ಚನ್ನಪಟ್ಟಣ: ಈಗಾಗಲೇ ಬಿರುಬೇಸಿಗೆ ಆರಂಭಗೊಂಡಿದೆ. ತಾಲೂಕಿನಲ್ಲಿ ಕೆರೆಗಳು ತುಂಬಿ ತಕ್ಕಮಟ್ಟಿಗೆ ಅಂತರ್ಜಲ ಸಮೃದ್ಧಿ ಆಗಿರುವ ಪರಿಣಾಮ ನೀರಿನ ಸಮಸ್ಯೆ ನಮಗೆ ಆಷ್ಟಾಗಿ ಬಾಧಿಸದಿದ್ದರೂ ಅಧಿಕಾರಿಗಳು ಈ ಬಗ್ಗೆ ಅಸಡ್ಡೆ ತೋರದೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಸೂಚನೆ ನೀಡಿದರು
ಚನ್ನಪಟ್ಟಣ: ಈಗಾಗಲೇ ಬಿರುಬೇಸಿಗೆ ಆರಂಭಗೊಂಡಿದೆ. ತಾಲೂಕಿನಲ್ಲಿ ಕೆರೆಗಳು ತುಂಬಿ ತಕ್ಕಮಟ್ಟಿಗೆ ಅಂತರ್ಜಲ ಸಮೃದ್ಧಿ ಆಗಿರುವ ಪರಿಣಾಮ ನೀರಿನ ಸಮಸ್ಯೆ ನಮಗೆ ಆಷ್ಟಾಗಿ ಬಾಧಿಸದಿದ್ದರೂ ಅಧಿಕಾರಿಗಳು ಈ ಬಗ್ಗೆ ಅಸಡ್ಡೆ ತೋರದೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಸೂಚನೆ ನೀಡಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚರ್ಚಿಸುವ ಸಲುವಾಗಿ ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ೩೨ ಗ್ರಾಮ ಪಂಚಾಯಿತಿಗಳ ಪೈಕಿ ಕೆಲ ಗ್ರಾಮಗಳಲ್ಲಿ ಮಾತ್ರ ನೀರಿನ ಸಮಸ್ಯೆ ಉದ್ಭವಿಸಿರುವುದಾಗಿ ಮಾಹಿತಿ ಬಂದಿದೆ., ಆ ಗ್ರಾಮಗಳಿಗೆ ಕೊಳವೆ ಬಾವಿಗಳನ್ನು ಕೊರೆಯಲು ಈಗಾಗಲೇ ಸೂಚನೆ ನೀಡಲಾಗಿದೆ. ಇದರ ಜೊತೆಗೆ ಮತ್ತೆ ಯಾವುದಾದರೂ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದರೆ ತಕ್ಷಣ ಗಮನಹರಿಸಿ ಸಮಸ್ಯೆ ಬಗೆಹರಿಸುವುದು ಸಂಬಂಧಪಟ್ಟ ಅಧಿಕಾರಿಗಳ ಆದ್ಯ ಕರ್ತವ್ಯ ಎಂದು ತಾಕೀತು ಮಾಡಿದರು.ಹದಿನೈದರಿಂದ ಇಪತ್ತು ಗ್ರಾಮಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಅಲ್ಲೆಲ್ಲಾ ಸಮೃದ್ಧವಾಗಿಯೇ ನೀರು ಕೂಡ ಸಿಕ್ಕಿದೆ. ಆ ಗ್ರಾಮಗಳಲ್ಲಿ ಬಹುತೇಕ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ಇದೇ ರೀತಿಯಲ್ಲಿ ಬೇಸಿಗೆ ಮುಗಿಯುವವರೆಗೂ ಅಧಿಕಾರಿ ವರ್ಗ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಹಾಗೂ ತಾಲೂಕು ಕೇಂದ್ರದಲ್ಲಿ ನೀರಿನ ಸಮಸ್ಯೆ ಉದ್ಭವಿಸದಂತೆ ಎಚ್ಚರ ವಹಿಸುವಂತೆ ಕಿವಿಮಾತು ಹೇಳಿದರು.
ಚರಂಡಿ ಸ್ವಚ್ಛತೆ, ಬೀದಿ ದೀಪ ನಿರ್ವಹಿಸಿ:ಬೇಸಿಗೆ ಕಾರಣ ಸಾರ್ವಜನಿಕರ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ. ಹಾಗಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನಿಮ್ಮ ನಿಮ್ಮ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವುದರ ಜೊತೆಗೆ ಒಳ ಚರಂಡಿಗಳನ್ನು ಕಡ್ಡಾಯವಾಗಿ ಸ್ವಚ್ಛಗೊಳಿಸಬೇಕು. ಇದರ ಜೊತೆಗೆ ಕಾಡು ಪ್ರಾಣಿಗಳ ಮತ್ತು ಕಳ್ಳರ ಹಾವಳಿ ಹೆಚ್ಚುತ್ತಿರುವ ಕಾರಣ ಬೀದಿ ದೀಪಗಳು ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ಇವೆರಡು ಕೆಲಸಗಳನ್ನು ಅಧಿಕಾರಿಗಳು ಸರಿಯಾಗಿ ನಿರ್ವಹಣೆ ಮಾಡದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಎಚ್ಚರಿಕೆ ನೀಡಿದರು.
ಗ್ರಾಪಂ ಸುಪರ್ದಿಗೆ ವಾಟರ್ ಫಿಲ್ಟರ್:ತಾಲೂಕಿನಲ್ಲಿರುವ ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾದ ನಿರ್ವಹಣೆ ಕಾಣದ ಪರಿಣಾಮ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಬಗ್ಗೆ ಈ ಹಿಂದಿನ ಸಭೆಯಲ್ಲಿ ಎಲ್ಲಾ ಶುದ್ಧ ನೀರಿನ ಘಟಕಗಳನ್ನು ಗ್ರಾಮ ಪಂಚಾಯಿತಿಗಳು ತಮ್ಮ ಸುಪರ್ದಿಗೆ ಪಡೆಯುವಂತೆ ಸೂಚನೆ ನೀಡಲಾಗಿತ್ತಾದರೂ ಅದು ಇಲ್ಲಿಯವರೆಗೆ ಕಾರ್ಯಗತವಾಗಿಲ್ಲ. ಈ ಕೂಡಲೇ ನಿಮ್ಮ ವ್ಯಾಪ್ತಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯನ್ನು ನೀವೇ ತೆಗೆದುಕೊಳ್ಳುವಂತೆ ಪಿಡಿಒಗಳಿಗೆ ತಾಕೀತು ಮಾಡಿ ಮುಂದಿನ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಬಿ.ಎನ್.ಗಿರೀಶ್, ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಸಂದೀಪ್, ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಎಇಇ ಶರತ್, ಎಇಗಳು. ಜೆಇಗಳು, ಪಿಡಿಒಗಳು ಹಾಜರಿದ್ದರು.ಕೋಟ್.....
ಬೇಸಿಗೆ ಕಾಲದಲ್ಲಿ ಯಾವುದೇ ಗ್ರಾಮ, ಪಟ್ಟಣ, ನಗರಗಳಲ್ಲಿಯೂ ನೀರಿನ ಸಮಸ್ಯೆ ಎದುರಾಗದಂತೆ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಬೇಕು. ಸಮರ್ಪಕ ನೀರು ಪೂರೈಕೆಗೆ ವಿಶೇಷ ಆದ್ಯತೆ ನೀಡಬೇಕು. ಎಲ್ಲಿಯೂ ನೀರಿನ ಸಮಸ್ಯೆಗಳ ದೂರು ಬರಬಾರದು. ಯಾರೇ ನಿರ್ಲಕ್ಷ ವಹಿಸಿದಲ್ಲಿ ಕೂಡಲೇ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.-ಸಿ.ಪಿ.ಯೋಗೇಶ್ವರ್, ಶಾಸಕರು, ಚನ್ನಪಟ್ಟಣ
ಪೋಟೊ೭ಸಿಪಿಟಿ೨:ಚನ್ನಪಟ್ಟಣ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ತಹಸೀಲ್ದಾರ್ ಬಿ.ಎನ್.ಗಿರೀಶ್, ತಾಪಂ ಇಒ ಸಂದೀಪ್, ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಎಇಇ ಶರತ್ ಇತರರು ಪಾಲ್ಗೊಂಡಿದ್ದರು.