ಹೊಸಪೇಟೆ: ಮಳೆಗಾಲ ಆರಂಭವಾಗಿರುವುದರಿಂದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಸರಬರಾಜು ವೇಳೆ ನೀರು ಕಲುಷಿತಗೊಳ್ಳುವ ಸಂಭವವಿದೆ. ಮುಖ್ಯವಾಗಿ ಚರಂಡಿ ಪಕ್ಕದ, ಹಳೆಯ ಪೈಪ್‌ಲೈನ್‌ಗಳಲ್ಲಿ ಇಂತಹ ಪ್ರಕರಣ ಹೆಚ್ಚಾಗಿ ಕಂಡುಬರುತ್ತವೆ. ಹಳೆಯ ಅಥವಾ ಒಡೆದ ಪೈಪ್‌ಲೈನ್‌ಗಳನ್ನು ಮುಂಜಾಗ್ರತಾ ಕ್ರಮವಾಗಿ ತ್ವರಿತವಾಗಿ ದುರಸ್ತಿಗೊಳಿಸಬೇಕು ಎಂದು ಜಿಪಂ ಸಿಇಒ ನೋಂಗ್ಜಾಯ್ ಮೊಹಮದ್ ಅಲಿ ಅಕ್ರಂ ಷಾ ಸೂಚಿಸಿದರು.

ನಗರದ ಜಿಪಂ ಸಿಇಒ ಕಚೇರಿಯಲ್ಲಿ ಇತ್ತೀಚೆಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಜೆಜೆಎಂ ಕಾಮಗಾರಿ, ನರೇಗಾ ಸಮರ್ಪಕ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಲುಷಿತ ನೀರು ಸರಬರಾಜು ಆಗದಂತೆ ಮತ್ತು ಇಂತಹ ಗಂಭೀರ ಪ್ರಕರಣಗಳು ಮರುಕಳಿಸದಂತೆ ಅಧಿಕಾರಿಗಳು ಅತ್ಯಂತ ಎಚ್ಚರದಿಂದ ಕೆಲಸ ಮಾಡಬೇಕು. ವಿವಿಧ ತಾಂತ್ರಿಕ ಕಾರಣಗಳಿಂದ ಕೊಳವೆಬಾವಿ ನೀರು ಸರಬರಾಜು ಸಮಸ್ಯೆ ಉಂಟಾದಲ್ಲಿ ತಕ್ಷಣವೇ ಅವುಗಳನ್ನು ಸರಿಪಡಿಸಿ ಶುದ್ಧ ಕುಡಿಯುವ ನೀರು ಒದಗಿಸಬೇಕು. ಒಂದು ವೇಳೆ ತಕ್ಷಣಕ್ಕೆ ದುರಸ್ತಿ ಮಾಡಲು ಸಾಧ್ಯವಾಗದಿದ್ದರೆ ಆಯಾ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರದಂತೆ ಟ್ಯಾಂಕರ್ ಮೂಲಕ ಪರ್ಯಾಯ ನೀರು ಪೂರೈಕೆಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ನಿರ್ದೇಶಿಸಿದರು.

ಮಳೆಗಾಲದಲ್ಲಿ ಜಲಮೂಲಗಳು ಕಲುಷಿತಗೊಳ್ಳುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಕಡ್ಡಾಯವಾಗಿ ಕುಡಿಯುವ ನೀರನ್ನು ಕಾಯಿಸಿ ಆರಿಸಿ ಕುಡಿಯಬೇಕು. ಸಾಧ್ಯವಾದರೆ ಆರ್‌ಒ ಪ್ಲಾಂಟ್‌ಗಳ ಶುದ್ಧ ಕುಡಿಯುವ ನೀರನ್ನು ಸೇವಿಸಬೇಕು. ಈ ಬಗ್ಗೆ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಪಂಗಳು ಗ್ರಾಮೀಣ ಭಾಗದಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ನೆಲ್ಕುದುರೆ ಗ್ರಾಮವನ್ನು 24*7 ಶುದ್ಧ ಕುಡಿಯುವ ನೀರು ಪೂರೈಕೆ ಗ್ರಾಮ ಎಂದು ಘೋಷಿಸಲಾಗಿದೆ. ಅದರಂತೆ ಎಲ್ಲ ಮನೆಗಳಿಗೂ ನಳದ ಸಂಪರ್ಕ ಕಲ್ಪಿಸುವ ಕುರಿತು ಸಮೀಕ್ಷೆಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಎಂದರು.

ಜಿಲ್ಲಾದ್ಯಂತ ವಿವಿಧ ಗ್ರಾಪಂಗಳಲ್ಲಿ ವಿವಿಧ ಕಾಮಗಾರಿ ಯೋಜನೆಗಳು ಸರಿಯಾದ ರೀತಿಯಲ್ಲಿ ಅನುಷ್ಠಾನವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಿಇಒ, ಮುಂದಿನ 10 ದಿನಗಳಲ್ಲಿ ಎಲ್ಲ ಕಾಮಗಾರಿಗಳು ಕಡ್ಡಾಯವಾಗಿ ನಿರೀಕ್ಷಿತ ಪ್ರಗತಿ ಸಾಧಿಸಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.


ಗ್ರಾಮೀಣ ಮಟ್ಟದಲ್ಲಿ ನೀರಿನ ಗುಣಮಟ್ಟವನ್ನು ಪರೀಕ್ಷಿಸಲು ಫೀಲ್ಡ್ ಟೆಸ್ಟಿಂಗ್ ಕಿಟ್ ಅಭಿಯಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸಬೇಕು. ಸ್ವಚ್ಛ ಭಾರತ ಮಿಷನ್ ಹಾಗೂ ಜಲ ಜೀವನ್ ಮಿಷನ್ ಅಡಿಯಲ್ಲಿ ಹಮ್ಮಿಕೊಳ್ಳಲಾಗಿರುವ 100 ದಿನಗಳ ವಿಶೇಷ ಅಭಿಯಾನದ ಗುರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕೆಂದು ಸಿಇಒ ಸೂಚಿಸಿದರು.

ಜಿಪಂ ಉಪ ಕಾರ್ಯದರ್ಶಿ ಕೆ. ತಿಮ್ಮಪ್ಪ, ಮುಖ್ಯ ಯೋಜನಾಧಿಕಾರಿ ಅನ್ನದಾನಸ್ವಾಮಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ದೀಪಾ ಉಪಸ್ಥಿತರಿದ್ದರು.