ಗ್ರಾಮದಲ್ಲಿ ಕುಡಿಯುವ ನೀರಿನ ಪೂರೈಕೆ ಸಮರ್ಪಕವಾಗಿಲ್ಲ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆ ಗ್ರಾಮದಲ್ಲಿ ಸಂಚರಿಸಿ ಸ್ಥಳೀಯ ನಿವಾಸಿಗಳೊಂದಿಗೆ ತಾಪಂ ಇಒ ಶ್ರೀಧರ ಚಿನಗುಂಡಿ ಅವರು ಸಮಾಲೋಚನೆ ನಡೆಸಿದರು.
ನರಗುಂದ: ಪ್ರಸಕ್ತ ವರ್ಷ ಸರಿಯಾಗಿ ಮಳೆಯಾಗುತ್ತಿಲ್ಲ. ಆದ್ದರಿಂದ ಗ್ರಾಪಂ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕೆಂದು ತಾಪಂ ಇಒ ಶ್ರೀಧರ ಚಿನಗುಂಡಿ ತಿಳಿಸಿದರು.
ಶುಕ್ರವಾರ ತಾಲೂಕಿನ ಹದಲಿ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿ, ಗ್ರಾಮದಲ್ಲಿ ಕುಡಿಯುವ ನೀರಿನ ಪೂರೈಕೆ ಸಮರ್ಪಕವಾಗಿಲ್ಲ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆ ಗ್ರಾಮದಲ್ಲಿ ಸಂಚರಿಸಿ ಸ್ಥಳೀಯ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿದರು.ವಿವಿಧ ಓಣಿಗಳಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಗ್ರಾಮಸ್ಥರಿಂದ ಮಾಹಿತಿ ಸಂಗ್ರಹಿಸಿದರು. ಬಳಿಕ ಸ್ಥಳದಲ್ಲಿದ್ದ ಪಿಡಿಒಗೆ ವಾಟರ್ ಬೋರ್ಡ್ ಹಾಗೂ ಡಿಬಿಒಟಿ ಸಿಬ್ಬಂದಿಗಳೊಂದಿಗೆ ಸಮನ್ವಯ ಸಾಧಿಸಿ, ಗ್ರಾಮಸ್ಥರಿಗೆ ನಿಗದಿತ ಸಮಯದಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಇದೇ ಸಂದರ್ಭದಲ್ಲಿ ಗ್ರಾಪಂ ಸಿಬ್ಬಂದಿ ಹಾಜರಾತಿ ಪುಸ್ತಕವನ್ನು ಪರಿಶೀಲಿಸಿದರು. ಅನಧಿಕೃತವಾಗಿ ಗೈರುಹಾಜರಾಗುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಿಡಿಒಗೆ ಸೂಚನೆ ನೀಡಿದರು. ಕಚೇರಿ ಸಮಯದಲ್ಲಿ ಸಿಬ್ಬಂದಿ ಹೊರಗಡೆ ತೆರಳುವ ಸಂದರ್ಭದಲ್ಲಿ ಚಲನವಲನ ಪುಸ್ತಕದಲ್ಲಿ ಭೇಟಿ ಸ್ಥಳ ಹಾಗೂ ಕಾರಣವನ್ನು ಕಡ್ಡಾಯವಾಗಿ ದಾಖಲಿಸುವಂತೆ ತಿಳಿಸಿದರು.ಇದೇ ವೇಳೆ ನಗದು ಘೋಷಣೆ ರಜಿಸ್ಟರ್ ಹಾಗೂ ತೆರಿಗೆ ವಸೂಲಾತಿ ಮೊತ್ತವನ್ನು ಬ್ಯಾಂಕ್‌ಗೆ ಜಮಾ ಮಾಡಿರುವ ರೆಮಿಟೆನ್ಸ್ ರಜಿಸ್ಟರ್‌ಗಳನ್ನು ಪರಿಶೀಲಿಸಿ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಗ್ರಾಮಸ್ಥರು, ಪಿಡಿಒ ಹಾಗೂ ಗ್ರಾಪಂ ಸಿಬ್ಬಂದಿ ಇದ್ದರು.ಏಷ್ಯನ್ ಆಟ್ಯಾಪಟ್ಯಾದಲ್ಲಿ ಗದುಗಿನ ಯುವಕರ ಚಿನ್ನದ ಸಾಧನೆ
ಗದಗ: ಅಂತಾರಾಷ್ಟ್ರೀಯ ಕ್ರೀಡಾ ಕ್ಷೇತ್ರದಲ್ಲಿ ಜಿಲ್ಲೆಯ ಇಬ್ಬರು ಯುವ ಕ್ರೀಡಾಪಟುಗಳು ಸಾಧನೆ ಮೆರೆದಿದ್ದು, ಭೂತಾನ್‌ನಲ್ಲಿ ನಡೆದ ಏಷ್ಯನ್ ಆಟ್ಯಾಪಟ್ಯಾ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.ಸಾಧಕರಾದ ರಾಹುಲ್ ಶೇಖರ್ ಕಾರಭಾರಿ ಹಾಗೂ ಉಳವೇಶ ಶಿವಾಜಿ ಲಮಾಣಿ ಅವರನ್ನು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರು ಜಿಲ್ಲಾಡಳಿತ ಭವನದಲ್ಲಿ ಸನ್ಮಾನಿಸಿ ಅಭಿನಂದಿಸಿದರು.ಜೂ. 7ರಿಂದ 10ರ ವರೆಗೆ ಭೂತಾನ್‌ನಲ್ಲಿ ನಡೆದ 3ನೇ ಸೀನಿಯರ್ ಏಷ್ಯನ್ ಆಟ್ಯಾಪಟ್ಯಾ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತಂಡವನ್ನು ಪ್ರತಿನಿಧಿಸಿದ್ದ ಜಿಲ್ಲೆಯ ಮುಂಡರಗಿ ತಾಲೂಕಿನ ಶಿಂಗಟರಾಯನಕೇರಿ ತಾಂಡಾದ ಕ್ರೀಡಾಪಟು ರಾಹುಲ್ ಶೇಖರ್ ಕಾರಭಾರಿ ಅವರು ತಮ್ಮ ತಂಡದೊಂದಿಗೆ ಭರ್ಜರಿ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.ಜೂ. 4ರಿಂದ 6ರ ವರೆಗೆ ಭೂತಾನ್‌ನಲ್ಲಿ ನಡೆದ ಪ್ರಥಮ ಜೂನಿಯರ್(ಅಂಡರ್-19) ಏಷ್ಯನ್ ಆಟ್ಯಾಪಟ್ಯಾ ಚಾಂಪಿಯನ್‌ಶಿಪ್‌ನಲ್ಲಿ ಜಿಲ್ಲೆಯ ಶಿರಹಟ್ಟಿ ತಾಲೂಕಿನ ದೇವಿಹಾಳ ತಾಂಡಾದ ಯುವ ಕ್ರೀಡಾಪಟು ಉಳವೇಶ ಶಿವಾಜಿ ಲಮಾಣಿ ಅವರು ಭಾರತೀಯ ತಂಡದ ನಾಯಕನಾಗಿ ಕಾರ್ಯನಿರ್ವಹಿಸಿ ತಂಡವನ್ನು ವಿಜಯದತ್ತ ಮುನ್ನಡೆಸಿದರು. ಅವರ ನೇತೃತ್ವದ 15 ಸದಸ್ಯರ ತಂಡ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಜಯಿಸಿದೆ.ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಶರಣು ಗೊಗೇರಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ವಸಂತ ಮಡ್ಲೂರ, ಮನೋಜ್ ರಾಠೋಡ, ಸೇರಿದಂತೆ ಕ್ರೀಡಾ ಸಾಧಕ ಯುವಕರ ಪಾಲಕರು, ಸ್ನೇಹಿತರು, ತರಬೇತುದಾರರು ಇದ್ದರು.