ಕನ್ನಡಪ್ರಭ ವಾರ್ತೆ ಮಂಡ್ಯ

ರಾಜಕಾರಣದಲ್ಲಿ ಉದಯ್ ಇನ್ನೂ ಬಹಳ ಚಿಕ್ಕವರು. ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುವಾಗ ಇತಿಹಾಸ ತಿಳಿದು ಮಾತನಾಡುವುದು ಒಳ್ಳೆಯದು. ಅಧಿಕಾರದ ಅಮಲಿನಲ್ಲಿ ತಲೆ ತಿರುಗಾಟ ಹೆಚ್ಚಾಗಿದೆ. ಅದನ್ನು ಕಡಿಮೆ ಮಾಡಿಕೊಳ್ಳದಿದ್ದರೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಕಿಡಿಕಾರಿದರು.

ದೊಡ್ಡವರ ಬಗ್ಗೆ ಮಾತನಾಡಿದರೆ ದೊಡ್ಡವನಾಗುತ್ತೇನೆಂಬ ಭ್ರಮೆ ಬೇಡ, ಈಗಾಗಲೇ ನಿಮ್ಮ ಬಗ್ಗೆ ನಿಮ್ಮ ಕಾರ್ಯವೈಖರಿ ಕುರಿತು ಮದ್ದೂರು ಕ್ಷೇತ್ರದ ಬೀದಿ ಬೀದಿಗಳಲ್ಲಿ ಜನ ಮಾತನಾಡುತ್ತಿದ್ದಾರೆ. ದೇವೇಗೌಡರ ರಾಜಕೀಯ ಇತಿಹಾಸವೇ ಉದಯ್‌ಗೆ ಗೊತ್ತಿಲ್ಲ. ಡಿ.ಸಿ.ತಮ್ಮಣ್ಣನವರ ವಿರುದ್ಧ ಸಿದ್ದರಾಜು ಅವರನ್ನು ಗೆಲ್ಲಿಸಿದ್ದು ಯಾರು, ಅವರು ನಿಧನರಾದ ನಂತರ ಕಲ್ಪನಾ ಸಿದ್ದರಾಜುಗೆ ಟಿಕೆಟ್ ಕೊಟ್ಟು ಗೆಲ್ಲಿಸಿದವರು ಯಾರು. ಕಾಂಗ್ರೆಸ್‌ನಲ್ಲಿ ಟಿಕೆಟ್ ಸಿಗದಿದ್ದಾಗ ಕೆ.ಎನ್.ನಾಗೇಗೌಡರನ್ನು ಪಕ್ಷಕ್ಕೆ ಸೇರಿಸಿಕೊಂಡು ಮಂತ್ರಿ ಮಾಡಿದ್ದು ಯಾರು, ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗುತ್ತಾರೆಂದು ಮದ್ದೂರು, ಮಂಡ್ಯದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಔದಾರ್ಯ ತೋರಿದ್ದರು. ಈ ಇತಿಹಾಸವೇ ಉದಯ್‌ಗೆ ಗೊತ್ತಿಲ್ಲ. ರಾಜಕಾರಣದಲ್ಲಿ ದೇವೇಗೌಡರೆದುರು ಉದಯ್ ಒಬ್ಬ ಸಣ್ಣ ಮನುಷ್ಯ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಎಚ್.ಡಿ.ಕುಮಾರಸ್ವಾಮಿ ಹೃದಯವಂತ ರಾಜಕಾರಣಿ. ಅವರ ಬಗ್ಗೆಯೂ ಹಗುರವಾಗಿ ಮಾತನಾಡುತ್ತಾರೆ. ಅಷ್ಟೇ ಏಕೆ ಆ ಕುಟುಂಬ ಚಿಕ್ಕ ಮಗುವನ್ನೂ ಗುರಿಯಾಗಿಸಿ ಮಾತನಾಡುತ್ತಾರೆಂದರೆ ಅವರ ಬಗ್ಗೆ ಎಷ್ಟು ದ್ವೇಷ ಇದೆ ಎಂಬುದು ತಿಳಿಯುತ್ತದೆ. ಮದ್ದೂರು ಕ್ಷೇತ್ರದ ಜನ ನಿಮ್ಮನ್ನು ಕೈ ಹಿಡಿದಿದ್ದಾರೆ. ಅದಕ್ಕೆ ತಕ್ಕ ಕೆಲಸ ಮಾಡಿ, ಅದು ಬಿಟ್ಟು ನಾಲಿಗೆಯನ್ನು ಹರಿಯಬಿಡಬೇಡಿ ಎಂದು ಸಲಹೆ ನೀಡಿದರು.

ಮಾಜಿ ಪ್ರಧಾನಿ ಮತ್ತು ಮಾಜಿ ಮುಖ್ಯಮಂತ್ರಿ ಮನಸ್ಸು ಮಾಡಿದ್ದರೆ ಪ್ರಜ್ವಲ್ ರೇವಣ್ಣ ಅವರನ್ನು ಕ್ಷಣಾರ್ಧದಲ್ಲೇ ಜೈಲಿನಿಂದ ಬಿಡುಗಡೆ ಮಾಡಬಹುದಿತ್ತು ಎಂಬ ಮದ್ದೂರು ಶಾಸಕರ ಹೇಳಿಕೆ ಸಂವಿಧಾನಕ್ಕೆ ವಿರೋಧ ಮತ್ತು ಅಪಪ್ರಚಾರದಿಂದ ಕೂಡಿದೆ. ಶಾಸಕರಾಗಿರುವವರಿಗೆ ಕನಿಷ್ಠ ಜ್ಞಾನವೂ ಇಲ್ಲದೆ, ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವವರನ್ನು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಬಿಡಿಸಬಹುದಿತ್ತು ಎಂದು ಹೇಳಿರುವುದು ತಿಳುವಳಿಕೆಯ ಮಟ್ಟಕ್ಕೆ ಸಾಕ್ಷಿಯಾಗಿದೆ ಎಂದು ಜರಿದರು.


ಪ್ರಜ್ವಲ್ ರೇವಣ್ಣ ಅವರು ತಪ್ಪು ಮಾಡಿದ್ದರೆ ಅದಕ್ಕೆ ಕಾನೂನು ಇದೆ, ನ್ಯಾಯಾಲಯ ಇದೆ. ತಪ್ಪೇ ಮಾಡಿದ್ದರೆ ಶಿಕ್ಷೆ ಅನುಭವಿಸುತ್ತಾರೆ. ಇಲ್ಲದಿದ್ದರೆ ಕಾನೂನು ಪ್ರಕಾರ ಹೊರಗೆ ಬರುತ್ತಾರೆ ಎಂದರು.

ನಿಮ್ಮ ನಾಯಕರು ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡೇ ಓಡಾಡುತ್ತಾರೆ. ನೀವು ಸಂವಿಧಾನಕ್ಕೆ ವಿರುದ್ಧವಾಗಿ ಮಾತನಾಡುತ್ತೀರಿ. ನೆಹರು, ಇಂದಿರಾ, ರಾಜೀವ್, ಸೋನಿ, ರಾಹುಲ್, ಪ್ರಿಯಾಂಕ ಅವರೆಲ್ಲರೂ ಸಹ ಒಂದೇ ಕುಟುಂಬದವರೇ. ಅವರೆಲ್ಲರೂ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದು. ಆದರೆ ಸಾಮಾನ್ಯ ರೈತ ಕುಟುಂಬದ ದೇವೇಗೌಡ, ಕುಮಾರಸ್ವಾಮಿ ಅವರ ಕುಟುಂಬದವರು ರಾಜಕೀಯವಾಗಿ ಯಾವುದೇ ಹುದ್ದೆಗಳನ್ನು ಅನುಭವಿಸಬಾರದು ಎಂಬುದು ನಿಮ್ಮ ಆಶಯವೇ, ಮೊದಲು ನೀವು ಪ್ರತಿನಿಧಿಸುವ ಪಕ್ಷದ ನಾಯಕರ ಬಗ್ಗೆ ಮಾತನಾಡಿ, ಆಮೇಲೆ ಬೇರೆಯವರ ಬಗ್ಗೆ ಮಾತನಾಡುವಿರಂತೆ ಎಂದು ತಿರುಗೇಟು ನೀಡಿದರು.