ಪ್ರತಿಭಾ ಪುರಸ್ಕಾರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ: ಮಾಜಿ ಸಂಸದ ಬಿ. ಎನ್. ಬಚ್ಚೇಗೌಡ

| Published : Jul 17 2024, 12:46 AM IST

ಪ್ರತಿಭಾ ಪುರಸ್ಕಾರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ: ಮಾಜಿ ಸಂಸದ ಬಿ. ಎನ್. ಬಚ್ಚೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಟೌನ್ ಒಕ್ಕಲಿಗ ಸಂಘ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲು ಮುಂದಾಗಿರುವುದು ಉತ್ತಮ ಕಾರ್ಯವಾಗಿದೆ. ಇದು ಮಕ್ಕಳಲ್ಲಿ ಇನ್ನೂ ಹೆಚ್ಚಿನ ಶೈಕ್ಷಣಿಕ ಸಾಧನೆಗೆ ಪೂರಕವಾಗಲಿದೆ ಎಂದು ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ ಅವರು ಹೊಸಕೋಟೆಯ ಶ್ರೀವಾರಿ ಕಲ್ಯಾಣ ಮಂಟಪದಲ್ಲಿ ಹೊಸಕೋಟೆ ಟೌನ್ ಒಕ್ಕಲಿಗರ ಸಂಘದ ವತಿಯಿಂದ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ ಅಭಿಮತ । ಟೌನ್ ಒಕ್ಕಲಿಗ ಸಂಘದಿಂದ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಹೊಸಕೋಟೆ

ಟೌನ್ ಒಕ್ಕಲಿಗ ಸಂಘ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲು ಮುಂದಾಗಿರುವುದು ಉತ್ತಮ ಕಾರ್ಯವಾಗಿದೆ. ಇದು ಮಕ್ಕಳಲ್ಲಿ ಇನ್ನೂ ಹೆಚ್ಚಿನ ಶೈಕ್ಷಣಿಕ ಸಾಧನೆಗೆ ಪೂರಕವಾಗಲಿದೆ ಎಂದು ಮಾಜಿ ಸಂಸದ ಬಿ. ಎನ್. ಬಚ್ಚೇಗೌಡ ತಿಳಿಸಿದರು.

ನಗರದ ಶ್ರೀವಾರಿ ಕಲ್ಯಾಣ ಮಂಟಪದಲ್ಲಿ ಹೊಸಕೋಟೆ ಟೌನ್ ಒಕ್ಕಲಿಗರ ಸಂಘದ ವತಿಯಿಂದ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮುದಾಯದ ಎಸ್‌ಎಸ್‌ಎಲ್‌ಸಿಯ 27 ಹಾಗೂ ದ್ವಿತೀಯ ಪಿಯುಸಿಯ ೨೫ ವಿದ್ಯಾರ್ಥಿಗಳು ಕಳೆದ 2023-24ನೇ ಸಾಲಿನಲ್ಲಿ ಅತ್ಯುತ್ತಮ ಅಂಕ ಪಡೆಯುವ ಮೂಲಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಇನ್ನೂ ಹೆಚ್ಚಿನ ಮಕ್ಕಳು ಹೆಚ್ಚಿನ ಅಂಕ ಪಡೆಯಬಹುದಾಗಿತ್ತು. ಆದರೆ ಸರ್ಕಾರಿ ಶಾಲೆಗಳಲ್ಲಿ ಇಂದಿಗೂ ಶಿಕ್ಷಕರ ಕೊರತೆ ಇದೆ, ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಮನ ಹರಿಸಿ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಹೇಳಿದರು.

ಕಿಯೋನಿಕ್ಸ್ ಅಧ್ಯಕ್ಷ ಹಾಗೂ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಹೊಸಕೋಟೆ ಟೌನ್ ವಕ್ಕಲಿಗರ ಸಂಘ ಸತತ 2 ನೇ ಬಾರಿಗೆ ಈ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಟೌನ್ ವಕ್ಕಲಿಗ ಸಮುದಾಯವನ್ನು ಬೆಸೆಯುವ ಕೆಲಸ ಮಾಡಿದ್ದಾರೆ, ನಗರ ಪ್ರದೇಶದಲ್ಲಿ ಸುಮಾರು 8 ಸಾವಿರಕ್ಕೂ ಅಧಿಕ ವಕ್ಕಲಿಗ ಸಮುದಾಯವಿರುವುದು ಈಗ ತಿಳಿದು ಬಂದಿದ್ದು, ನಾಡಪ್ರಭು ಕೆಂಪೇಗೌಡ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಸಂತಸ ತಂದಿದೆ ಎಂದರು.

ತಹಸೀಲ್ದಾರ್ ಎಂ ವಿಜಯ್ ಕುಮಾರ್ ಮಾತನಾಡಿ, ಸಮುದಾಯಗಳಲ್ಲಿ ಗುರುತಿಸಿಕೊಂಡು ಸರ್ಕಾರದಲ್ಲಿ ಉತ್ತಮ ಸ್ಥಾನಮಾನ ಪಡೆಯುವುದು ರೂಢಿಯಾಗಿದೆ, ಆದರೆ ಪ್ರತಿಯೊಂದಕ್ಕೂ ಆರ್ಹತೆ ಮುಖ್ಯವಾಗಿದ್ದು, ಪ್ರತಿಯೊಬ್ಬರೂ ವಿದ್ಯಾವಂತರಾದಲ್ಲಿ ಅವಕಾಶಗಳು ಹುಡುಕಿಕೊಂಡು ಬರಲಿವೆ ಹಾಗೂ ವಿದ್ಯೆ ಕದಿಯಲಾಗದ ಸಂಪತ್ತಾಗಿದ್ದು, ಪೋಷಕರು ಮಕ್ಕಳಿಗೆ ಕೇವಲ ಪಠ್ಯಕ್ಕೆ ಮಾತ್ರ ಪ್ರಾಮುಖ್ಯತೆ ನೀಡದೆ ಕ್ರೀಡೆ, ಕಲೆ, ಸಾಹಿತ್ಯಗಳ ಬಗ್ಗೆಯೂ ಸಹ ತಮ್ಮನ್ನು ಅಳವಡಿಸಿಕೊಳ್ಳುವಂತೆ ಪೋಷಕರು ಮಕ್ಕಳಿಗೆ ತಿಳಿಸಬೇಕು ಎಂದು ಹೇಳಿದರು.

ಭಾರತೀಯ ಮೆಡಿಕಲ್ ಅಸೋಷಿಯೇಷನ್‌ನ ತಾಲೂಕು ಮಾಜಿ ಅಧ್ಯಕ್ಷ ಡಾ ನಾಗರಾಜ್, ರಾಜ್ಯ ವಕ್ಕಲಿಗ ಸಂಘದ ನಿರ್ದೇಶಕರಾದ ರಾಜಶೇಖರ್ ಗೌಡ, ಕೋಡಿಹಳ್ಳಿ ಸುರೇಶ್, ಉದ್ಯಮಿ ಬಿ.ವಿ.ಭೈರೇಗೌಡ, ತಾಪಂ ಇಒಸಿ ಎನ್. ನಾರಾಯಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ್, ಉಮಾ ಬಚ್ಚೇಗೌಡ, ಪ್ರತಿಭಾ ಶರತ್ ಬಚ್ಚೇಗೌಡ, ಟೌನ್ ಒಕ್ಕಲಿಗರ ಸಂಘದ ಪದಾಧಿಕಾರಿಗಳಾದ ಸೋಮಶೇಖರ್, ನಂಜೇಗೌಡ, ಬಚ್ಚಣ್ಣ, ಲಕ್ಷ್ಮಣ್ ಗೌಡ ಸೇರಿ ಹಲವರು ಹಾಜರಿದ್ದರು.

-----------

ಫೋಟೋ: 15 ಹೆಚ್‌ಎಸ್‌ಕೆ 2

ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡಿ ಸನ್ಮಾನಿಸಲಾಯಿತು.