ಇಲ್ಲಿನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಖರೀದಿಸಿದ ವೈದ್ಯಕೀಯ ಉಪಕರಣಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಂತೆ ಮತ್ತು ರೋಗಿಗಳ ಚಿಕಿತ್ಸೆ ಮತ್ತು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ವೈದ್ಯರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಸಂಸ್ಥೆಯ ಡೀನ್‌ಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಿಸೀನ್ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಕಾರವಾರಇಲ್ಲಿನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಖರೀದಿಸಿದ ವೈದ್ಯಕೀಯ ಉಪಕರಣಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಂತೆ ಮತ್ತು ರೋಗಿಗಳ ಚಿಕಿತ್ಸೆ ಮತ್ತು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ವೈದ್ಯರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಸಂಸ್ಥೆಯ ಡೀನ್‌ಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಿಸೀನ್ ಸೂಚನೆ ನೀಡಿದರು.ಸೋಮವಾರ ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಭೇಟಿ ನೀಡಿ, ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ರೋಗಿಗಳ ಚಿಕಿತ್ಸೆಗೆ ಖರೀದಿಸುವ ವೈದ್ಯಕೀಯ ಉಪಕರಣಗಳು ನಿಗದಿತ ಮಾನದಂಡಗಳನ್ನು ಹೊಂದಿರುವ ಬಗ್ಗೆ ಪರಿಶೀಲಿಸಿ, ಅತ್ಯಾಧುನಿಕವಾದ ಮತ್ತು ದೀರ್ಘ ಕಾಲದ ಬಳಕೆಗೆ ಯೋಗ್ಯವಾಗಬಹುದಾದ ಉಪಕರಣಗಳನ್ನು ಖರೀದಿಸುವ ಮೂಲಕ ರೋಗಿಗಳ ಉತ್ತಮ ವೈದ್ಯಕೀಯ ಸೌಲಭ್ಯಗಳು ದೊರೆಯುವಂತೆ ನೋಡಿಕೊಳ್ಳಿ ಎಂದರು.

ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಉತ್ತಮ ರೀತಿಯ ಆರೈಕೆ ಮತ್ತು ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಬೇಕು, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ ಅವರು, ಆಸ್ಪತ್ರೆ ಆವರಣದಲ್ಲಿ ಸ್ವಚ್ಛತೆಗೆ ಹೆಚ್ಚಿನ ಅದ್ಯತೆ ನೀಡಿ, ವೈದ್ಯಕೀಯ ತ್ಯಾಜ್ಯಗಳನ್ನು ಸಮರ್ಪಕ ರೀತಿಯಲ್ಲಿ ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡುವಂತೆ ಸೂಚಿಸಿದರು.ಪ್ರಸ್ತುತ ಹೊಸ ಕಟ್ಟಡದಲ್ಲಿ ಕೆಲವು ವಿಭಾಗಗಳು ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ವಿಭಾಗಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಿ, ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯಗಳಿದ್ದರೂ ಖಾಸಗಿ ಆಸ್ಪತ್ರೆಗಳಿಗೆ ರೆಫರಲ್ ಮಾಡುವುದು ಕಂಡು ಬಂದಲ್ಲಿ ಅಂತಹ ವೈದ್ಯರನ್ನು ಅಮಾನತು ಸೇರಿದಂತೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ ಅವರು, ಚಿಕಿತ್ಸಾ ವೆಚ್ಚದ ಮರು ಪಾವತಿ ಕುರಿತ ಗೊಂದಲಗಳನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ. ಆಸ್ಪತ್ರೆಯ ನಿರ್ವಹಣೆಗೆ ಅಗತ್ಯವಿರುವ ಆರ್ಥಿಕ ಸಂಪನ್ಮೂಲದ ಕ್ರೂಢೀಕರಣಕ್ಕೆ ಸರ್ಕಾರದ ಮಾರ್ಗಸೂಚಿಯಂತೆ ದರಗಳನ್ನು ಪರಿಷ್ಕರಣೆ ಮಾಡುವಂತೆ ತಿಳಿಸಿದರು.

ಪ್ರಸ್ತುತ ಕ್ರಿಮ್ಸ್ ನಲ್ಲಿ ಹೊರರೋಗಿಗಳು ಮತ್ತು ಒಳರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆಯ ಸಂಖ್ಯೆಯಲ್ಲಿ ಹೆಚ್ಚಳವಾಗಬೇಕು, ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ಪಡೆಯುವಂತೆ ಅವರಿಗೆ ಎಲ್ಲಾ ಸೌಲಭ್ಯಗಳನ್ನು ಮತ್ತು ಇನ್ನೂ ಹೆಚ್ಚಿನ ಉತ್ತಮ ಶುಶ್ರೂಷೆ ನೀಡಬೇಕು, ಸಾರ್ವಜನಿಕರು ಮತ್ತು ರೋಗಿಗಳಿಂದ ದೂರುಗಳು ಬಾರದಂತೆ ಪ್ರತಿಯೊಬ್ಬರೂ ಕರ್ತವ್ಯ ನಿರ್ವಹಿಸಬೇಕು ಎಂದರು.ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ಅವರು, ರೋಗಿಗಳೊಂದಿಗೆ ಅವರಿಗೆ ದೊರೆಯುತ್ತಿರುವ ಚಿಕಿತ್ಸೆಯ ಗುಣಮಟ್ಟದ ಕುರಿತಂತೆ ಪ್ರಶ್ನಿಸಿ, ಉತ್ತಮ ಚಿಕಿತ್ಸೆ ದೊರೆಯುತ್ತಿರುವ ಬಗ್ಗೆ ಖಚಿತಪಡಿಸಿಕೊಂಡರು.ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಕ್ರಿಮ್ಸ್ ನ ಡೀನ್ ಡಾ. ಪೂರ್ಣಿಮಾ, ಮುಖ್ಯ ಲೆಕ್ಕಾಧಿಕಾರಿ ಹಾಗೂ ಆರ್ಥಿಕ ಸಲಹೆಗಾರ ಆನಂದಸಾ ಹಬೀಬ್ ಇದ್ದರು.