ಸಾರಾಂಶ
ಹುಬ್ಬಳ್ಳಿ: ಜನತೆ ಅಂಗವಿಕಲರನ್ನು ಹೊರೆ ಎಂದು ಭಾವಿಸಬಾರದು. ಹುಟ್ಟು ದೈವಿಚ್ಛೆ. ಭಗವಂತ ನೀಡಿದ ಬದುಕನ್ನೇ ಸಾಧನೆಯ ಮೆಟ್ಟಿಲಾಗಿ ರೂಪಿಸಿಕೊಳ್ಳಬೇಕು. ಎಲ್ಲ ಸರಿ ಇದ್ದವರು ಸಾಧಿಸಲಾಗದ್ದನ್ನು, ಸರಿಯಿಲ್ಲದವರು ಸಾಧಿಸಿ ತೋರಿಸಿದ್ದಾರೆ ಎಂದು ವಿಪ ವಿರೋಧ ಪಕ್ಷದ ಮುಖ್ಯಸಚೇತಕ ಎನ್. ರವಿಕುಮಾರ್ ಹೇಳಿದರು.
ಭಾನುವಾರ ನಗರದ ಹೊಸೂರಿನ ಕನ್ನಡ ವೈಶ್ಯ ಸಮಾಜ ಸಭಾಂಗಣದಲ್ಲಿ ಸಕ್ಷಮ ಉತ್ತರ ಕರ್ನಾಟಕ ಪ್ರಾಂತ್‌ದಿಂದ ಹಮ್ಮಿಕೊಂಡಿದ್ದ "ಸಕ್ಷಮ್ ಉತ್ತರ ಕರ್ನಾಟಕ ಪ್ರಾಂತ್ ಅಧಿವೇಶನ " ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದಲ್ಲ ಒಂದು ಕೊರತೆ ಇದ್ದೇ ಇರುತ್ತದೆ. ಕೈ ಇದ್ದವರಿಗೆ ಕಾಲು ಇರಲ್ಲ, ಕಾಲು ಇದ್ದವರಿಗೆ ಕಣ್ಣು ಇರುವುದಿಲ್ಲ. ಕೈ–ಕಾಲು ಇದ್ದವರಿಗೆ ಮಾತನಾಡಲು ಬರುವುದಿಲ್ಲ.
ಇವೆಲ್ಲ ಸರಿ ಇದ್ದ ಕೆಲವರಿಗೆ ಬುದ್ಧಿಯೇ ಇರುವುದಿಲ್ಲ. ಅಂಗಾಂಗ ವೈಕಲ್ಯದ ಜತೆಗೆ ಬುದ್ಧಿಭ್ರಮಣೆಯೂ ಇರುತ್ತದೆ. ಅಂಗವಿಕಲರನ್ನು ಸಮಾಜ ನೋಡುವ ದೃಷ್ಟಿಕೋನ ಬದಲಾಗಬೇಕು. ಇಲ್ಲಿ ಯಾರೂ ಪರಿಪೂರ್ಣರಲ್ಲ ಎಂಬುದನ್ನು ಈ ಸಮಾಜ ಮೊದಲು ಅರಿತುಕೊಳ್ಳಬೇಕಿದೆ ಎಂದರು.
ಎಲ್ಲವೂ ಸರಿಯಾಗಿದ್ದವರು ಮಾತ್ರ ಸಮರ್ಥರಾಗಿರುತ್ತಾರೆ ಎನ್ನುವ ಭಾವನೆ ಹೊಂದುವುದು ತಪ್ಪು. ಅಪೂರ್ಣರೆಲ್ಲ ಸೇರಿದಾಗ ಸಮಾಜ ಪೂರ್ಣವಾಗುತ್ತದೆ ಎಂಬ ಅರಿವನ್ನು ಪ್ರತಿಯೊಬ್ಬರೂ ಹೊಂದಿ.
ಅಂಗವಿಕಲರೆಲ್ಲರೂ ಸಮರ್ಥರು, ಸಮಾಜಕ್ಕೆ ದಾರಿದೀಪವಿದ್ದಂತೆ. ಇವರೆಲ್ಲ ಸಮಾಜದ ಮುಖ್ಯವಾಹಿನಿಗೆ ಬರದೇ ಇದ್ದರೆ ಭಾರತ ಪೂರ್ಣವಾಗದು ಎಂದರು.
ಅಂಗವಿಕಲರ ಸಮಸ್ಯೆಗಳು ಯಾವುವು? ಬೇಡಿಕೆಗಳು ಏನು? ಎನ್ನುವ ಪಟ್ಟಿ ಸಿದ್ಧಪಡಿಸಿ. ನಿಮ್ಮ ಜೊತೆ 5-6 ಮಂದಿ ಶಾಸಕರು ಸೇರಿ ನಿಮ್ಮ ಬೇಕು ಬೇಡಿಕೆಗಳ ಕುರಿತು ಚರ್ಚಿಸುತ್ತೇವೆ.
ನಂತರ ರಾಜ್ಯಪಾಲರು, ಮುಖ್ಯಮಂತ್ರಿಯನ್ನು ಭೇಟಿಯಾಗಿ ಸರ್ಕಾರದ ಕಣ್ಣು ತೆರಿಸಿ ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯ ಪಡೆಯಲು ಪ್ರಯತ್ನಿಸೋಣ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಕ್ಷಮ್ ಅಧ್ಯಕ್ಷ ಎಸ್.ಜಿ. ಶೆಟ್ಟಿ ಮಾತನಾಡಿ, ಏಕ ಗವಾಕ್ಷಿ ಪದ್ಧತಿಯಲ್ಲಿ ಅಂಗವಿಕಲರ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಅನುವು ಮಾಡಿಕೊಡಬೇಕು. ಶಿಕ್ಷಣ, ವೈದ್ಯಕೀಯ, ಉದ್ಯೋಗ, ಬಡತನ ನಿವಾರಣೆ, ತರಬೇತಿ ಕಾರ್ಯಕ್ರಮಗಳ ಮಾಹಿತಿ ಸಹ ಅದರಲ್ಲಿಯೇ ದೊರೆಯುವಂತಾಗಬೇಕು.
ಅಂಗವಿಕಲರ ಅಂಕಿ-ಸಂಖ್ಯೆಗಳು ಹಾಗೂ ಶಿಕ್ಷಣ, ಆರ್ಥಿಕ ಸ್ಥಿತಿ, ಉದ್ಯೋಗದ ಮಾಹಿತಿಗಳು ಪ್ರತಿ ಜಿಲ್ಲೆಯಲ್ಲಿ ಸುಲಭವಾಗಿ ದೊರೆಯುವಂತಾಗಬೇಕು.
ಇದರಿಂದ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುತ್ತದೆ. ಪಂಚಾಯಿತಿಯಿಂದ ಲೋಕಸಭೆಯ ವರೆಗೂ ಸ್ಪರ್ಧಿಸಲು ಅಂಗವಿಕಲರಿಗೆ ಮೀಸಲಾತಿ ಒದಗಿಸಬೇಕು ಎಂದು ಆಗ್ರಹಿಸಿದರು.
ಡಾ. ಸುಭಾಸ ಬೊಬ್ರುವಾಡ ಮಾತನಾಡಿದರು. ಸಕ್ಷಮ್ ರಾಷ್ಟ್ರೀಯ ಅಧ್ಯಕ್ಷ ಗೋವಿಂದರಾಜ್, ಶ್ರೀಧರ ನಾಡಗೇರ, ಮುರುಳಿಕೃಷ್ಣ, ಪ್ರಸನ್ನ ಶೆಟ್ಟಿ, ನಾಗಲಿಂಗ ಮುರುಗಿ, ಡಾ. ಸುನೀಲ ಗೋಗಿ, ಅರವಿಂದರಾವ್ ದೇಶಪಾಂಡೆ ಸೇರಿದಂತೆ ಹಲವರಿದ್ದರು.