ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಾಸಕ ಮಹಾಂತೇಶ ಕೌಜಲಗಿ ಸೂಚನೆ ನೀಡಿದರು.

ನಗರದ ತಾಪಂ ಸಭಾಭವನದಲ್ಲಿ ಶನಿವಾರ ಬೈಲಹೊಂಗಲ ಮತ್ತು ಕಿತ್ತೂರು ಮತಕ್ಷೇತ್ರ ವ್ಯಾಪ್ತಿಯ ಗ್ರಾಮಗಳಿಗೆ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮವಹಿಸುವ ಬಗ್ಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮಗಳಲ್ಲಿ ನೀರು ವ್ಯರ್ಥವಾಗಿ ಹರಿಯದಂತೆ ನೋಡಿಕೊಳ್ಳುವುದು ವಾಟರ್‌ಮನ್‌ಗಳ ಕರ್ತವ್ಯ. ಸಾರ್ವಜನಿಕರಿಗೆ ಈ ಕುರಿತು ಜಾಗೃತಿ ಮೂಡಿಸಿ ನೀರು ವ್ಯರ್ಥ ಮಾಡುವುದನ್ನು ತಪ್ಪಿಸಬೇಕು. ಕುಡಿಯುವ ನೀರಿ‌ನ ಸಮಸ್ಯೆಯಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ನೀರಿನ ಲಭ್ಯತೆ ಬಗ್ಗೆ ನಿಖರ ಮಾಹಿತಿ ನೀಡಬೇಕು. ನೀರಿನ ಅಭಾವವಿರುವ ಕಡೆಗಳಲ್ಲಿ ಅಗತ್ಯವಿದ್ದರೆ ಬೋರ್‌ವೆಲ್‌ಗಳಿಂದ ನೀರನ್ನು ಪಡೆದು ಸಾರ್ವಜನಿಕರಿಗೆ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.ಚನ್ನಮ್ಮನ ಕಿತ್ತೂರು ಮತಕ್ಷೇತ್ರದ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಬೇಸಿಗೆ ಆರಂಭವಾಗಿದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರು ಪೋಲು ಮಾಡದಂತೆ ಜನರಿಗೆ ಅರಿವು ಮೂಡಿಸಬೇಕು. ಸಾರ್ವಜನಿಕರು ಅನವಶ್ಯಕ‌ ನೀರು ವ್ಯರ್ಥ ಮಾಡದೆ, ಮಿತವಾಗಿ ಬಳಸಬೇಕು ಎಂದರು. ತಾಪಂ ಇಒಗಳಾದ ಸಂಜೀವ ಜುನ್ನೂರ, ಆನಂದ ಬಡಕುಂದ್ರಿ, ಸಹಾಯಕ ಕಾರ್ಯಪಾಲಕ ಅಭಿಯಂತರಾದ ಅಜೀತಕುಮಾರ ಬಿರಾದಾರ, ಪ್ರೇಮ ರಾಥೋಡ ಹಾಗೂ ಬೈಲಹೊಂಗಲ, ಕಿತ್ತೂರು, ಸವದತ್ತಿ ತಾಲೂಕಿನ ಎಲ್ಲ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.