ರಾಮನಾಥಪುರದಲ್ಲಿ ಕಳೆದ 12 ವರ್ಷಗಳಿಂದ ನಡೆಯುತ್ತಿದೆ ಕಾವೇರಿ ಆರತಿ ಪೂಜೆ

| Published : Mar 21 2025, 12:34 AM IST

ರಾಮನಾಥಪುರದಲ್ಲಿ ಕಳೆದ 12 ವರ್ಷಗಳಿಂದ ನಡೆಯುತ್ತಿದೆ ಕಾವೇರಿ ಆರತಿ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ನಾಡಿನ ಜೀವನದಿ ಕಾವೇರಿ ರಾಜ್ಯ ಸರ್ಕಾರಕ್ಕೆ ಇದೀಗ ನೆನಪಾಗಿದೆ. ಹಾಗಾಗಿಯೇ ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಇಂದು ಕಾವೇರಿ ಆರತಿ ಆರಂಭಿಸಿದೆ. ಆದರೆ, ಕಾವೇರಿ ನದಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕಳೆದ 12 ವರ್ಷಗಳಿಂದಲೇ ಪ್ರತಿ ಹುಣ್ಣಿಮೆಯಂದು ‘ಕಾವೇರಿ ಆರತಿ ಪೂಜೆ’ಯನ್ನು ಮಾಡಲಾಗುತ್ತ ಬರುತ್ತಿದೆ.

ಶೇಖರ್ ಯಲಗತವಳ್ಳಿ

ಕನ್ನಡಪ್ರಭ ವಾರ್ತೆ ಅರಕಲಗೂಡು

ಕನ್ನಡ ನಾಡಿನ ಜೀವನದಿ ಕಾವೇರಿ ರಾಜ್ಯ ಸರ್ಕಾರಕ್ಕೆ ಇದೀಗ ನೆನಪಾಗಿದೆ. ಹಾಗಾಗಿಯೇ ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಇಂದು ಕಾವೇರಿ ಆರತಿ ಆರಂಭಿಸಿದೆ. ಆದರೆ, ಕಾವೇರಿ ನದಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕಳೆದ 12 ವರ್ಷಗಳಿಂದಲೇ ಪ್ರತಿ ಹುಣ್ಣಿಮೆಯಂದು ‘ಕಾವೇರಿ ಆರತಿ ಪೂಜೆ’ಯನ್ನು ಮಾಡಲಾಗುತ್ತ ಬರುತ್ತಿದೆ.

ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ಹರಿಯುವ ಕಾವೇರಿ ನದಿ ಸಂರಕ್ಷಣೆ ಹಾಗೂ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ‘ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿ’ ವತಿಯಿಂದ ಕಾವೇರಿ ನದಿದಂಡೆ, ಆವರಣ ಹಾಗೂ ದೇವಾಲಯಗಳ ಸುತ್ತ ಮುತ್ತ ಸತತ 12 ವರ್ಷಗಳಿಂದ ಪ್ರತಿ ತಿಂಗಳು ಹುಣ್ಣಿಮೆ ದಿನ ಸ್ವಚ್ಛತಾ ಕಾರ್ಯಕ್ರಮ ಹಾಗೂ ಕಾವೇರಿ ನದಿಗೆ ಸಾಧು, ಸಂತರು, ಗ್ರಾಮಸ್ಥರು, ಸಂಘ- ಸಂಸ್ಥೆಗಳೊಡಗೂಡಿ ಮಹಾ ಆರತಿ ಪೂಜೆಯನ್ನು ಮಾಡುವ ಮೂಲಕ ಜನರಲ್ಲಿ ನದಿಯ ಉಳಿವು, ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡಿಕೊಂಡು ಬರಲಾಗುತ್ತಿದೆ.

2024ರ ಅಕ್ಟೋಬರ್ 21ರಂದು ಕಾವೇರಿ ನದಿ ಹುಟ್ಟುವ ಕೊಡಗಿನ ತಲಕಾವೇರಿಯಿಂದ ಬಂಗಾಳ ಕೊಲ್ಲಿಯ ಸಮುದ್ರ ಸೇರುವ ತಮಿಳುನಾಡಿನ ಪೂಂಪ್ ಹಾರ್ ಗೆ ತೆರಳಿದ ಕಾವೇರಿ ಜಾಗೃತಿ ರಥಯಾತ್ರೆಯು ರಾಮನಾಥಪುರದಲ್ಲಿ ಕಾವೇರಮ್ಮನ ಉತ್ಸವ ಮೂರ್ತಿಗೆ ನದಿಯಲ್ಲಿ ಪೂಜೆ ಸಲ್ಲಿಸಲಾಯಿತು. ಈ ಮೂಲಕ ನದಿ ಜಲ ಮೂಲಗಳನ್ನು ಸ್ವಚ್ಛವಾಗಿ ಹರಿಯಲು ಸಾರ್ವಜನಿಕರು ಬಿಡಬೇಕು. ಪ್ರಕೃತಿ ಮತ್ತು ಪರಿಸರವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಜಲಮೂಲಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು ಎಂದು ಜನರಲ್ಲಿ ಅರಿವು ಮೂಡಿಸಲಾಗಿತ್ತು.

ಸರ್ಕಾರದ ಚಿಂತನೆಗೆ ಮೆಚ್ಚುಗೆ:

ಈ ಬಗ್ಗೆ ಹಾಸನ ಜಿಲ್ಲಾ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಅಧ್ಯಕ್ಷರಾದ ಎಂ. ಎನ್. ಕುಮಾರಸ್ವಾಮಿ ಮಾತನಾಡಿ, ಉತ್ತರದಲ್ಲಿ ಗಂಗಾ ಅರತಿ ರೀತಿಯಲ್ಲಿ ದಕ್ಷಿಣ ಭಾರತದಲ್ಲಿ ಕಾವೇರಿ ನದಿಗೆ ಆರತಿ ಬೆಳಗುವ ಕಾರ್ಯಕ್ರಮದ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ಹರಿಸಿರುವುದು ನಿಜಕ್ಕೂ ಮೆಚ್ಚುವ ವಿಷಯ. ಈ ಮೂಲಕ ಜನರಿಗೆ ನದಿ ಸಂರಕ್ಷಣೆಯ ಮಹತ್ವ, ಅರಿವು ಹಾಗೂ ಹೆಚ್ಚಿನ ಜಾಗೃತಿ ಉಂಟಾಗಲಿದೆ ಎಂದಿದ್ದಾರೆ.

ಅಲ್ಲದೆ, 2024ರ ಅಕ್ಟೋಬರ್ 23 ರಂದು 3 ದಿನಗಳ ಕಾಲ ಕೊಡಗು ಜಿಲ್ಲೆಯಲ್ಲಿ ಸಂಚರಿಸಿದ ಕಾವೇರಿ ನದಿ ಜಾಗೃತಿ ತಂಡ ರಾಮನಾಥಪುರದ ಶ್ರೀ ರಾಮೇಶ್ವರಸ್ವಾಮಿ ದೇವಾಲಯದ ಬಳಿ ಕಾವೇರಿ ನದಿಯ ವಹ್ನಿ ಪುಷ್ಕರಣಿಯಲ್ಲಿ ಪೂಜೆ ಹಾಗೂ ಮಹಾ ಆರತಿ ನಂತರ ಹಾಸನ ಜಿಲ್ಲೆಯ ಗಡಿಯಿಂದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದತ್ತ ಸಾಗಿತು. ಹಾಸನ ಜಿಲ್ಲಾ ಗಡಿಯಿಂದ ಶ್ರೀರಂಗಪಟ್ಟಣಕ್ಕೆ ಕಳುಹಿಸಿದ ನಂತರ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಸಾಹಿತಿಗಳಾದ ಕಾಳಬೋಯಿ ಅವರು ಮಾತನಾಡಿ, ಕಾವೇರಿ ನದಿ ಸಂರಕ್ಷಣೆ ಬಗ್ಗೆ ಜನರಿಗೆ ನಿರಂತರವಾಗಿ ಅರಿವು, ಜಾಗೃತಿಯನ್ನು ಹಾಸನ ಜಿಲ್ಲಾ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ, ಶರಣ ಸಾಹಿತ್ಯ ಪರಿಷತ್ತು ವತಿಯಿಂದ ದೇವಾಲಯಗಳ ಬಳಿ ಹಾಗೂ ಸುತ್ತಮುತ್ತ ಮತ್ತು ನದಿ ತಟದಲ್ಲಿ ಪ್ರತಿ ಹುಣ್ಣುಮೆಯ ಸಂದರ್ಭದಲ್ಲಿ ಈಗಾಗಲೇ 13 ವರ್ಷಗಳಿಂದ ಸ್ವಚ್ಛತೆ ಹಾಗೂ ನದಿಗೆ ಮಹಾ ಆರತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ರಾಮನಾಥಪುರಕ್ಕೆ ಭೇಟಿ ನೀಡಿದ ಯುವ ಬ್ರಿಗೇಡ್:

ಕಾವೇರಿ ನದಿ ನಮನ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಕಾವೇರಿ ನದಿ ಸ್ವಚ್ಛತೆ, ಮಹಾ ಆರತಿ ಹಾಗೂ ಅಭಿಯಾನ ಕಾರ್ಯಕ್ರಮದ ನಂತರ ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಭಾಷೆಗಳ ಮತ್ತು ಸಂಸ್ಕೃತಿಯ ಗಡಿಗಳನ್ನು ಮೀರಿ ಸಹೋದರತ್ವವನ್ನು ರೂಪಿಸುವ ಶಕ್ತಿ ಪ್ರಕೃತಿಗಿದೆ. ಹಾಗಾಗಿ ಯುವ ಬ್ರಿಗೇಡ್ ಈ ಬೈಕ್ ಯಾತ್ರೆ ಮತ್ತು ಕಾವೇರಿಯ ಪರಿಕ್ರಮ ಅಷ್ಟೇ ಅಲ್ಲದೇ, ಕಾವೇರಿ ನದಿ ಹರಿಯುವ ದಾರಿಯುದ್ಧಕ್ಕೂ ಕಾವೇರಿ ಆರತಿ, ಸ್ವಚ್ಛತೆ, ಜಾಗೃತಿ ಮತ್ತು ಶ್ರದ್ಧೆ ನಮನವನ್ನೂ ಮಾಡಿಕೊಂಡು ಹೋಗಲಾಗುತ್ತದೆ. ಕಾವೇರಿ ನದಿ ಕನ್ನಡದ ನೆಲದಲ್ಲಿ ಹುಟ್ಟಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಮೂಲಕ ಹರಿದು ಭೂಮಿಯನ್ನು ಸಮೃದ್ಧಗೊಳಿಸುತ್ತಿದೆ. ಭಾಷೆ ಮತ್ತು ಸಾಂಸ್ಕೃತಿಕ ವಿಭಿನ್ನತೆಯ ನಡುವೆಯೂ ಎರಡು ರಾಜ್ಯಗಳನ್ನು ಪೋಷಿಸುವ ಜೀವನದಿಯಾಗಿದೆ, ಲೋಪಮುದ್ರಯ ಪೋಷಕ ಶಕ್ತಿಯಂತೆ ಕಾವೇರಿ ಎರಡೂ ರಾಜ್ಯಗಳನ್ನು ಜೀವನದಿಯಾಗಿ ಸಲಹುತ್ತಾಳೆ, ಹೀಗಾಗಿ ಅವಳನ್ನು ಹಾಳುಗೆಡುವುದಂತೆ ಉಳಿಸಿಕೊಳ್ಳುವ ಹೊಣೆಗಾರಿಕೆ ನಮ್ಮಲ್ಲರದಾಗಿದೆ ಎಂದು ತಿಳಿಸಿದ್ದರು. ಒಟ್ಟಿನಲ್ಲಿ ಕಾವೇರಿ ಸ್ವಚ್ಛತೆ ನಮ್ಮೆಲ್ಲರ ಹೊಣೆಯಾಗಿದೆ.