ಪ್ರತಿಭೆಗೆ ಪ್ರೋತ್ಸಾಹ ಅಗತ್ಯ: ಅನ್ನದಾನೇಶ್ವರ ಶ್ರೀ

| Published : Dec 23 2024, 01:05 AM IST

ಸಾರಾಂಶ

ರಾಮನಗರ: ವಿದ್ಯಾರ್ಥಿಗಳಲ್ಲಿರುವ ಕಲಾ ಪ್ರತಿಭೆಯನ್ನು ಪೋಷಿಸಿ ಪ್ರೋತ್ಸಾಹಿಸುವುದು ಅಗತ್ಯ ಎಂದು ಶ್ರೀ ಆದಿ ಚುಂಚನಗಿರಿ ಶಾಖಾ ಮಠದ ಅನ್ನದಾನೇಶ್ವರ ಸ್ವಾಮಿಜಿ ತಿಳಿಸಿದರು.

ರಾಮನಗರ: ವಿದ್ಯಾರ್ಥಿಗಳಲ್ಲಿರುವ ಕಲಾ ಪ್ರತಿಭೆಯನ್ನು ಪೋಷಿಸಿ ಪ್ರೋತ್ಸಾಹಿಸುವುದು ಅಗತ್ಯ ಎಂದು ಶ್ರೀ ಆದಿ ಚುಂಚನಗಿರಿ ಶಾಖಾ ಮಠದ ಅನ್ನದಾನೇಶ್ವರ ಸ್ವಾಮಿಜಿ ತಿಳಿಸಿದರು.

ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಏರ್ಪಡಿಸಿದ್ದ ಬೆಂಗಳೂರು ವಿಭಾಗಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಸಾಂಸ್ಕೃತಿಕ ಸ್ಪರ್ಧೆಗಳು ಮಕ್ಕಳಲ್ಲಿ ಸದಭಿರುಚಿ ಬೆಳೆಸುತ್ತವೆ. ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದರೆ ಹೆಸರು, ಕೀರ್ತಿ ಸಂಪಾದಿಸಲು ಸಾಧ್ಯ ಎಂದು ತಿಳಿಸಿದರು.

ಸಾಹಿತಿ ಜಿ.ಎಚ್.ರಾಮಯ್ಯ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಹೊಸ ಬಗೆಯ ಜೀವನ ಕೌಶಲ್ಯಗಳನ್ನು ಕಲಿಯಲು ಪಠ್ಯೇತರ ಚಟುವಟಿಕೆಗಳು ನೆರವಾಗುತ್ತವೆ. ವಿದ್ಯಾರ್ಥಿ ಜೀವನದಲ್ಲಿ ಕಲಿತ ಸೃಜನಶೀಲ ಕೌಶಲ್ಯಗಳು ಸಾರ್ವಜನಿಕ ಹಾಗೂ ವೈಯಕ್ತಿಕ ಬದುಕನ್ನು ಸಮರ್ಥವಾಗಿ ಕಟ್ಟಿಕೊಳ್ಳಲು ಸಹಾಯಕವಾಗುತ್ತವೆ ಎಂದರು.

ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು ಮಾತನಾಡಿ, ಸ್ಪರ್ಧೆ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ಅವಿಭಾಜ್ಯ ಅಂಗ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸನ್ನು ಗಳಿಸಲು ವಿಭಿನ್ನ ವಿಷಯಗಳ ಅಧ್ಯಯನ, ತಾರ್ಕಿಕ ಚಿಂತನೆ, ವಿಚಾರ ಮಂಡನೆಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಅಗತ್ಯ ಎಂದರು.

ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕಿ ಎಂ.ಪಿ. ನಾಗಮ್ಮ ಮಾತನಾಡಿ, ಬೆಂಗಳೂರು ವಿಭಾಗ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಅವಕಾಶ ಕಲ್ಪಿಸಿದ ಶ್ರೀಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಹಾಗೆಯೇ ಮುಂದಿನ ವರ್ಷ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ನಡೆಸುವ ಅವಕಾಶ ಇಲಾಖೆ ನೀಡಿದರೆ ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲೆ ಆಯೋಜಿಸುತ್ತೇವೆ. ವಿಭಾಗ ಮಟ್ಟದ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರು ತುಮಕೂರಿನಲ್ಲಿ ಡಿ.೨೬ರಂದು ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಗಳಿಸಿದ್ದಾರೆ ಎಂದರು.

ರಸಪ್ರಶ್ನೆ, ಕನ್ನಡ ಮತ್ತು ಇಂಗ್ಲಿಷ್ ಪ್ರಬಂಧ, ಕನ್ನಡ ಮತ್ತು ಇಂಗ್ಲಿಷ್ ಚರ್ಚಾ ಸ್ಪರ್ಧೆ, ಜಾನಪದ ಗೀತೆ, ಭಾವಗೀತೆ, ಭಕ್ತಿಗೀತೆ, ಏಕಪಾತ್ರಾಭಿನಯ, ಚಿತ್ರಕಲೆ, ಆಶುಭಾಷಣ ಇತ್ಯಾದಿ 11 ಸ್ಪರ್ಧೆಗಳಲ್ಲಿ ವಿಜೇತರಾದ ೭೨ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು.

ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಿ.ಶಿವಣ್ಣ, ಖಜಾಂಚಿ ಬಿ.ಮಹೇಶ್, ಬಿಜಿಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಸಿ.ಸುರೇಶ್, ಉಪನ್ಯಾಸಕರ ಸಂಘದ ಕಾರ್ಯಾಧ್ಯಕ್ಷ ಬಿ.ಉಮೇಶ್, ಪ್ರಾಂಶುಪಾಲರಾದ ಎಂ.ನಾರಾಯಣಪ್ಪ, ಅನ್ಸರ್ ಉಲ್ ಹಕ್, ಡಾ.ನರಸಿಂಹಸ್ವಾಮಿ, ಕನ್ನಡ ಉಪನ್ಯಾಸಕರ ರಾಮು, ಚೆನ್ನಾಂಬಿಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದಿನೇಶ್ ಉಪಸ್ಥಿತರಿದ್ದರು.

ಪೊಟೋ೨೧ಸಿಪಿಟಿ೨:

ರಾಮನಗರದ ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಬೆಂಗಳೂರು ವಿಭಾಗಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.