ಸಾರಾಂಶ
ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಮತ್ತು ಅಖಿಲ ಭಾರತೀಯ ಸನ್ಯಾಸಿ ಸಂಘ ಆಶ್ರಯದಲ್ಲಿ ತಲಕಾವೇರಿ -ಪೂಂಪ್ ಹಾರ್ 14ನೇ ವರ್ಷದ ಕಾವೇರಿ ನದಿ ಜಾಗೃತಿ ಯಾತ್ರೆ ಅ.20 ರಿಂದ ಒಂದು ತಿಂಗಳ ಕಾಲ ನಡೆಯಲಿದೆ. ಯಾತ್ರೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳ ಸಾಧು ಸಂತರು ಪಾಲ್ಗೊಳ್ಳಲಿದ್ದು, 19ರಂದು ತಂಡ ತಲಕಾವೇರಿಗೆ ಆಗಮಿಸಲಿದೆ.
ಕನ್ನಡಪ್ರಭ ವಾರ್ತೆ ಕುಶಾಲನಗರ
ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಮತ್ತು ಅಖಿಲ ಭಾರತೀಯ ಸನ್ಯಾಸಿ ಸಂಘ ಆಶ್ರಯದಲ್ಲಿ ತಲಕಾವೇರಿ -ಪೂಂಪ್ ಹಾರ್ 14ನೇ ವರ್ಷದ ಕಾವೇರಿ ನದಿ ಜಾಗೃತಿ ಯಾತ್ರೆ ಅ.20 ರಿಂದ ಒಂದು ತಿಂಗಳ ಕಾಲ ನಡೆಯಲಿದೆ.ಸ್ವಚ್ಛ ಕಾವೇರಿ ಹಾಗೂ ಜಲ ಮೂಲಗಳ ಸಂರಕ್ಷಣೆ ಬಗ್ಗೆ ಜನರಿಗೆ ಅರಿವು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯಾತ್ರೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳ ಸಾಧು ಸಂತರು ಪಾಲ್ಗೊಳ್ಳಲಿದ್ದು, 19ರಂದು ತಂಡ ತಲಕಾವೇರಿಗೆ ಆಗಮಿಸಲಿದೆ.
ಕಾವೇರಿ ತೀರ್ಥ ಸಂಗ್ರಹ:20 ರಂದು ಬೆಳಗ್ಗೆ ಯಾತ್ರೆ ತಂಡ ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿ ಕಲಶಗಳಲ್ಲಿ ಪವಿತ್ರ ಕಾವೇರಿ ತೀರ್ಥ ಸಂಗ್ರಹಿಸಿ ಬೆಳಗ್ಗೆ 9 ಗಂಟೆಗೆ ವಿರಾಜಪೇಟೆ ಅರಮೇರಿ ಮಠಾಧೀಶ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಕಾವೇರಿ ಜಾಗೃತಿ ಯಾತ್ರೆಯ ಕರ್ನಾಟಕ ಮತ್ತು ತಮಿಳುನಾಡು ಪ್ರಾಂತದ ಸಂಚಾಲಕ ಹಾಗೂ ಮಾರ್ಗದರ್ಶಕ ವೇ. ಬ್ರ ಭಾನು ಪ್ರಕಾಶ್ ಶರ್ಮ, ಯಾತ್ರೆಯ ಸಂಸ್ಥಾಪಕ ಶ್ರೀ ಗಣೇಶ ಸ್ವರೂಪಾನಂದ ಗಿರಿ ಸ್ವಾಮೀಜಿ, ಅಖಿಲ ಭಾರತ ಸನ್ಯಾಸಿಗಳ ಸಂಘ ಸಂಸ್ಥಾಪಕ ಶ್ರೀ ರಮಾನಂದ ಸ್ವಾಮೀಜಿ, ಪ್ರಮುಖರಾದ ಅಖಿಲ ಭಾರತ ಸನ್ಯಾಸಿ ಸಂಘ ಪ್ರಮುಖ ವೇದಾಂತನಂದ ಸ್ವಾಮೀಜಿ, ಆತ್ಮಾನಂದ ಸ್ವಾಮೀಜಿ, ಯಾತ್ರೆಯ ಸಂಚಾಲಕ ಆದಿತ್ಯಾನಂದ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕರಾದ ಎಂ ಎನ್ ಚಂದ್ರಮೋಹನ್ ತಿಳಿಸಿದ್ದಾರೆ.ಅಂದು ಬೆಳಗ್ಗೆ 11 ಗಂಟೆಗೆ ಸಾಧುಸಂತರ ತಂಡ ಭಾಗಮಂಡಲ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಸಂಗಮದಲ್ಲಿ ಕಾವೇರಿ ನದಿಗೆ ಮಹಾ ಆರತಿ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ.
ಸಂಜೆ 4 ಗಂಟೆಗೆ ಕುಶಾಲನಗರಕ್ಕೆ ಆಗಮಿಸುವ ಸಾಧುಸಂತರ ತಂಡ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಕಾವೇರಿ ಆರತಿ ಕ್ಷೇತ್ರದಲ್ಲಿ 165ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು.ಕೊಡ್ಲಿಪೇಟೆ ಕಿರಿ ಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರ, ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಪ್ರಮೋದ್ ಮುತ್ತಪ್ಪ ಮತ್ತಿತರರು ಉಪಸ್ಥಿತರಿರುವರು.
ಅಂದು ಸಾಧು ಸಂತರು ಕುಶಾಲನಗರದಲ್ಲಿ ವಾಸ್ತವ್ಯ ಹೂಡಲಿದ್ದು ಮರುದಿನ ಬೆಳಗ್ಗೆ ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯದ ಬಳಿ ಕಾವೇರಿ ನದಿಗೆ ಮಹಾ ಆರತಿ ಕಾರ್ಯಕ್ರಮ ನಂತರ ಜಿಲ್ಲೆಯಿಂದ ಕೊಣನೂರು ಮೂಲಕ ರಾಮನಾಥಪುರ ಕಡೆಗೆ ಸಾಗಲಿದ್ದಾರೆ ಎಂದು ಚಂದ್ರಮೋಹನ್ ಮಾಹಿತಿ ನೀಡಿದ್ದಾರೆ.13ರಂದು ಪೂಂಪ್‌ಹಾರ್‌ಗೆ:
ನಂತರ ತಂಡ ಶ್ರೀರಂಗಪಟ್ಟಣ ಬೆಂಗಳೂರು ಮಾರ್ಗವಾಗಿ ನಂತರ ಹೊಗೆನಕಲ್ ಮೂಲಕ ತಮಿಳುನಾಡಿನತ್ತ ಸಾಗಿ ನ. 13ರಂದು ತಮಿಳುನಾಡಿನ ಪೂಂಪ್ ಹಾರ್ ಬಳಿ ಕಾವೇರಿ ನದಿ ಬಂಗಾಲ ಕೊಲ್ಲಿ ಸಮುದ್ರ ಸಂಗಮದಲ್ಲಿ ತಲಕಾವೇರಿ ಕ್ಷೇತ್ರದಿಂದ ಕಲಶಗಳಲ್ಲಿ ಒಯ್ಯುವ ಪವಿತ್ರ ಕಾವೇರಿ ತೀರ್ಥವನ್ನು ವಿಶೇಷ ಪೂಜೆ ಸಲ್ಲಿಸಿ ವಿಸರ್ಜಿಸುವ ಮೂಲಕ ಯಾತ್ರೆಗೆ ಸಮಾರೋಪ ನಡೆಯುವುದು ಎಂದು ಚಂದ್ರಮೋಹನ್ ತಿಳಿಸಿದ್ದಾರೆ.