ಸಾರಾಂಶ
ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಉದ್ಭವಲಿಂಗ ಅಮರೇಶ್ವರ ದಹಿ ಹಂಡಿ ಉತ್ಸವ ಸಮಿತಿಯಿಂದ ಔರಾದ್ (ಬಿ) ಪಟ್ಟಣದಲ್ಲಿ ಶನಿವಾರ ನಡೆದ ‘ದಹಿ ಹಂಡಿ ಸ್ಪರ್ಧೆ’ ಜನಮನ ಸೆಳೆಯಿತು. ಯುವಕರ ತಂಡಗಳು ಉತ್ಸಾಹದಿಂದ ಪಾಲ್ಗೊಂಡವು.
ಕನ್ನಡಪ್ರಭ ವಾರ್ತೆ ಔರಾದ್
ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಉದ್ಭವಲಿಂಗ ಅಮರೇಶ್ವರ ದಹಿ ಹಂಡಿ ಉತ್ಸವ ಸಮಿತಿಯಿಂದ ಔರಾದ್ (ಬಿ) ಪಟ್ಟಣದಲ್ಲಿ ಶನಿವಾರ ನಡೆದ ‘ದಹಿ ಹಂಡಿ ಸ್ಪರ್ಧೆ’ ಜನಮನ ಸೆಳೆಯಿತು. ಯುವಕರ ತಂಡಗಳು ಉತ್ಸಾಹದಿಂದ ಪಾಲ್ಗೊಂಡವು.ಶ್ರೀ ಕೃಷ್ಣನ ಬಾಲಲೀಲೆಗಳನ್ನು ಪ್ರತಿಬಿಂಬಿಸುವ ದಹಿ ಹಂಡಿ ಸ್ಪರ್ಧೆಗಾಗಿ ಹೂಹಾರಗಳಿಂದ ಅಲಂಕೃತಗೊಂಡ ಕ್ರೇನ್‌ಗೆ ಎತ್ತರದಲ್ಲಿ ಹಗ್ಗಕ್ಕೆ ಹಂಡಿ(ಮಡಕೆ) ಕಟ್ಟಲಾಗಿತ್ತು. ಯುವಕರ ತಂಡಗಳು ಮಾನವ ಗೋಪುರ ನಿರ್ಮಿಸಿ ಹಂಡಿ ಒಡೆಯಲು ಹಲವು ಪ್ರಯತ್ನಗಳನ್ನು ನಡೆಸಿದವು.‘ಗೋವಿಂದಾ ಆಲಾ ರೇ!’ ಎಂಬ ಘೋಷಣೆಗಳ ಮಧ್ಯೆ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿತು.
ಶಾಸಕ ಪ್ರಭು ಚವ್ಹಾಣ ಅಮರೇಶ್ವರ ಹಾಗೂ ಶ್ರೀಕೃಷ್ಣನ ಭಾವಚಿತ್ರಕ್ಕೆ ಪೂಜೆ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೃಷ್ಣ-ರುಕ್ಮಿಣಿ ವೇಷಧಾರಿಗಳಾಗಿ ಆಗಮಿಸಿದ್ದ ಮಕ್ಕಳಿಗೆ ಶಾಸಕರು ಬಹುಮಾನ ನೀಡಿ ಪ್ರೋತ್ಸಾಹಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ, ನಮ್ಮ ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಶಾಸಕ ಪ್ರಭು ಚವ್ಹಾಣ ಅವರು ನಿರಂತರ ಶ್ರಮಿಸುತ್ತಿದ್ದಾರೆ ಎಂದರು. ಅಮರೇಶ್ವರ ದಹಿ ಹಂಡಿ ಉತ್ಸವ ಸಮಿತಿಯ ಅಧ್ಯಕ್ಷ ಶಿವರಾಜ ಅಲ್ಮಾಜೆ ಪ್ರಾಸ್ತಾವಿಕ ಮಾತನಾಡಿದರು.
ಗದಗ ಜಿಲ್ಲೆ ಕಲಕೇರಿ ಮಠದ ನವೀನ ಶಾಸ್ತ್ರೀಗಳು ಸಾನ್ನಿಧ್ಯ ವಹಿಸಿದ್ದರು. ಔರಾದ (ಬಿ) ಪಟ್ಟಣ ಪಂಚಾಯತ್ ಅಧ್ಯಕ್ಷೆ ಸರುಬಾಯಿ ಘೂಳೆ, ತಹಸೀಲ್ದಾರ್ ಮಹೇಶ ಪಾಟೀಲ, ತಾ.ಪಂ ಅಧಿಕಾರಿ ಅಧಿಕಾರಿ ಕಿರಣ ಪಾಟೀಲ, ಮುಖಂಡರಾದ ಮಾರುತಿ ಚವ್ಹಾಣ, ರಾಮಶೆಟ್ಟಿ ಪನ್ನಾಳೆ, ಶಿವಾಜಿರಾವ ಪಾಟೀಲ ಮುಂಗನಾಳ, ದಯಾನಂದ ಘೋಳೆ, ಸಂಜು ವಡೆಯರ್, ಬಾಬು ಪವಾರ್, ಸಚಿನ ರಾಠೋಡ, ಕೇರಬಾ ಪವಾರ್, ಉದಯ ಸೋಲಾಪೂರೆ, ಸುಜಿತ ರಾಠೋಡ, ಪ್ರದೀಪ ಪವಾರ, ಧನಾಜಿ ರಾಠೋಡ, ಅಶೋಕ ಶೆಂಬೆಳ್ಳಿ, ಸಂದೀಪ ಪಾಟೀಲ, ಬಸವರಾಜ ಹಳ್ಳೆ, ರಾಮ ನರೋಟೆ ಸೇರಿದಂತೆ ಇತರರು ಉಪಸ್ಥಿತರಿದ್ದರು.ಔರಾದ (ಬಿ) ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಾ ವಿದ್ಯಾಲಯದ ವಿದ್ಯಾರ್ಥಿಗಳ ತಂಡವು ಅತಿ ಕಡಿಮೆ ಅವಧಿಯಲ್ಲಿ ದಹಿ ಹಂಡಿ ಒಡೆಯುವ ಮೂಲಕ ಗೆಲುವಿನ ನಗೆ ಬೀರಿತು. ಅಮರೇಶ್ವರ ಪದವಿ ಕಾಲೇಜು ತಂಡ ದ್ವಿತೀಯ ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಕಾಲೆಜು ತಂಡ ತೃತೀಯ ಸ್ಥಾನ ಪಡೆಯಿತು.