ತಾಳಕೇರಿ ಮೊರಾರ್ಜಿ ವಸತಿ ಶಾಲೆ ಇನ್ನು ಕಾಲೇಜು

| Published : Aug 08 2025, 01:02 AM IST

ಸಾರಾಂಶ

೨೦೨೫-೨೬ನೇ ಸಾಲಿನ ಆಯವ್ಯಯದಲ್ಲಿ ಎಸ್‌ಸಿ, ಎಸ್ಟಿ ಹಾಗೂ ಬಿಸಿಎಂ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಸಲುವಾಗಿ ಜಿಲ್ಲೆಗೆ ಒಂದರಂತೆ ಒಟ್ಟು ೩೧ ವಸತಿ ಶಾಲೆಗಳನ್ನು ಪಿಯು ಕಾಲೇಜುಗಳನ್ನಾಗಿ ಸರ್ಕಾರ ಉನ್ನತೀಕರಿಸಿದೆ.

ಪಾಲಾಕ್ಷ ಬಿ. ತಿಪ್ಪಳ್ಳಿಯಲಬುರ್ಗಾ:

ಎಸ್‌ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯದಲ್ಲಿ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಬರುವ ೩೧ ವಸತಿ ಶಾಲೆಗಳನ್ನು ಸರ್ಕಾರ ಪಿಯು ಕಾಲೇಜುಗಳನ್ನಾಗಿ ಉನ್ನತೀಕರಣಗೊಳಿಸಿದೆ. ಅದರಲ್ಲಿ ತಾಲೂಕಿನ ತಾಳಕೇರಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಒಂದು. ೨೦೨೫-೨೬ನೇ ಸಾಲಿನ ಆಯವ್ಯಯದಲ್ಲಿ ಎಸ್‌ಸಿ, ಎಸ್ಟಿ ಹಾಗೂ ಬಿಸಿಎಂ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಸಲುವಾಗಿ ಜಿಲ್ಲೆಗೆ ಒಂದರಂತೆ ಒಟ್ಟು ೩೧ ವಸತಿ ಶಾಲೆಗಳನ್ನು ಪಿಯು ಕಾಲೇಜುಗಳನ್ನಾಗಿ ಸರ್ಕಾರ ಉನ್ನತೀಕರಿಸಿದೆ. ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುವ ಎಸ್‌ಸಿ, ಎಸ್ಟಿ ಹಾಗೂ ಬಿಸಿಎಂ ೩೧ ವಸತಿ ಶಾಲೆಗಳನ್ನು ಆಯ್ಕೆ ಮಾಡಿ, ಪದವಿ ಪೂರ್ವ ಶಿಕ್ಷಣಕ್ಕೆ ಉನ್ನತೀಕರಿಸಿ, ಪಿಯು ಕೋರ್ಸ್‌ಗಳನ್ನು (೧೧ ಮತ್ತು ೧೨ನೇ) ವಿಜ್ಞಾನ ವಿಷಯಗಳಲ್ಲಿ ಪಿಸಿಎಂ, ಪಿಸಿಎಂಸಿ ಸಂಯೋಜನೆಗಳಲ್ಲಿ ಪದವಿ ಪೂರ್ವ ತರಗತಿ ಪ್ರಾರಂಭಿಸಲು ಕೋರಿ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಇದಕ್ಕೆ ಯೋಜನಾ ಇಲಾಖೆ ೨೦೨೫-೨೬ನೇ ಸಾಲಿನ ಆಯವ್ಯಯದಲ್ಲಿ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ತಾತ್ವಿಕ ಅನುಮೋದನೆ ನೀಡಿದೆ. ೫೦:೨೦:೩೦ರ ಅನುಪಾತದಲ್ಲಿ (೧೫+೭+೯=೩೧) ಉನ್ನತೀಕರಿಸಲು ಸಮ್ಮತಿಸಿದೆ.ಉನ್ನತೀಕರಿಸುವ ಪ್ರತಿ ವಸತಿ ಶಾಲೆಗೆ ೬ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ವರ್ಷದಲ್ಲಿ ೧೦ ತಿಂಗಳಿಗೆ ಸೀಮಿತಗೊಳಿಸಿ, ವೇತನ ವೆಚ್ಚ ಮಾಡಲು ಆರ್ಥಿಕ ಇಲಾಖೆ ಅನುಮತಿಸಿದೆ. ಈ ವೆಚ್ಚವನ್ನು ೩೧ ವಸತಿ ಶಾಲೆಗಳಿಗೆ ಆಯಾ ವಸತಿ ಶಾಲೆಗಳ ನಿರ್ವಹಣಾ ಲೆಕ್ಕ ಶೀರ್ಷಿಕೆಯಡಿ ಭರಿಸುವುದು ಹಾಗೂ ಎಸ್‌ಸಿ-೧೫, ಎಸ್ಟಿ-೭, ಬಿಸಿಎಂ-೯ ಸೇರಿ ಒಟ್ಟು ೩೧ ವಸತಿ ಶಾಲೆಗಳನ್ನು ಪಿಯು ಕಾಲೇಜುಗಳನ್ನಾಗಿ ಉನ್ನತೀಕರಿಸಲು ಮತ್ತು ಪೂರಕವಾಗಿ ೧೮೬ ಹುದ್ದೆ ಸೃಜಿಸಿ, ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಒದಗಿಸಿರುವ ಅನುದಾನದ ಮಿತಿಯಲ್ಲಿಯೇ ವೆಚ್ಚ ಭರಿಸಿ ಅನುಷ್ಠಾನಗೊಳಿಸಲು ಆರ್ಥಿಕ ಇಲಾಖೆ ಸಹಮತಿಸಿದೆ.

ಷರತ್ತು:೧. ಉನ್ನತೀಕರಿಸಿದ ವಸತಿ ಶಾಲೆಗಳಲ್ಲಿ ಪ್ರಥಮ ಪಿಯುಸಿಯನ್ನು ೨೦೨೫-೨೬ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಬೇಕು. ಪಿಸಿಎಂಬಿ ೪೦, ಪಿಸಿಎಂಸಿ ೪೦ರಂತೆ ಒಟ್ಟು ೮೦ ವಿದ್ಯಾರ್ಥಿಗಳನ್ನು ನಿಯಮಾನುಸಾರ ದಾಖಲು ಮಾಡಿಕೊಳ್ಳಬೇಕು. ದ್ವಿತೀಯ ಪಿಯುಸಿ ತರಗತಿಯನ್ನು ಮುಂದಿನ ವರ್ಷದಲ್ಲಿ ಪ್ರಾರಂಭಿಸಬೇಕು.

೨. ಪ್ರತಿ ವಸತಿ ಶಾಲೆಗೆ ವಿದ್ಯಾರ್ಹತೆ ಹೊಂದಿದ ೬ ಬೋಧಕ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕು. ಪ್ರತಿ ಅತಿಥಿ ಉಪನ್ಯಾಸಕರಿಗೆ ತಿಂಗಳಿಗೆ ₹೧೮,೧೫೦ರಂತೆ ವರ್ಷದಲ್ಲಿ ೧೦ ತಿಂಗಳಿಗೆ ತಗುಲುವ ವೇತನ ಮತ್ತು ಇತರೆ ನಿರ್ವಹಣಾ ವೆಚ್ಚವನ್ನುಆಯಾ ವಸತಿ ಶಾಲೆಗಳ ನಿರ್ವಹಣಾ ಲೆಕ್ಕಶೀರ್ಷಿಕೆಯಡಿ ಭರಿಸಬೇಕು.

೩. ನೇಮಕಾತಿಯಲ್ಲಿ ಎಸ್‌ಸಿ, ಎಸ್ಟಿ ವರ್ಗದವರಿಗೆ ಪ್ರಾತಿನಿಧ್ಯ ನೀಡಬೇಕು.೪. ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಒದಗಿಸಿರುವ ಅನುದಾನದ ಮಿತಿಯಲ್ಲಿಯೇ ವೆಚ್ಚ ಭರಿಸಿ ಅನುಷ್ಠಾನಗೊಳಿಸಬೇಕು ಎಂದು ಷರತ್ತು ವಿಧಿಸಲಾಗಿದೆ.

ಬಡ ಮಕ್ಕಳಿಗೆ ಇನ್ನಷ್ಟು ಶೈಕ್ಷಣಿಕ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಯಲಬುರ್ಗಾ ತಾಲೂಕಿನ ತಾಳಕೇರಿ ಮೊರಾರ್ಜಿ ವಸತಿ ಶಾಲೆಯನ್ನು ಪಿಯು ಕಾಲೇಜನ್ನಾಗಿ ಉನ್ನತೀಕರಣಗೊಳಿಸಿ ಅನುಕೂಲ ಕಲ್ಪಿಸಲಾಗಿದೆ. ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ.

ಬಸವರಾಜ ರಾಯರೆಡ್ಡಿ, ಸಿಎಂ ಆರ್ಥಿಕ ಸಲಹೆಗಾರ