ಪ್ರತಿಭೆ ಮಕ್ಕಳ ವ್ಯಕ್ತಿತ್ವ ರೂಪಿಸುತ್ತದೆ: ನಂದನೂರ

| Published : May 20 2024, 01:35 AM IST

ಸಾರಾಂಶ

ಶಿಕ್ಷಕರು ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಪರಿಹಾರ ಬೋಧನೆ ಮಾಡಿರುವುದರಿಂದ ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಳವಾಗಿದ್ದು, ಪ್ರತಿಭೆ ಮಕ್ಕಳ ವ್ಯಕ್ತಿತ್ವ ರೂಪಿಸುತ್ತದೆ ಎಂದು ಜಿಲ್ಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಪನಿರ್ದೇಶಕ ಬಿ.ಕೆ. ನಂದನೂರ ಹೇಳಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಶಿಕ್ಷಕರು ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಪರಿಹಾರ ಬೋಧನೆ ಮಾಡಿರುವುದರಿಂದ ಈ ವರ್ಷ ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಳವಾಗಿದೆ. ಪ್ರತಿಭೆ ಮಕ್ಕಳ ವ್ಯಕ್ತಿತ್ವ ರೂಪಿಸುತ್ತದೆ ಎಂದು ಜಿಲ್ಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಪನಿರ್ದೇಶಕ ಬಿ.ಕೆ. ನಂದನೂರ ಹೇಳಿದರು.

ಭಾನುವಾರ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಆಶ್ರಯದಲ್ಲಿ ಹಮ್ಮಿಕೊಂಡ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಕನ್ನಡ ವಿಷಯದಲ್ಲಿ ಗರಿಷ್ಠ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ವರ್ಷ ಕಟ್ಟುನಿಟ್ಟಿನ ಕ್ರಮದೊಂದಿಗೆ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ಇದರ ನಡುವೆಯೂ ಸತತ ಅಭ್ಯಾಸ ಮಾಡಿ ಹೆಚ್ಚಿನ ಅಂಕ ತೆಗೆದುಕೊಂಡು ಜಿಲ್ಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿರುವುದು ಸಂತಸ ತಂದಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೈ.ಕುಂದರಗಿ ಮಾತನಾಡಿ, ಎಸ್.ಎಸ್.ಎಲ್.ಸಿ ಪರೀಕ್ಷೆಯ ಎರಡನೆ ಹಂತಕ್ಕೆ ಆದ್ಯತೆ ನೀಡಿದ್ದು, ಎ.ಬಿ.ಸಿ.ಡಿ ವರ್ಗಗಳನ್ನಾಗಿ ವಿಂಗಡಿಸಿ ಪಾಠಮಾಡಲಾಗುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಸರಿಯಾದ ರೀತಿಯಲ್ಲಿ ಅಧ್ಯಯನ ಮಾಡಿಸುತ್ತಿದ್ದು, ಉತ್ತಮ ಫಲಿಂತಾಶ ಬರುವ ವಿಶ್ವಾಸ ಇದೆ ಎಂದು ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ಇಷ್ಟಕ್ಕೆ ಸಂತೃಪ್ತಿಪಟ್ಟುಕೊಳ್ಳದೆ ಇನ್ನೂ ಹೆಚ್ಚಿನ ಅಧ್ಯಯನ ಮಾಡುವ ಮೂಲಕ ಬದುಕು ಕಟ್ಟಿಕೊಳ್ಳಬೇಕು. ಸಮಾಜದ ಅಭಿವೃದ್ಧಿ, ದೇಶ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಹೇಳಿದರು.

ಕರವೇ ಅಧ್ಯಕ್ಷ ರವಿ ಅಂಗಡಿ,ಗುತ್ತಿಗೆದಾರ ಮಾರುತಿ ಜಾಧವ, ಬಾದಾಮಿ ಕ್ಷೇತ್ರ ಸಮನ್ವಾಯಾಧಿಕಾರಿ ಮಲ್ಲಿಕಾರ್ಜುನ ದೊಡ್ಡಪ್ಪನವರ ಮಾತನಾಡಿದರು. ಕಸಾಪ ತಾಲೂಕಾಧ್ಯಕ್ಷ ಎಚ್.ಎಸ್. ಘಂಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಞಾನಸಿಂಧು ಕಲಾ ತಂಡದ ಸದಸ್ಯರು ನಾಡಗೀತೆ ಹಾಡಿದರು.ಇದೇ ಸಂದರ್ಭದಲ್ಲ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಕನ್ನಡ ವಿಷಯದಲ್ಲಿ ಗರಿಷ್ಠ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಜಿಲ್ಲಾ ಕೋಶಾಧ್ಯಕ್ಷ ಸಿ.ಎಂ. ಜೋಶಿ, ಚಂದ್ರಶೇಖರ ಕಾಳನ್ನವರ, ಈರಣ್ಣ ಅಲದಿ, ಯಲ್ಲಪ್ಪ ಮನ್ನಿಕಟ್ಟಿ, ವಿ.ಕೆ.ಬದಿ, ಮಲ್ಲಿಕಾರ್ಜುನ ಹಾಲೀಗೇರಿ, ಎ.ಎಸ್. ಕಾಡರ, ಸಂಗಣ್ಣ ಚಿಕ್ಕಾಡಿ, ಶಂಕರ ಮುಂದಿನಮನಿ, ಪರಶುರಾಮ ಮಾದರ, ಗುಂಡಪ್ಪ ಕೋಟಿ, ಭಾಗೀರಥಿ ಆಲೂರ, ನಾಗರತ್ನಾ ಜಮಖಂಡಿ ಇತರರು ಇದ್ದರು.