ಸಾರಾಂಶ
ವಿಶ್ವ ಹಿರಿಯ ನಾಗರೀಕರ ದಿನಾಚರಣೆ, ರಾಷ್ಟ್ರೀಯ ವಯೋ ಶ್ರೀ ಯೋಜನೆಯಡಿ ಹಿರಿಯ ನಾಗರೀಕರಿಗೆ ಸಾಧನ ಸಲಕರಣೆ ವಿತರಣೆ
ಕನ್ನಡಪ್ರಭವಾರ್ತೆ, ಚಿಕ್ಕಮಗಳೂರುವೃದ್ದಾಪ್ಯದಲ್ಲಿ ಪೋಷಕರನ್ನು ನೋಡಿಕೊಳ್ಳುವುದು ಕುಟುಂಬದ ಎಲ್ಲಾ ಸದಸ್ಯರ ನೈತಿಕ ಜವಾಬ್ದಾರಿ, ಮಾತ್ರವಲ್ಲ ಅದು ಪ್ರತಿಯೊಬ್ಬರ ಮೂಲಭೂತ ಕರ್ತವ್ಯ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಗರದ ಕುವೆಂಪು ಕಲಾ ಮಂದಿರದಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಹಾಗೂ ರಾಷ್ಟ್ರೀಯ ವಯೋ ಶ್ರೀ ಯೋಜನೆಯಡಿ ಹಿರಿಯ ನಾಗರಿಕರಿಗೆ ಸಾಧನ ಸಲಕರಣೆ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಹಿರಿಯ ನಾಗರಿಕರ ರಕ್ಷಣೆ ಕಾಯ್ದೆ 2016 ರ ಅರಿವಿನ ಕೊರತೆಯಿಂದ ವೃದ್ದಾಪ್ಯದಲ್ಲಿ ಹಿರಿಯರನ್ನು ಅವರ ಮಕ್ಕಳು ಕಡೆಗಣಿಸುತ್ತಿರುವುದನ್ನು ಕಾಣುತ್ತೇವೆ. ಹಿರಿಯ ನಾಗರಿಕ ಹಕ್ಕುಗಳನ್ನು ತಿಳಿದುಕೊಳ್ಳುವುದು. ಜಾಗೃತಿ ಮೂಡಿಸುವುದು ಮತ್ತು ಸಂರಕ್ಷಿಸುವುದು ನಮ್ಮ ಕರ್ತವ್ಯ ಎಂದ ಅವರು, ನಮ್ಮಿಂದ ಹಿರಿಯ ನಾಗರಿಕರು ನಿರೀಕ್ಷಿಸುವುದು ಕೇವಲ ಪ್ರೀತಿ, ಗೌರವ ಮತ್ತು ಅವರ ಹಕ್ಕುಗಳನ್ನು ಮಾತ್ರ, ಅದನ್ನು ನೀಡಲು ನಮ್ಮ ಸಮಾಜದಿಂದ ಸಾಧ್ಯ. ಹಾಗಾಗಿ ಎಲ್ಲರೂ ಉತ್ತಮ ನಾಗರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದರು.ಇತ್ತೀಚಿನ ದಿನಗಳಲ್ಲಿ ಅನೇಕ ಕಡೆಗಳಲ್ಲಿ ಉದ್ಯೋಗಕ್ಕೆಯುವಕರು ಮಕ್ಕಳು ಅನಿವಾರ್ಯವಾಗಿ ಗ್ರಾಮೀಣ ಪ್ರದೇಶ ತೊರೆದು ನಗರಗಳಿಗೆ ವಲಸೆ ಬರುತ್ತಿದ್ದಾರೆ. ಇದರಿಂದ ಹಿರಿಯ ನಾಗರಿಕರು ಗ್ರಾಮೀಣ ಭಾಗದಲ್ಲಿ ತಮ್ಮ ಮನೆಗಳಲ್ಲಿ ಒಂಟಿಯಾಗಿ ಉಳಿಯುವಂತ ಪರಿಸ್ಥಿತಿ ನಿರ್ಮಾಣ ವಾಗಿದೆ. ಅವರ ಬದುಕಿಗೆ ಭದ್ರತೆ ಕೊಡಬೇಕಾಗಿರುವುದು ಸಮಾಜದ ಹೊಣೆ. ಮಾನವೀಯತೆಯಿಂದ ಸಮಾಜದಲ್ಲಿ ಹಿರಿಯ ನಾಗರಿಕರನ್ನು ಸಂರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ ಎಂದರು.
ಹಿರಿಯ ನಾಗರಿಕರು ಎಂದರೆ ಕೇವಲ ಸರ್ಕಾರಿ ನೌಕರರಾಗಿ ಕರ್ತವ್ಯ ನಿರ್ವಹಿಸಿ ಬಳಿಕ ನಿವೃತ್ತಿ ಹೊಂದಿದವರು ಎಂದು ನಾವು ತಿಳಿದು ಕೊಂಡಿದ್ದೇವೆ, ಪಿಂಚಣಿ ಬಂದರು ವೃದ್ಧಾಪ್ಯದಲ್ಲಿ ಅವರ ಯೋಗಕ್ಷೇಮ ನೋಡಿಕೊಳ್ಳಬೇಕು. ಗ್ರಾಮೀಣ ಭಾಗಗಳಲ್ಲಿ ಜೀವನ ನಿರ್ವಹಿಸುತ್ತಿರುವ ಎಷ್ಟೋ ಹಿರಿಯ ನಾಗರಿಕರ ಜೀವನ ಸ್ಥಿತಿ ತುಂಬಾ ಹದಗೆಟ್ಟಿದೆ ಅವರನ್ನು ಯಾರು ಗಮನಿಸುವುದಿಲ್ಲ. ಗದ್ದೆಗಳಲ್ಲಿ ಉತ್ತಿ, ಬಿತ್ತಿ ವ್ಯವಸಾಯ ಮಾಡಿ ಜೀವನ ನಿರ್ವಹಿಸುತ್ತಾರೆ. ಅಂಥವರನ್ನು ಗುರುತಿಸಿ ಅವರಿಗೆ ಸರ್ಕಾರದ ಹಲವಾರು ಸೌಲಭ್ಯ ಒದಗಿಸಿಕೊಡುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು. ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಜಿಲ್ಲೆಯಲ್ಲಿ 753 ಮಂದಿ ಹಿರಿಯ ನಾಗರಿಕರಿಗೆ 56,62,622 ರು.ಗಳಲ್ಲಿ 2995 ಸಾಧನ ಸಲಕರಣೆ ಹಾಗೂ ಅಡಿಪ್ ಯೋಜನೆಯಡಿ ವಿಕಲಚೇತನರಿಗೆ 90,68,592 ರು. ಗಳಲ್ಲಿ 723 ಫಲಾನುಭವಿಗಳಿಗೆ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ ಎಂದರು. ವಿಧಾನ ಪರಿಷತ್‌ನ ಶಾಸಕ ಎಸ್.ಎಲ್. ಭೋಜೇಗೌಡ ಮಾತನಾಡಿ, ವಿಕಲಚೇತನರು ಇಂದಿನ ಸಮಾಜದಲ್ಲಿ ಒಂದು ಶಾಪವಾಗಿ ಪರಿಗಣಿಸುತ್ತಿರುವುದನ್ನು ನೋಡಿದ್ದೇವೆ. ಅವರ ನೋವು ದುಗುಡ ನಿಟ್ಟುಸಿರು ಆತಂಕ ವೇದನೆಗಳಿಗೆ ನಾವು ಸ್ಪಂಧಿಸಬೇಕು. ವಿಕಲಚೇತನರು ಸಮಾಜಕ್ಕೆ ಶಾಪವಲ್ಲ, ಅದು ಒಂದು ವರ, ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು. ಹಿರಿಯ ನಾಗರಿಕರು ಸಹ ತಮ್ಮ ಬದುಕಿನಲ್ಲಿ ಸಾಕಷ್ಟು ನೊಂದಿರುತ್ತಾರೆ. ಅಂತವರನ್ನು ಸಮಾಜ ಗೌರವದಿಂದ ಕಾಣಬೇಕು ಮತ್ತು ತಂದೆ ತಾಯಿಯರನ್ನು ಗೌರವಿಸಿ ಅವರನ್ನು ಪ್ರೀತಿ ವಿಶ್ವಾಸದಿಂದ ಕಂಡಾಗ ಮಾತ್ರ ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಲು ಸಾಧ್ಯ ಎಂದು ಹೇಳಿದರು.ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್ ಮಾತನಾಡಿ, ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಆರೋಗ್ಯಕರ ವಾತಾವರಣದಲ್ಲಿ ಜೀವಿಸಿದಾಗ ಮಾತ್ರ ಹೆಚ್ಚು ಕಾಲ ಬದುಕಲು ಸಾಧ್ಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಡಿ ತಮ್ಮಯ್ಯ ಮಾತನಾಡಿ, ಭಾವನೆ, ಭಾವೈಕ್ಯತೆಯಿಂದ ತುಂಬಿರುವ ನಮ್ಮ ನಾಡಿನಲ್ಲಿ ಸಂಬಂಧಗಳಿಗೆ ತಾಯಿ, ತಂದೆಗಳಿಗೆ ನಮ್ಮ ಹಿರಿಯರಿಗೆ ಗೌರವ ಪ್ರೀತಿ, ವಿಶ್ವಾಸದಿಂದ ನಾವು ಕಾಣದಿದ್ದರೆ ಸಂಸ್ಕೃತಿ, ಸಹಬಾಳ್ವೆ, ಸಹಭಾಗಿತ್ವ ಎಂದು ಕರೆಸಿಕೊಳ್ಳುವ ನಮ್ಮ ನಾಡಿಗೆ ಅರ್ಥವೇ ಇರುವುದಿಲ್ಲ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮಹಾಂತೇಶ್ ಭಜಂತ್ರಿ, ಅಲಿಂಕೋ ಸಂಸ್ಥೆ ಮುಖ್ಯಸ್ಥ ಅಶೋಕ್ ಕುಮಾರ್. ಮಾನಸಿಕ ರೋಗ ತಜ್ಞ ಡಾ. ಸಂಜಯ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಉಪಸ್ಥಿತರಿದ್ದರು.ಪೋಟೋ ಫೈಲ್ ನೇಮ್ 1 ಕೆಸಿಕೆಎಂ 1ಚಿಕ್ಕಮಗಳೂರಿನ ಕುವೆಂಪು ಕಲಾ ಮಂದಿರದಲ್ಲಿ ಮಂಗಳವಾರ ನಡೆದ ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಹಾಗೂ ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಹಿರಿಯ ನಾಗರೀಕರಿಗೆ ಸಾಧನ ಸಲಕರಣೆ ಕಾರ್ಯಕ್ರಮವನ್ನು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಉದ್ಘಾಟಿಸಿದರು. ವಿಧಾನ ಪರಿಷತ್ ಶಾಸಕ ಎಸ್.ಎಲ್. ಭೋಜೇಗೌಡ ಇದ್ದರು.