ಲಕ್ಷ್ಮೇಶ್ವರ: ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬುಧವಾರ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಟಾಸ್ಕ್‌ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ರಾಜ್ಯ ಮುಂಗಾರು ಮಳೆ ಕೊರತೆ ಎದುರಿಸುತ್ತಿದ್ದು, ತಾಲೂಕಿನಲ್ಲಿ ಭೀಕರ ಬರದ ಛಾಯೆ ಕಂಡುಬಂದಿದೆ. ಆದ್ದರಿಂದ ಸಾರ್ವಜನಿಕರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆದ್ದರಿಂದ ಅಧಿಕಾರಿಗಳು ಸಮರೋಪಾದಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಬೇಟಿ ನೀಡಿ ತುರ್ತು ಕ್ರಮ ಕೈಗೊಳ್ಳಬೇಕಾಗಿದೆ. ಅಗತ್ಯ ಇರುವ ಕಡೆ ಕೊಳವೆ ಬಾವಿ ಕೊರೆಯಿಸಿ ನೀರು ಕೊಡುವ ಕಡೆಗೆ ಗಮನ ಹರಿಸಬೇಕು ಎಂದು ಹೇಳಿದ ಅವರು, ಜಾನುವಾರುಗಳಿಗೆ ಮೇವಿನ ಸಂಗ್ರಹದ ಕುರಿತು ಪಶು ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ತಾಲೂಕಿನಲ್ಲಿ ರೈತರು ಬೆಳೆದ ಬೆಳಗಳು ಮಳೆ ಇಲ್ಲದೆ ಒಣಗುತ್ತಿವೆ. ಈ ವೇಳೆ ಅಧಿಕಾರಿಳು ಬೆಳೆ ಸಮೀಕ್ಷೆಯನ್ನು ವ್ಯವಸ್ಥಿತವಾಗಿ ಮಾಡಬೇಕು. ಆದರೆ ಬೆಳೆ ಸಮೀಕ್ಷೆ ಮಾಡುವಲ್ಲಿ ಪಿಆರ್‌ಒಗಳು ಸರಿಯಾಗಿ ಬೆಳೆ ಸಮೀಕ್ಷೆ ಮಾಡುತ್ತಿಲ್ಲವೆಂಬ ದೂರು ಕೇಳಿ ಬಂದಿವೆ. ಅದಕ್ಕಾಗಿ ಇನ್ನುಮುಂದೆ ಸರಿಯಾಗಿ ಬೆಳೆ ದಾಖಲಿಸಬೇಕು ಎಂದರು.ತಾಲೂಕಿನಲ್ಲಿ ವಿಬಿ ಜಿ ರಾಮ್ ಜಿ ಕಾಮಗಾರಿ ಕೆಲಸಗಳು ಆರಂಭವಾಗಿಲ್ಲ. ಆದರೂ ಅಧಿಕಾರಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕಾಮಗಾರಿ ಆರಂಭವಾಗಿವೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ಮುಂದೆ ಹೀಗಾಗಬಾರದು ಎಂದು ಹೇಳಿದ ಅವರು, ಬರುವ ಸೋಮವಾರದಿಂದ ವಿಬಿಜಿ ರಾಮ್ ಜಿ ಕಾಮಗಾರಿ ಆರಂಭಿಸಬೇಕು. ಇದರಿಂದ ಬಡ ಕೂಲಿ ಕಾರ್ಮಿಕರು ಗುಳೆ ಹೋಗುವುದನ್ನು ತಪ್ಪಿಸಲು ಸಾಧ್ಯ. ಆದ್ದರಿಂದ ಪಿಡಿಒಗಳು ಸೋಮವಾರದಿಂದ ಕೂಲಿಕಾರರಿಗೆ ಕೆಲಸ ನೀಡುವ ಕಾರ್ಯದಲ್ಲಿ ತೊಡಗಬೇಕು ಎಂದರು.
ತಾಲೂಕಿನ ಹಲವು ಗ್ರಾಮಗಳಲ್ಲಿ ಚರಂಡಿ ನೀರು ರಸ್ತೆ ಮೇಲೆ ನಿಂತು ಮಲೇರಿಯಾ ಹಾಗೂ ಕಾಲರಾದಂಥ ಮಹಾಮಾರಿ ರೋಗಗಳು ಒಕ್ಕರಿಸುವ ಸಂಭವವಿದ್ದು, ಗ್ರಾಮಗಳಲ್ಲಿ ಕೊಳಚೆ ನೀರು ನಿಲ್ಲದಂತೆ ಕ್ರಮ ವಹಿಸಬೇಕು ಎಂದರು.
ತಾಲೂಕಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಹಾಗೂ ಸರ್ಕಾರಿ ಕಾಮಗಾರಿಗಳಿಗೆ ವಿನಾಕಾರಣ ತಡೆ ಒಡ್ಡುವವರ ಮೇಲೆ ಅಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಪ್ರತಿಭಟನೆ ನಡೆಸುವವರು ಸರ್ಕಾರಿ ಕಚೇರಿಗಳಿಗೆ ನುಗ್ಗುವುದನ್ನು ತಡೆಗಟ್ಟಬೇಕು. ಅಂಥವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳು ಹೇಳಿದರು. ತಾಲೂಕಿನ ಹಲವು ಗ್ರಾಮಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ. ಸ್ಯಾಂಡ್ ಪಾಯಿಂಟಿನಲ್ಲಿ ಮರಳು ಇಲ್ಲದಿದ್ದರೂ ಮರಳು ಬರುತ್ತಿದೆ ಎಂಬುದು ಸೋಜಿಗದ ಸಂಗತಿ. ಬೇರೆ ಬೇರೆ ಹಳ್ಳಗಳಿಂದ ಮರಳು ಎತ್ತಿ ತಂದು ಸ್ಯಾಂಡ್ ಪಾಯಿಂಟನಲ್ಲಿ ಹಾಕಿ, ಅದನ್ನು ಪಾಯಿಂಟಿನಿಂದ ತಂದಿರುವುದಾಗಿ ಹೇಳಿ ಪಾಸ್ ನೀಡುವ ಮೂಲಕ ಮರಳು ಗಣಿಗಾರಿಕೆ ನಡೆಯುತ್ತಿದೆ. ಮರಳು ಮಾಫಿಯಾ ಬಗ್ಗೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ತಾಲೂಕು ಆಡಳಿತ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಎಚ್ಚರ ವಹಿಸಬೇಕು. ತಾಲೂಕಿನ ವಿವಿಧ ಸ್ಥಳಗಳಲ್ಲಿ ಮರಳು ಚೆಕ್ ಪೋಸ್ಟ್ ಶೀಘ್ರದಲ್ಲೇ ಮಾಡಬೇಕು. ಅಕ್ರಮ ಮರಳು ಗಣಿಗಾರಿಕೆ ತಡೆಯುವಲ್ಲಿ ವಿಫಲವಾದ ಗ್ರಾಮ ಲೆಕ್ಕಾಧಿಕಾರಿ ಹಾಗೂ ಪಿಡಿಒಗಳು ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.ತಹಸೀಲ್ದಾರ್ ಧನಂಜಯ ಎಂ. ಮಾತನಾಡಿ, ಅಧಿಕಾರಿಗಳು ಬರ ನಿರ್ವಹಣೆಯಲ್ಲಿ ಮುತುವರ್ಜಿ ವಹಿಸಬೇಕು. ಅಕ್ರಮ ಮರಳು ಹಾಗೂ ಮಣ್ಣು ಗಣಿಗಾರಿಕೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ಮುಂದಾಗಬೇಕು ಎಂದರು.
ಈ ವೇಳೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಂಜುಳಾ ಹಕಾರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.