ಸಾರಾಂಶ
ಅನ್ಯ ಭಾಷಿಕರೊಂದಿಗೆ ಅವರ ಭಾಷೆಯಲ್ಲಿ ಮಾತನಾಡುವ ಬದಲಿಗೆ ಕನ್ನಡದಲ್ಲಿ ಮಾತನಾಡುವ ಮೂಲಕ ಅವರಿಗೂ ಕನ್ನಡದ ಕಂಪನ್ನು ಪಸರಿಸಬೇಕು ಎಂದು ತಹಸೀಲ್ದಾರ ಆರ್.ಎಚ್. ಭಾಗವಾನ್ ಹೇಳಿದರು.
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು
ಅನ್ಯ ಭಾಷಿಕರೊಂದಿಗೆ ಅವರ ಭಾಷೆಯಲ್ಲಿ ಮಾತನಾಡುವ ಬದಲಿಗೆ ಕನ್ನಡದಲ್ಲಿ ಮಾತನಾಡುವ ಮೂಲಕ ಅವರಿಗೂ ಕನ್ನಡದ ಕಂಪನ್ನು ಪಸರಿಸಬೇಕು ಎಂದು ತಹಸೀಲ್ದಾರ ಆರ್.ಎಚ್. ಭಾಗವಾನ್ ಹೇಳಿದರು. ನಗರದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಭವಿಷ್ಯದ ಪೀಳಿಗೆಗೆ ನಾಡ ಪ್ರೇಮ ಬೆಳೆಸುವ ಶಿಕ್ಷಣ ನೀಡಿ ನಮ್ಮ ಸಂಸ್ಕೃತಿಯ ಕುರಿತು ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದರು. ಕರ್ನಾಟಕ ಸಂಘದ ಬಳಿ ತಾಯಿ ಭುವನೇಶ್ವರಿದೇವಿ ಭಾವಚಿತ್ರದ ಮೆರವಣಿಗೆಗೆ ತಹಸೀಲ್ದಾರ್ ಆರ್.ಎಚ್.ಭಾಗವಾನ್ ಚಾಲನೆ ನೀಡಿದರು. ನಂತರ ಇಲ್ಲಿಂದ ಹೊರಟ ಮೆರವಣಿಗೆಯು ಪೋಸ್ಟ್ ಸರ್ಕಲ್, ಬಸ್‌ನಿಲ್ದಾಣ ರಸ್ತೆ, ಪುನೀತ್ ರಸ್ತೆ ಮಾರ್ಗವಾಗಿ ಕಸಾಪ ಭವನಕ್ಕೆ ಬಂದು ಸೇರಿತು.ಮೆರವಣಿಗೆಯಲ್ಲಿ ನಾಡಿನ ಏಳಿಗೆಗಾಗಿ ಶ್ರಮಿಸಿದ ಕವಿ, ಕಲಾವಿದರು, ಸಾಹಿತಿಗಳು, ದಾರ್ಶನಿಕರು, ಸ್ವಾತಂತ್ರ ಹೋರಾಟಗಾರರ ವೇಷಗಳನ್ನು ಧರಿಸಿದ ಶಾಲಾ ಮಕ್ಕಳು ಸಾರ್ವಜನಿಕರ ಗಮನ ಸೆಳೆದರು.ನಗರಸಭೆ ಪೌರಾಯುಕ್ತ ಫಕ್ಕಿರಪ್ಪ ಇಂಗಳಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಾಮಸುಂದರ ಅಡಿಗ, ಶಹರ ಸಿಪಿಐ ಡಾ.ಶಂಕರ್, ಸಿಡಿಪಿಒ ಪಾರ್ವತಿ ಹುಂಡೇಕಾರ, ಕರ್ನಾಟಕ ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ, ತಾಲೂಕು ಕಸಾಪ ಪ್ರಭಾಕರ ಶಿಗ್ಲಿ, ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ, ಕೊಟ್ರೇಶಪ್ಪ ಎಮ್ಮಿ, ಪ್ರಭು ಹಲಗೇರಿ, ಶ್ರೀನಿವಾಸ ಏಕಬೋಟೆ, ಡಾ. ಬಸವರಾಜ ಕೇಲಗಾರ, ಕೆ.ಎನ್. ಷಣ್ಮುಖ , ಸಂದೀಪ ರೂಪನಗುಡಿ, ಶಿವಕುಮಾರ ಜಾಧವ ಹಾಗೂ ವಿವಿಧ ಪರ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು ಇದ್ದರು.