ಬರ ನಿರ್ವಹಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ: ಸಿಎಂ ಸಿದ್ದರಾಮಯ್ಯ

| Published : Mar 06 2024, 02:21 AM IST

ಬರ ನಿರ್ವಹಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ: ಸಿಎಂ ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಬರದಂದಾಗಿ 48 ಲಕ್ಷ ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದೆ. ಮಳೆ ಕೊರತೆಯಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಭಣಿಸುತ್ತಿದ್ದು, ಮಾರ್ಚ್‌, ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಪರಿಸ್ಥಿತಿ ಗಂಭೀರವಾಗಲಿದೆ. ಪೂರ್ವ ಮುಂಗಾರು ಮಳೆಯನ್ನು ಕೆಲವೆಡೆ ನಿರೀಕ್ಷಿಸಲಾಗಿದೆ. ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು ಪರಿಸ್ಥಿತಿ ಅವಲೋಕಿಸಿ, ಸೂಕ್ತ ಯೋಜನೆ ರೂಪಿಸಿ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಮುಂಗಾರು, ಹಿಂಗಾರು ಮಳೆ ಕೊರತೆಯಿಂದ ತೀವ್ರ ಬರ ಎದುರಾಗಿದ್ದು, ಜನ-ಜಾನುವಾರಿಗೆ ತೊಂದರೆಯಾಗದಂತೆ ಕುಡಿಯುವ ನೀರು, ರಾಸುಗಳಿಗೆ ಮೇವು ಕೊರತೆಯಾಗದಂತೆ ಪೂರೈಸಲು, ಜನರಿಗೆ ಉದ್ಯೋಗ ನೀಡಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.

ವಿಧಾನಸೌಧದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಮಂಗಳವಾರ ನಡೆಸಿದ ವೀಡಿಯೋ ಸಂವಾದದಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 855 ಕೋಟಿ ರು. ಬರ ನಿರ್ವಹಣೆ ಅನುದಾನ ಲಭ್ಯವಿದೆ. ಜೊತೆಗೆ ಪ್ರತಿ ಜಿಲ್ಲೆಗೆ 2 ಕೋಟಿ ರು. ಹೆಚ್ಚುವರಿಯಾಗಿ ಅನುದಾನ ನೀಡಲಾಗುವುದು. ಬರ ನಿರ್ವಹಣೆಗೆ ಸೂಕ್ತ ಮುಂಜಾಗ್ರತಾ ಕ್ರಮಗಳ ಕಟ್ಟುನಿಟ್ಟಾಗಿ ಕೈಗೊಳ್ಳಿ ಎಂದರು.

ಬರದಂದಾಗಿ 48 ಲಕ್ಷ ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದೆ. ಮಳೆ ಕೊರತೆಯಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಭಣಿಸುತ್ತಿದ್ದು, ಮಾರ್ಚ್‌, ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಪರಿಸ್ಥಿತಿ ಗಂಭೀರವಾಗಲಿದೆ. ಪೂರ್ವ ಮುಂಗಾರು ಮಳೆಯನ್ನು ಕೆಲವೆಡೆ ನಿರೀಕ್ಷಿಸಲಾಗಿದೆ. ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು ಪರಿಸ್ಥಿತಿ ಅವಲೋಕಿಸಿ, ಸೂಕ್ತ ಯೋಜನೆ ರೂಪಿಸಿ ಎಂದು ಸೂಚಿಸಿದರು.

ಕಂಟ್ರೋಲ್ ರೂಂ ಆರಂಭಿಸಿ:

ನರೇಗಾ ಉದ್ಯೋಗ ದಿನಗಳನ್ನು 100ರಿಂದ 150 ದಿನಕ್ಕೆ ಹೆಚ್ಚಿಸಲು ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಬರ ಹಿನ್ನೆಲೆಯಲ್ಲಿ ಜನರಿಗೆ ಉದ್ಯೋಗ ನೀಡುವ ಮೂಲಕ ವಲಸೆ ತಪ್ಪಿಸಬಹುದು. ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸಲು ಅನುಕೂಲವಾಗುವಂತೆ ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಂ ಆರಂಭಿಸಬೇಕು. ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ರಜೆ ಮೇಲೆ ತೆರಳದೇ, ಜನರ ಸಮಸ್ಯೆ ನಿವಾರಣೆಗೆ ಶ್ರಮಿಸಬೇಕು. ತಾಲೂಕು ಮಟ್ಟದ ಟಾಸ್ಕ್ ಫೋರ್ಸ್‌ಗಳು ನಿಯಮಿತ ಸಭೆ ನಡೆಸಿ, ಮುಂಜಾಗ್ರತಾ ಕ್ರಮ ನಿರ್ಧರಿಸಬೇಕು ಎಂದು ಹೇಳಿದರು.

21 ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಕೆ:

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ಮಾತನಾಡಿ, ಜಿಲ್ಲೆಯ 36 ಗ್ರಾಪಂ ವ್ಯಾಪ್ತಿಯ 175 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮವೆಂದು ಗುರುತಿಸಲಾಗಿದೆ. ಈ ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಖಾಸಗಿ ಕೊಳ‍ವೆ ಬಾವಿಗಳ ಗುರುತಿಸಲಾಗಿದೆ. ಈವರೆಗೆ 21 ಖಾಸಗಿ ಕೊಳವೆ ಬಾವಿಗಳ ಬಾಡಿಗೆ ಪಡೆದು, ನೀರು ಪೂರೈಸಲಾಗುತ್ತಿದೆ. ತುರ್ತು ಸಂದರ್ಭದಲ್ಲಿ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಸಲು ಎಲ್ಲಾ ತಾಲೂಕುಗಳಲ್ಲಿ ಟ್ಯಾಂಕರ್ ಸರಬರಾಜು ದರಪಟ್ಟಿ ನಿಗದಿಗೆ, ಟೆಂಡರ್ ಪ್ರಕ್ರಿಯೆ ಪೂರ್ಣವಾಗಿದೆ ಎಂದರು.

ಸಹಾಯವಾಣಿ ಸ್ಥಾಪನೆಗೆ ಸೂಚನೆ:

ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 16.78 ಕೋಟಿ, ಜಿಲ್ಲೆಯ ಎಲ್ಲಾ ತಹಸೀಲ್ದಾರರ ಪಿಡಿ ಖಾತೆಯಲ್ಲಿ 2.67 ಕೋಟಿ ಹಣವಿದೆ. ಬರ ಪರಿಹಾರದ ಕಂಟ್ರೋಲ್ ರೂಂಗಳು ದಿನದ 24 ಗಂಟೆ ಕಾರ್ಯ ನಿರ್ವಹಿಸಲು ಎಲ್ಲಾ ತಾಲೂಕುಗಳಲ್ಲಿ ಸಹಾಯವಾಣಿ ಸ್ಥಾಪಿಸಲು ಸೂಚಿಸಿದೆ. ಜಿಪಂನಿಂದ ದೂ-08192-226655 ಸಹಾಯವಾಣಿ ಸ್ಥಾಪಿಸಿದ್ದು, ದಿನದ ಮೂರು ಪಾಳಿಕೆಯಲ್ಲಿ ಕೆಲಸ ಮಾಡಲು ಸಿಬ್ಬಂದಿ ನಿಯೋಜಿಸಿದೆ ಎಂದು ಮುಖ್ಯಮಂತ್ರಿ ಗಮನಕ್ಕೆ ತಂದರು.

ಜಿಪಂ ಸಿಇಒ ಡಾ.ಸುರೇಶ ಬಿ.ಇಟ್ನಾಳ್, ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ, ತಹಸೀಲ್ದಾರ ಅಶ್ವತ್ಥ, ಪಾಲಿಕೆ ಆಯುಕ್ತೆ ರೇಣುಕಾ ಸೇರಿ ವಿವಿಧ ಇಲಾಖೆಗಳು, ಕಂದಾಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ಮೇವು ಕಿಟ್ ವಿತರಣೆಗೆ ಕ್ರಮ

ದಾವಣಗೆರೆ ಜಿಲ್ಲೆಯಲ್ಲಿ ಮುಂದಿನ 37 ವಾರಕ್ಕಾಗುವಷ್ಟು ಮೇವು ದಾಸ್ತಾನು ಲಭ್ಯವಿದೆ. ಮುಂದಿನ ದಿನಗಳಲ್ಲಿ ಬರಗಾಲದಿಂದ ಮೇವಿನ ಕೊರತೆಯಾಗಬಾರದೆಂದು ಮೇವಿನ ಕಿಟ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಮೇವು ಕೊರತೆಯಾದಾಗ ನೆರವಿಗೆ ಮೇವಿನ ಬ್ಯಾಂಕ್ ತೆರೆಯಲು ಸ್ಥಳ ಗುರುತಿಸಲಾಗಿದೆ.

ಡಾ.ಎಂ.ವಿ.ವೆಂಕಟೇಶ, ಜಿಲ್ಲಾಧಿಕಾರಿ

ಜನರ ಸಮಸ್ಯೆಗಳ ಕುರಿತ ವರದಿಗಳಿಗೆ ಸ್ಪಂದಿಸಿ

ಬರ ಹಿನ್ನೆಲೆಯಲ್ಲಿ ಮಾಧ್ಯಮಗಳಲ್ಲಿ ಪ್ರಕಟವಾಗುವ ಜನರ ಸಮಸ್ಯೆಗಳ ಕುರಿತ ವರದಿಗಳ ಪರಿಶೀಲಿಸಿ, ತಕ್ಷಣ ಅವುಗಳಿಗೆ ಸ್ಪಂದಿಸಬೇಕು. ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು. ಟ್ಯಾಂಕರ್‌, ಖಾಸಗಿ ಕೊಳವೆ ಬಾವಿ ಸೇರಿ ಯಾವುದೇ ಜಲ ಮೂಲಗಳಿಂದ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು. ನೀರು ಪೂರೈಕೆಗೆ ಅಗತ್ಯ ಅನುದಾನವನ್ನು ಸರ್ಕಾರ ಒದಗಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.