದ ಹಮ್ಮಿಕೊಂಡಿದ್ದ ಸ್ವೀಪ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲೆಯ ಎಲ್ಲಾ ಇಲಾಖೆಗಳು ತಮ್ಮ ಸಿಬ್ಬಂದಿ ಸೇರಿಸಿಕೊಂಡು ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಇದಕ್ಕೆ ಸ್ವಂದಿಸಿ ತುಮಕೂರು ಜಿಲ್ಲೆಯ ಎಲ್ಲಾ ಇಲಾಖೆ ಸಂಪೂರ್ಣವಾಗಿ ಸಹಕಾರ ನೀಡುತಿದ್ದು, ಉದ್ಯಮಿಗಳು ಸಹ ಇಂದು ಸಹಕಾರ ನೀಡಿದ್ದಾರೆ. ಕೈಗಾರಿಕ ಪ್ರದೇಶಕ್ಕೆ ತೆರಳಿ,ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೂ ಅರಿವು ಮೂಡಿಸುವ ಕೆಲಸ ನಡೆದಿದೆ. ಜಿಲ್ಲೆಯಲ್ಲಿ ಸ್ವೀಪ್ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.ತುಮಕೂರು ಜಿಲ್ಲಾ ಚೇಂಬರ್ ಅಫ್ ಕಾಮರ್ಸ್ ನ ಅಧ್ಯಕ್ಷ ಗಿರೀಶ್ ಮಾತನಾಡಿ, ಇಂದು ಜಿಲ್ಲಾ ಚೇಂಬರ್ ಅಫ್ ಕಾಮರ್ಸ್‌ ಮತ್ತು ಕೈಗಾರಿಕಾ ಕೇಂದ್ರದ ಸಹಕಾರದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಮತ ಹಾಕಿ, ಮತ ಹಾಕಿಸಿ ಎಂಬ ಘೋಷ ವಾಕ್ಯದೊಡನೆ, ಮತದಾನದ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಲವಾರು ಉದ್ಯಮಿಗಳು ಸಹಕಾರ ನೀಡಿದ್ದಾರೆ.ಏಪ್ರಿಲ್ ೨೬ರಂದು ನಡೆಯುವ ಮತದಾನದಲ್ಲಿ ಎಲ್ಲರೂ ಭಾಗವಹಿಸುವಂತೆ ಮಾಡುವುದು ಇದರ ಹಿಂದಿನ ಉದ್ದೇಶವಾಗಿದೆ. ಇದೊಂದು ಒಳ್ಳೆಯ ಕಾರ್ಯಕ್ರಮ. ಈಗಾಗಲೇ ಸರ್ಕಾರವೇ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವೇತನ ಸಹಿತ ರಜೆ ಘೋಷಣೆ ಮಾಡಿದೆ. ಹಾಗಾಗಿ ನಾವು ಸಹ ಸರ್ಕಾರದೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತೇವೆ ಎಂದರು. ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಡಿ.ಕೆ.ಲಿಂಗರಾಜು ಮಾತನಾಡಿ, ಕೈಗಾರಿಕಾ ಕೇಂದ್ರ ಮತ್ತು ಚೆಂಬರ್ ಅಫ್ ಕಾಮರ್ಸ್ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುಮಾರು 500ಕ್ಕೂ ಹೆಚ್ಚು ವಿವಿಧ ಕೈಗಾರಿಕೆಗಳ ಮುಖ್ಯಸ್ಥರು, ಉದ್ದಿಮೆದಾರರು, ಕಾರ್ಮಿಕರು ಭಾಗವಹಿಸಿದ್ದಾರೆ. ಜಿಲ್ಲಾಧಿಕಾರಿಗಳು ಉದ್ಘಾಟಿಸುತಿದ್ದು, ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಕಡಿಮೆ. ಹಾಗಾಗಿ ಎಲ್ಲಾ ನಾಗರಿಕರು ಮತದಾನದಲ್ಲಿ ಭಾಗವಹಿಸಬೇಕೆಂಬ ಅರಿವು ಮೂಡಿಸಲು ಈ ಪ್ರಯತ್ನ ನಡೆದಿದೆ. ಹೆಚ್ಚು ಜನ ಮತದಾನ ಮಾಡುವುದರಿಂದ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಡಿ.ಕೆ.ಲಿಂಗರಾಜು, ಉಪನಿರ್ದೇಶಕರಾದ ಸಿ.ಕೆ.ನಾಗರಾಜು, ಸುಮನ್, ಸಹಾಯಕ ನಿರ್ದೇಶಕ ಸಿದ್ದೇಶ್, ಪ್ರಸಾದ್, ಹನುಮಂತರಾಯಪ್ಪ, ಸ್ವೀಪ್ ಸಮಿತಿ ಅಶೋಕ್, ಕೆಐಡಿಬಿ ಇಇ ಲಕ್ಷೀಶ್, ಸಣ್ಣ ಕೈಗಾರಿಕಾ ಸಂಘದ ಸುಜ್ಞಾನ್ ಹಿರೇಮಠ್,ವಿವಿಧ ಕೈಗಾರಿಕಾ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.