ನಿಮ್ಮೊಳಗಿನ ಆತ್ಮದೊಂದಿಗೆ ಮಾತನಾಡಿ: ನಟ ಉಪೇಂದ್ರ

| Published : Dec 05 2024, 12:30 AM IST

ಸಾರಾಂಶ

ವಿದ್ಯಾರ್ಥಿಗಳೇ ದೇವರು. ನಿಮ್ಮೊಳಗೊಬ್ಬ ನಾಯಕ ಇದ್ದಾನೆ. ಎಲ್ಲದಕ್ಕೂ ನಿಮ್ಮಲ್ಲೇ ಉತ್ತರ ಇರುತ್ತದೆ. ನಾನು ಐ ಆ್ಯಮ್ ಗಾಡ್, ಗಾಡ್ ಇಸ್ ಗ್ರೇಟ್ ಎಂದಿದ್ದೆ. ಅದೆಲ್ಲವನ್ನೂ ನೀವು ಹೇಳಿಕೊಳ್ಳಬೇಕು.

ಹುಬ್ಬಳ್ಳಿ:

ನಿನ್ನೊಳಗೊಬ್ಬ ಗೆಳೆಯ, ಆತ್ಮ ಮತ್ತು ಪರಮಾತ್ಮನಿದ್ದಾನೆ. ಆತನೊಂದಿಗೆ ಮಾತನಾಡುವುದನ್ನು ಕಲಿಯಬೇಕು. ಬೇರೆ ಯಾರ ಮಾತನ್ನೂ ಕೇಳಬಾರದು ಎಂದು ನಟ ಉಪೇಂದ್ರ ಹೇಳಿದರು.

ಇಲ್ಲಿಯ ವಿದ್ಯಾನಗರದ ಬಿವಿಬಿ ಕಾಲೇಜು ಆವರಣದಲ್ಲಿ ಮಾದಕ ವಸ್ತು ವಿರುದ್ಧ ಜಾಗೃತಿ ಅಭಿಯಾನದ ವಾಕಥಾನ್‌ಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು.

ಇಷ್ಟೊಂದು ದೇವರುಗಳಿಗೆ ಹೇಳುವುದೇನಿದೆ. ವಿದ್ಯಾರ್ಥಿಗಳೇ ದೇವರು. ನಿಮ್ಮೊಳಗೊಬ್ಬ ನಾಯಕ ಇದ್ದಾನೆ. ಎಲ್ಲದಕ್ಕೂ ನಿಮ್ಮಲ್ಲೇ ಉತ್ತರ ಇರುತ್ತದೆ. ನಾನು ಐ ಆ್ಯಮ್ ಗಾಡ್, ಗಾಡ್ ಇಸ್ ಗ್ರೇಟ್ ಎಂದಿದ್ದೆ. ಅದೆಲ್ಲವನ್ನೂ ನೀವು ಹೇಳಿಕೊಳ್ಳಬೇಕು. ಮಾದಕ ವ್ಯಸನದಿಂದ ನೀವೇ ದೂರ ಇರಬೇಕು ಎಂದು ಸಲಹೆ ನೀಡಿದರು.

ಹಾಡು, ಡೈಲಾಗ್‌ ಅಬ್ಬರ:

ಉಪೇಂದ್ರ ಅವರು ರಕ್ತ ಕಣ್ಣೀರು, ಯುಐ ಸೇರಿದಂತೆ ಹಲವು ಚಿತ್ರಗಳ ಡೈಲಾಗ್ ಹೇಳಿ ವಿದ್ಯಾರ್ಥಿಗಳನ್ನು ರಂಜಿಸಿದರು. ತಮ್ಮದೇ ಚಿತ್ರದ ಹಾಡಿಗೆ ಹೆಜ್ಜೆ ಹಾಕಿ ವಿದ್ಯಾರ್ಥಿಗಳೂ ಹೆಜ್ಜೆಹಾಕುವಂತೆ ಮಾಡಿದರು.

ಈ ವೇಳೆ ಜಿಲ್ಲಾಧಿಕಾರಿ ದಿವ್ಯಪ್ರಭು ಹಾಗೂ ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಡಿಸಿಪಿಗಳಾದ ಮಹಾನಿಂಗ ನಂದಗಾವಿ, ಸಿ.ಆರ್. ರವೀಶ, ಕೆಎಲ್‌ಇ ತಾಂತ್ರಿಕ ವಿವಿಯ ಸಹ ಕುಲಾಧಿಪತಿ ಡಾ. ಅಶೋಕ ಶೆಟ್ಟರ್, ಕೆಎಂಸಿಆರ್‌ಐ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ, ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ, ಡಾ. ರಾಜಕುಮಾರ ಅಭಿಮಾನಿಗಳ ಸಂಘದ ಅಧ್ಯಕ್ಷ ಶಿವಾನಂದ ಮುತ್ತಣ್ಣವರ, ವಿಜಯಕುಮಾರ ಅಪ್ಪಾಜಿ ಸೇರಿದಂತೆ ಹಲವರಿದ್ದರು.

ವಾಕ್‌ಥಾನ್‌ನಲ್ಲಿ ಹೆಜ್ಜೆ ಹಾಕಿದ ಉಪೇಂದ್ರ

ಬಿವಿಬಿ ಕಾಲೇಜಿನಿಂದ ಶಿರೂರ ಪಾರ್ಕ್ ರಸ್ತೆ ಮೂಲಕ ತೋಳನಕೆರೆಯ ವರೆಗೆ ಹು-ಧಾ ಎಲ್ಲ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳ ಸಹಭಾಗಿತ್ವದಲ್ಲಿ ಅಪರಾಧ ತಡೆ, ಸಂಚಾರ ನಿಯಮ ಪಾಲನೆ ಮತ್ತು ಮಾದಕ ವಸ್ತು ಬಳಕೆ ವಿರುದ್ಧ ಜಾಗೃತಿಗಾಗಿ ವಾಕ್‌ಥಾನ್‌ ಹಮ್ಮಿಕೊಳ್ಳಲಾಯಿತು. ನಟ ಉಪೇಂದ್ರ ವಾಕ್‌ಥಾನ್‌ನಲ್ಲಿ ಹೆಜ್ಜೆ ಹಾಕಿದರು. ಇವರಿಗೆ ಜಿಲ್ಲಾಧಿಕಾರಿ ದಿವ್ಯಪ್ರಭು, ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ ಸಾಥ್‌ ನೀಡಿದರು. ನಂತರ ತೋಳನಕೆರೆ ಮುಂಭಾಗದಲ್ಲಿ ಆಯೋಜಿಸಿದ್ದ ಬಹಿರಂಗ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ನಟ ಉಪೇಂದ್ರ ಮಾತನಾಡಿದರು.ನೀವು ಮಾಡಿದರೆ ಪ್ರಜಾಕೀಯ

ನಾನು ಮಾಡಿದರೆ ರಾಜಕೀಯ, ಅದೇ ನೀವು ಮಾಡಿದರೆ ಪ್ರಜಾಕೀಯ ಎಂದು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉಪೇಂದ್ರ ಉತ್ತರಿಸಿದರು. ಪ್ರಜಾಕೀಯ ಅಂತಹ ಬಂದಿರುವುದು ಪ್ರಜೆಗಳಿಗಾಗಿ. ನಾವು ರಾಜಕೀಯ ಮಾಡಬಾರದು. ಪ್ರಜಾಕೀಯ ಮಾಡಬೇಕು. ನೀವು ನಿಮಗಾಗಿ ಇರುವುದೇ ಪ್ರಜಾಕೀಯ. ಅಧಿಕಾರ ಪಡೆಯುವುದು ಎಷ್ಟೊಂದು ಕಷ್ಟ ಎನ್ನುವುದು ಇವರನ್ನು ನೋಡಿ ಅರಿತುಕೊಳ್ಳಿ ಎಂದು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರತ್ತ ಬೊಟ್ಟು ಮಾಡಿ ತೋರಿಸಿದರು.