ಸರ್ಕಾರಿ ಶಾಲಾಕಾಲೇಜು ಎಂದರೆ ಅಸಡ್ಡೆಯಿಂದ ನೋಡುವ ದಿನಗಳು ದೂರವಾಗಿದೆ. ಸರ್ಕಾರ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.

ಸಾಗರ: ಸರ್ಕಾರಿ ಶಾಲಾಕಾಲೇಜು ಎಂದರೆ ಅಸಡ್ಡೆಯಿಂದ ನೋಡುವ ದಿನಗಳು ದೂರವಾಗಿದೆ. ಸರ್ಕಾರ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.

ಪಟ್ಟಣದ ನೆಹರೂ ಮೈದಾನದಲ್ಲಿ ಬುಧವಾರ ಸರ್ಕಾರಿ ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಅವರು, ಪ್ರತಿಭಾವಂತ ವಿದ್ಯಾರ್ಥಿಗಳು ನಮ್ಮೂರಿನ ಆಸ್ತಿಯಾಗಿದ್ದು, ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಕಾಲೇಜು ಮಾತ್ರವಲ್ಲದೆ ಸಮಾಜ ಸಹ ಮಾಡಬೇಕು ಎಂದು ಹೇಳಿದರು.ಸರ್ಕಾರಿ ಪದವಿಪೂರ್ವ ಕಾಲೇಜು ಐದು ದಶಕ ಪೂರೈಸಿರುವ ಹಿನ್ನೆಲೆಯಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದ್ದು ೯೫ ಲಕ್ಷ ರು. ವೆಚ್ಚದಲ್ಲಿ ಸುಸಜ್ಜಿತ ಐದು ಕೊಠಡಿ ಲೋಕಾರ್ಪಣೆ ಮಾಡಲಾಗಿದೆ. ಸುಣ್ಣಬಣ್ಣಕ್ಕೆ, ರಿಪೇರಿ, ಶೌಚಾಲಯ ನಿರ್ಮಾಣಕ್ಕೆ ೫೦ ಲಕ್ಷ ರು. ಖರ್ಚು ಮಾಡಿದೆ. ರಂಗಮಂದಿರದ ಅಗತ್ಯವಿದ್ದು ಅದನ್ನು ಮುಂದಿನ ಬಜೆಟ್‌ನಲ್ಲಿ ತರಲಾಗುತ್ತದೆ ಎಂದರು.ನೀವು ಓದಿದ ಶಾಲೆ ದೇವಾಲಯ ಇದ್ದಂತೆ. ಇದರ ಅಭಿವೃದ್ಧಿಗೆ ನೀವು ಕೈಜೋಡಿಸಿ. ನಾನು ಹಳೇಯ ವಿದ್ಯಾರ್ಥಿಯಾಗಿ ಸುವರ್ಣ ಮಹೋತ್ಸವದಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು, ಇಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಉಪನ್ಯಾಸಕ ವರ್ಗವನ್ನು ಕರೆಸಿ ಸನ್ಮಾನಿಸಿರುವುದು ನನಗೆ ಅತೀವ ಸಂತೋಷ ತಂದಿದೆ. ಹಳೇಯ ವಿದ್ಯಾರ್ಥಿಗಳು ತಾವು ಓದಿದ ಶಾಲೆಯೊಂದಿಗಿನ ಒಡನಾಟ ಕಳೆದುಕೊಳ್ಳಬಾರದು ಎಂದು ಸಲಹೆ ನೀಡಿದರು.ಪ್ರಾಚಾರ್ಯ ಸತ್ಯನಾರಾಯಣ.ಕೆ.ಸಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಿ.ಎ.ಇಂದೂಧರ, ಸದಸ್ಯರಾದ ಉಮೇಶ್, ಸಲೀಂ, ಲೋಕೇಶ್, ಭವ್ಯ, ಕೃಷ್ಣಮೂರ್ತಿ ಬಿಳಿಗಲ್ಲೂರು, ಬಸವರಾಜ್ ಇನ್ನಿತರರು ಹಾಜರಿದ್ದರು.