ಸಾರಾಂಶ
ರಾಯಚೂರು: ಜಿಲ್ಲೆಯಲ್ಲಿ ನಡೆಯುತ್ತಿರುವ ಸೇಂಧಿ, ಕಳ್ಳಭಟ್ಟಿ, ಸಿಎಚ್ ಪೌಡರ್, ತಯಾರಿಕೆ, ಸಾಗಾಣಿಕೆ, ಸಂಗ್ರಹಣೆ ಹಾಗೂ ಮಾರಾಟವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಅಬಕಾರಿ ಇಲಾಖೆಯ ಜೊತೆಗೆ ಇನ್ನಿತರ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಹೆಚ್ಚಿನ ದಾಳಿಗಳನ್ನು ಮಾಡುವಂತೆ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಸೂಚನೆ ನೀಡಿರು.
ಸ್ಥಳೀಯ ಜಿಲ್ಲಾಧಿಕಾರಿ ಕಚೇರಿಯ ವಿಡಿಯೋ ಸಂವಾದದ ಕೊಠಡಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಳ್ಳಭಟ್ಟಿ ಸರಾಯಿ ಮತ್ತು ಸಿಎಚ್ ಪೌಡರ್ ಮಿಶ್ರಿತ ಸೇಂಧಿ ನಿರ್ಮೂಲನೆಗಾಗಿ ಜಿಲ್ಲಾಮಟ್ಟದ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಅಬಕಾರಿ ಕಾನೂನು ಬಾಹಿರ ಚಟುವಟಿಕೆಗಳ ಗುಪ್ತ ಮಾಹಿತಿ ಪಡೆದು ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳಬೇಕು. ಕಳ್ಳಭಟ್ಟಿ ಹಾಗೂ ಸೇಂಧಿ ಸೇವನೆಯಿಂದ ಆಗಬಹುದಾದ ಅನಾಹುತಗಳ ಬಗ್ಗೆ ಮುಂಜಾಗೃತ ಕ್ರಮ ಕೈಗೊಳ್ಳಬೇಕು ಎಂದರು.
ಕಳ್ಳಭಟ್ಟಿ, ಸೇಂಧಿ ಮಿಶ್ರಿತ ಮದ್ಯ ತಯಾರಿಕೆ, ಸಾಗಾಟ, ಸಂಗ್ರಹ ಹಾಗೂ ಮಾರಾಟ ಕಂಡುಬಂದಲ್ಲಿ ಕೂಡಲೇ ಅಂತವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಬೇಕು. ಪ್ರಕರಣಗಳು ಹೆಚ್ಚಳವಾದಲ್ಲಿ ಗಡಿಪಾರಿಗೆ ಪ್ರಸ್ತಾವನೆ ಕಳುಹಿಸುವಂತೆ ತಿಳಿಸಿದರು.ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಕೂಡ ಇರುತ್ತಾರೆ. ಅಂತಹ ಮಹಿಳೆಯರು ಮತ್ತು ಮಕ್ಕಳನ್ನು ಕಾನೂನು ಬಾಹಿರ ಚಟುವಟಿಕೆಯಿಂದ ಹೊರತರಬೇಕು. ಮಕ್ಕಳನ್ನು ಶಾಲೆಗೆ ದಾಖಲಿಸಬೇಕು. ಮಹಿಳೆಯರಿಗೆ ಸರ್ಕಾರದ ಯೋಜನೆಗಳಡಿ ಸೌಲಭ್ಯ ಕಲ್ಪಿಸಿ ತರಬೇತಿಗಳನ್ನು ನೀಡಿ ಉದ್ಯೋಗ ಒದಗಿಸುವ ಕಾರ್ಯವಾಗಬೇಕು ಎಂದು ಸೂಚಿಸಿದರು.
ಆರೋಗ್ಯ ಇಲಾಖೆಯಿಂದ ಸೇಂಧಿ, ಕಳ್ಳಭಟ್ಟಿ ಸರಾಯಿಗೆ ದಾಸರಾದ ವ್ಯಸನಿಗಳನ್ನು ಸರಿಯಾದ ವೈದ್ಯಕೀಯ ತಪಾಸಣೆ ಮಾಡಿ, ವ್ಯಸನಮುಕ್ತ ಕೇಂದ್ರಗಳಿಗೆ ಕಳುಹಿಸಬೇಕು. ಈ ಕುರಿತು ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳು ಮತ್ತು ಆರೋಗ್ಯ ಶಿಬಿರಗಳನ್ನು ಏರ್ಪಡಿಸಬೇಕು ಎಂದು ತಿಳಿಸಿದರು.ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ, ತಹಸೀಲ್ದಾರ್ ಸುರೇಶ ವರ್ಮಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರಬಾಬು, ರೈಲ್ವೆ ಪೊಲೀಸ್ ಅಧಿಕಾರಿಗಳಾದ ಅಭಿಷೇಕ ಕುಮಾರ, ವೀರಭದ್ರಯ್ಯ, ಶಿಕ್ಷಣ ಇಲಾಖೆಯ ಅಧಿಕಾರಿ ಕೆ.ಪ್ರಭು, ಶಿಶು ಅಭಿವೃದ್ಧಿ ಅಧಿಕಾರಿ ಶರಣಮ್ಮ, ಅಬಕಾರಿ ಇಲಾಖೆಯ ಉಪ ಅಧೀಕ್ಷಕ ಬಿ.ಕೃಷ್ಣ ಹರಿ, ಅಬಕಾರಿ ಇಲಾಖೆಯ ನಿರೀಕ್ಷಕರಾದ ಹನುಮಂತ ಗುತ್ತೇದಾರ, ಯಮನೂರ ಸಾಬ ಹೊಸಮನಿ, ಸಿದ್ದರೂಡ, ಆರ್ ಕವಿತಾ, ಶೈಲಜಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.