ಪತ್ರಿಕೋದ್ಯಮ ಉದ್ಯೋಗ ಅವಕಾಶಗಳ ಸದ್ಬಳಕೆ ಮುಖ್ಯ

| Published : Oct 23 2024, 12:51 AM IST / Updated: Oct 23 2024, 12:52 AM IST

ಸಾರಾಂಶ

ಆಧುನಿಕ ಜಗತ್ತಿನಲ್ಲಿ ಪತ್ರಿಕೋದ್ಯಮ ಬಹಳ ವಿಶಾಲವಾಗಿ ಬೆಳೆಯುತ್ತಿದ್ದು, ಇದು ಸೃಷ್ಟಿಸುತ್ತಿರುವ ಸಾಕಷ್ಟು ಅವಕಾಶಗಳನ್ನು ಪತ್ರಿಕೋದ್ಯಮ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸದ್ಬಳಕೆ ಮಾಡಿಕೊಂಡು, ಜೀವನ ರೂಪಿಸಿಕೊಳ್ಳಬೇಕು ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಶಿವಕುಮಾರ ಕಣಸೋಗಿ ಹೇಳಿದರು.

- ಪತ್ರಕರ್ತರಿಗೆ ಮಹಾತ್ಮ ಗಾಂಧಿ ಸೇವಾ ಮಾಧ್ಯಮ ಪ್ರಶಸ್ತಿ- ಉಪನ್ಯಾಸ ಕಾರ್ಯಕ್ರಮದಲ್ಲಿ ಶಿವಕುಮಾರ ಕಣಸೋಗಿ ಸಲಹೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ ಆಧುನಿಕ ಜಗತ್ತಿನಲ್ಲಿ ಪತ್ರಿಕೋದ್ಯಮ ಬಹಳ ವಿಶಾಲವಾಗಿ ಬೆಳೆಯುತ್ತಿದ್ದು, ಇದು ಸೃಷ್ಟಿಸುತ್ತಿರುವ ಸಾಕಷ್ಟು ಅವಕಾಶಗಳನ್ನು ಪತ್ರಿಕೋದ್ಯಮ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸದ್ಬಳಕೆ ಮಾಡಿಕೊಂಡು, ಜೀವನ ರೂಪಿಸಿಕೊಳ್ಳಬೇಕು ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಶಿವಕುಮಾರ ಕಣಸೋಗಿ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಕರುಣಾ ಜೀವ ಕಲ್ಯಾಣ ಟ್ರಸ್ಟ್‌, ಪತ್ರಿಕೋದ್ಯಮ ವಿಭಾಗದಿಂದ ಪತ್ರಕರ್ತರಿಗೆ ಮಹಾತ್ಮ ಗಾಂಧಿ ಸೇವಾ ಮಾಧ್ಯಮ ಪ್ರಶಸ್ತಿ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾಧ್ಯಮ ಕ್ಷೇತ್ರ ಬೆಳೆದಂತೆಲ್ಲಾ ಅದರ ಆಳ, ಅಗಲವೂ ವಿಸ್ತಾರವಾಗುತ್ತದೆ. ಅವಕಾಶ ಸದ್ಬಳಕೆ ಮಾಡಿಕೊಳ್ಳುವ ಕೆಲಸ ಪತ್ರಿಕೋದ್ಯಮ ವಿದ್ಯಾರ್ಥಿಗಳಿಂದ ಆಗಬೇಕು ಎಂದರು.

ಬರವಣಿಗೆಯೇ ಪತ್ರಕರ್ತರಿಗೆ ಧೈರ್ಯ ತಂದು ಕೊಡುತ್ತದೆ. ಎದುರಿಗೆ ಯಾವುದೇ ವ್ಯಕ್ತಿ, ಸ್ಥಾನಮಾನದವರಿದ್ದರೂ ಧೈರ್ಯವಾಗಿ ಪ್ರಶ್ನೆ ಕೇಳುವ ಗಟ್ಟಿತನ ಪತ್ರಕರ್ತರದಾಗಿದೆ. ಯಾವುದೇ ಪರಿಸ್ಥಿತಿ, ಸನ್ನಿವೇಶ, ಸಂದರ್ಭಗಳಿದ್ದರೂ ಧೈರ್ಯವಾಗಿ ಮುನ್ನುಗ್ಗುವುದನ್ನು ಪತ್ರಿಕೋದ್ಯಮ ಕಲಿಸುತ್ತದೆ. ಹಲವಾರು ಪತ್ರಕರ್ತರು ತಮ್ಮದೇ ಅಸ್ತಿತ್ವ ರೂಪಿಸಿಕೊಂಡಿದ್ದಾರೆ. ಸಮಾಜದಲ್ಲಿ ಉನ್ನತ ಗೌರವ ತಂದುಕೊಡುವ ಶಕ್ತಿಯೂ ಮಾಧ್ಯಮಕ್ಕೆ ಇದೆ ಎಂದು ಅವರು ಹೇಳಿದರು.

ಮಾಧ್ಯಮ ಕ್ಷೇತ್ರವು 80ರ ದಶಕದ ನಂತರ ಸಾಕಷ್ಟು ಬದಲಾವಣೆ ಕಾಣುತ್ತಿದೆ. ಸುದ್ದಿ ಬರೆಯುವುದಷ್ಟೇ ಅಲ್ಲ, ಉತ್ತಮ ಜೀವನ ರೂಪಿಸುವ ಸಾಮರ್ಥ್ಯವನ್ನೂ ನೀಡುತ್ತದೆ. ದೃಶ್ಯ ಮಾಧ್ಯಮ ಬಂದ ನಂತರ ಬದಲಾವಣೆಯಾಯಿತು. ಈಗಂತೂ ಡಿಜಿಟಲ್ ರೂಪ ಮಾಧ್ಯಮ ಕ್ಷೇತ್ರದಲ್ಲಿ ಹೊಸ ಆಯಾಮವನ್ನೇ ತಂದುಕೊಟ್ಟಿದೆ. ಅಂತರ್ಜಾಲವು ಇಡೀ ಜಗತ್ತನ್ನೇ ಒಂದುಗೂಡಿಸುವ ಮಟ್ಟಕ್ಕೆ ಬೆಳೆದಿದೆ. ಡಿಜಿಟಲ್ ಮಾಧ್ಯಮದಿಂದ ಪತ್ರಕರ್ತರಿಗೆ ಹೊಸ ಹುದ್ದೆಗಳೂ ಸೃಷ್ಟಿಯಾಗುತ್ತಿವೆ ಎಂದು ವಿವರಿಸಿದರು.

ದಾವಣಗೆರೆ ವಿಶ್ವವಿದ್ಯಾನಿಲಯದ ಕುಲ ಸಚಿವ ಪ್ರೊ. ಯು.ಎಸ್. ಮಹಾಬಲೇಶ್ವರ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿ, ಯುವಜನರು ಸಾಧನೆಯತ್ತ ಗಮನ ಕೇಂದ್ರೀಕರಿಸಬೇಕು. ಮೊಬೈಲ್, ವಾಟ್ಸಪ್, ಫೇಸ್ ಬುಕ್ ಅಂತಾ ನಿಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ. ಸಾಮಾಜಿಕ ಜಾಲತಾಣವನ್ನು ನಿಮ್ಮ ಜ್ಞಾನಾರ್ಜನೆ ಬಳಸಬೇಕೇ ಹೊರತು, ಭವಿಷ್ಯ ಹಾಳು ಮಾಡಿಕೊಳ್ಳುವುದಕ್ಕಲ್ಲ. ನಿಮ್ಮ ಭವಿಷ್ಯ, ಬದುಕನ್ನು ರೂಪಿಸಿಕೊಳ್ಳುವ ಶಕ್ತಿ ನಿಮ್ಮ ಕೈಯಲ್ಲೇ ಇದೆ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ. ಮಂಜುನಾಥ ಮಾತನಾಡಿ, ಕರುಣಾ ಜೀವ ಕಲ್ಯಾಣ ಟ್ರಸ್ಟ್ ಪರಿಸರ ಕಾಳಜಿ, ಆರೋಗ್ಯ ಶಿಬಿರ, ಸಮಾಜಮುಖಿ ಸೇವೆ ಸೇರಿದಂತೆ ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ಮಾಡುತ್ತಿದೆ. ಟ್ರಸ್ಟ್‌ನ ಶಿವನಕೆರೆ ಬಸವಲಿಂಗಪ್ಪ ಸೇರಿದಂತೆ ಹಲವಾರು ಹಿರಿಯರು ಸೇರಿಕೊಂಡು, ಸಮಾಜಕ್ಕೆ ಉತ್ತಮ ಸೇವೆ, ಕೊಡುಗೆ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್ ಮಾತನಾಡಿ, ಪತ್ರಿಕೋದ್ಯಮ ಎಂಬುದು ಇಂದಿನ ಆಧುನಿಕ ಯುಗದಲ್ಲಿ ದೃಶ್ಯಮಾಧ್ಯಮ, ಸಾಮಾಜಿಕ ಮಾಧ್ಯಮಗಳ ಜೊತೆಗೆ ಸಾಕಷ್ಟು ಪೈಪೋಟಿ ಎದುರಿಸುತ್ತಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಪಠ್ಯದಲ್ಲಿ ಓದಿದ್ದರ ಜೊತೆಗೆ ಬರವಣಿಗೆ ಮೇಲೆ ಹಿಡಿತ ಹೊಂದಬೇಕು. ಸಾಕಷ್ಟು ಅವಕಾಶ ನಿಮ್ಮಗಳ ಮುಂದಿದ್ದು, ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಪತ್ರಕರ್ತರಾಗಿ ಸಾಧನೆ ಮಾಡುವಂತೆ ತಿಳಿಸಿದರು.

ಹಿರಿಯ ಪತ್ರಕರ್ತರಾದ ಬಕ್ಕೇಶ ನಾಗನೂರು, ಎಂ.ಶಶಿಕುಮಾರ, ಎನ್.ಆರ್.ನಟರಾಜ, ಎಸ್.ಎ.ಗಂಗರಾಜು, ಐ.ಗುರುಶಾಂತಪ್ಪ, ಗಣೇಶ ಕಮಲಾಪುರ, ದೇವಿಕಾ ಸುನೀಲ್, ಎ.ಬಿ.ರುದ್ರಮ್ಮ, ಎಚ್.ನಿಂಗರಾಜ, ವಿನಾಯಕ ನಾಯ್ಕ ಪೂಜಾರಿ, ಚನ್ನಬಸವ ಶೀಲವಂತರಿಗೆ ಮಹಾತ್ಮ ಗಾಂಧಿ ಸೇವಾ ಮಾಧ್ಯಮ ಪ್ರಶಸ್ತಿ ನೀಡಿ, ಗೌರವಿಸಲಾಯಿತು.

ಕಾಲೇಜಿನ ಪ್ರೊ. ಲೋಲಾಕ್ಷಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನ ಶಿವನಕೆರೆ ಬಸವಲಿಂಗಪ್ಪ, ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಡಾ. ಆರ್.ಲಕ್ಷ್ಮೀ, ಬೋಧಕ-ಬೋಧಕೇತರ ಸಿಬ್ಬಂದಿ, ಪತ್ರಿಕೋದ್ಯಮ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಇದ್ದರು.

- - -

ಬಾಕ್ಸ್‌ * ತಂತ್ರಜ್ಞಾನ ಎಷ್ಟರಮಟ್ಟಿಗೆ ಮುಂದುವರಿಯುತ್ತಿದೆ ಎಂದರೆ ಮುಂದಿನ ದಿನಗಳಲ್ಲಿ ಇಂಟರ್ ನೆಟ್ ಸಂಪರ್ಕ ಇಲ್ಲದೇ, ಟೀವಿ ಕಾರ್ಯಕ್ರಮಗಳ ವೀಕ್ಷಿಸುವ ಸಾಧ್ಯತೆಯ ಉಪಗ್ರಹಗಳ ಉಡಾವಣೆಯೂ ಆಗಲಿದೆ ಎಂದು ಎಂದು ಶಿವಕುಮಾರ ಕಣಸೋಗಿ ತಿಳಿಸಿದರು.

21ನೇ ಶತಮಾನವೆಂದರೆ ಡಿಜಿಟಲ್ ಯುಗವೆಂದೇ ಕರೆಯಲ್ಪಡುತ್ತಿದೆ. ಒಬ್ಬ ಪತ್ರಿಕೋದ್ಯಮ ವಿದ್ಯಾರ್ಥಿ ತನ್ನ ಓದಿನ ಬಳಿಕ ಟಿವಿ, ಸಿನಿಮಾ, ಪತ್ರಿಕೆ, ರೇಡಿಯೋ ಹೊರತಾಗಿ ಟಿವಿ ಧಾರಾವಾಹಿಗಳಿಗೆ ಕಂಟೆಂಟ್ ಸಹ ಬರೆಯಬಹುದು. ಕಾರ್ಪೊರೇಟ್ ಕಮ್ಯುನಿಕೇಷನ್, ಸೋಷಿಯಲ್ ಮೀಡಿಯಾ ಮ್ಯಾನೇಜ್‌ಮೆಂಟ್‌, ಇವೆಂಟ್ ಮ್ಯಾನೇಜ್‌ಮೆಂಟ್ ಹೀಗೆ ನಾನಾ ಅವಕಾಶಗಳು ಇವೆ. ಸ್ಪಷ್ಟವಾಗಿ ಓದಲು, ಬರೆಯಲು, ಮಾತನಾಡಲು ಬಂದರೆ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಧನೆ ಸಾಧ್ಯ ಎಂದು ತಿಳಿಸಿದರು.

- - - -(ಫೋಟೋ ಇದೆ)