ಸಾರಾಂಶ
ಮಡಿಕೇರಿ : ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸ್ಯಾಂಕಿ ಕೆರೆಯ ಆವರಣದಲ್ಲಿ ಮಾ. 21ರಂದು ಹಮ್ಮಿಕೊಂಡಿರುವ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಕೊಡಗಿನ ಪುಣ್ಯಕ್ಷೇತ್ರ ತಲಕಾವೇರಿ ಸನ್ನಿಧಿಯ ಕುಂಡಿಕೆಯಿಂದ ಪವಿತ್ರ ತೀರ್ಥವನ್ನು ಸುಮಾರು 20 ಸಾವಿರ ಪ್ಲಾಸ್ಟಿಕ್ ಬಾಟಲಿಗಳಲ್ಲಿ ತುಂಬಿಸಿ ಟ್ರಕ್ ಮುಖಾಂತರ ಬೆಂಗಳೂರಿಗೆ ರವಾನಿಸಲಾಗಿದೆ.
ಗುರುವಾರ ಜಲಮಂಡಳಿಯಿಂದ ಕಾವೇರಿಯ ಪವಿತ್ರ ತೀರ್ಥ ಕುಂಡಿಕೆಯಿಂದ ತೀರ್ಥವನ್ನು ತೆಗೆದು ಸುಮಾರು 20 ಸಾವಿರ ಪ್ಲಾಸ್ಟಿಕ್ ಬಾಟಲಿಗಳಲ್ಲಿ ತುಂಬಿಸಲಾಗಿದೆ. ಅಲ್ಲದೆ ಅಲ್ಲಿಯೇ ಕಾವೇರಿ ತೀರ್ಥ ಸ್ಟಿಕ್ಕರ್ ಅಂಟಿಸಿ ಬೆಂಗಳೂರಿಗೆ ಕೊಂಡೊಯ್ಯಲಾಗಿದೆ.
ಬೆಂಗಳೂರು ನಗರ ಜನತೆಯ ದಾಹ ತಣಿಸುವ ಕಾವೇರಿ ಮಾತೆಗೆ ಸ್ಯಾಂಕಿ ಕೆರೆಯಲ್ಲಿ ನಮನ ಸಲ್ಲಿಸಿ ಆನಂತರ ಭಕ್ತರಿಗೆ ಶ್ರೀ ತಲಕಾವೇರಿ ತೀರ್ಥವನ್ನು ವಿತರಿಸಲಾಗುತ್ತಿದೆ.
ಬೆಂಗಳೂರಿನಲ್ಲಿ ಕಾವೇರಿ ಆರತಿ ಕಾರ್ಯಕ್ರಮ ಇರುವುದರಿಂದ ಮಾ.21ರಂದು ಬೆಳಗ್ಗೆ 8.15ಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೃಹತ್ ಸಂರಕ್ಷಣಾ ಅಭಿಯಾನದ ಅಂಗವಾಗಿ ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಬೆಂಗಳೂರಿಗೆ ತೆರಳಲಿದ್ದಾರೆ.