ಧಾರವಾಡ:

ಧಾರವಾಡ ಜಿಲ್ಲಾಸ್ಪತ್ರೆ ಸೇರಿದಂತೆ ರಾಜ್ಯದ ವಿವಿಧೆಡೆ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದು ತಜ್ಞ ವೈದ್ಯರ, ವೈದ್ಯರ, ಶಶ್ರೂಷಕರ, ಡಿ ಗ್ರೂಪ್‌ ನೌಕರರ ಕೊರತೆ ಇದೆ. ಸ್ಕ್ಯಾನಿಂಗ್‌ ಯಂತ್ರಗಳ ಸಮಸ್ಯೆ ಸೇರಿ ಮೂಲಭೂತ ಸೌಲಭ್ಯಗಳ ಅಗತ್ಯವೂ ಇದ್ದು, ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಹೇಳಿದರು.

ಸೋಮವಾರ ಜಿಲ್ಲಾಸ್ಪತ್ರೆ ಹಾಗೂ ಅಲ್ಲಿಯ ತಾಯಿ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ಅ‍ವರು, ಸರ್ಕಾರಿ ಆಸ್ಪತ್ರೆಗಳ ಬಗ್ಗೆ ದೂರುಗಳು ಸಾಮಾನ್ಯ. ಸಾರ್ವಜನಿಕರು, ಸಿಬ್ಬಂದಿ ಜಿಲ್ಲಾಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಗ್ಗೆ ಅನೇಕ ದೂರು ನೀಡುತ್ತಾರೆ. ಆದರೆ, ಜಿಲ್ಲಾಸ್ಪತ್ರೆ ಬಗ್ಗೆ, ಜಿಲ್ಲಾ ಶಸ್ತ್ರಕಿತ್ಸಕರ, ವೈದ್ಯಾಧಿಕಾರಿಗಳ ಬಗ್ಗೆ ಉತ್ತಮ ಅಭಿಪ್ರಾಯವಿದೆ. ಇಷ್ಟಾಗಿಯೂ ಈ ಭೇಟಿ ಸಂದರ್ಭದಲ್ಲಿ ಅನೇಕ ಸಾರ್ವಜನಿಕರು ಮನವಿ ಸಲ್ಲಿಸಿದ್ದು, ಈ ಕುರಿತು ಪರಿಶೀಲಿಸಿ ಸಂಬಂಧ ಪಟ್ಟ ಇಲಾಖೆಗಳಿಗೆ ಪತ್ರ ಬರೆದು ಕ್ರಮ ವಹಿಸಲಾಗುವುದೆಂದು ಎಂದರು.

ಆಸ್ಪತ್ರೆಯ ಹೆರಿಗೆ ವಿಭಾಗಕ್ಕೆ ಭೇಟಿ ನೀಡಿ, ಬಾಣಂತಿಯರನ್ನು ಮಾತನಾಡಿಸಿದ ಅವರು, ಸೌಲಭ್ಯ ಹಾಗೂ ವೈದ್ಯರ ಚಿಕಿತ್ಸೆ ಸ್ಪಂದನೆ ಕುರಿತು ಅಭಿಪ್ರಾಯ ಸಂಗ್ರಹಿಸಿರುವುದಾಗಿ ತಿಳಿಸಿದರು. ತಾಯಿ ಮತ್ತು ಮಗುವಿನ ಜೀವವನ್ನು ಉಳಿಸುವುದು ಮಹತ್ವದ ಕಾರ್ಯ. ಈ ಕಾರ್ಯ ಜಿಲ್ಲಾಸ್ಪತ್ರೆಯ ವೈದ್ಯರು ಕಳಕಳಿಯಿಂದ ಮಾಡುತ್ತಿದ್ದಾರೆ. ಒಂದು ತಿಂಗಳಲ್ಲಿ 550 ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ. ಅದರಲ್ಲಿ 82 ತಾಯಂದಿರು ಗಂಭೀರ ಸ್ಥಿತಿಯಲ್ಲಿ ಮಗುವಿಗೆ ಜೀವ ನೀಡಿದ್ದಾರೆ ಎಂದರು.

ಸಖಿ ಒನ್ ಕೇಂದ್ರಕ್ಕೆ ಭೇಟಿ ನೀಡಿ, ದಾಖಲಾತಿ ಪರಿಶೀಲಿಸಿ, ಸಾರ್ವಜನಿಕರ ಸ್ಪಂದನೆ ಹಾಗೂ ಅರಿವು ಮೂಡಿಸುವ ಕುರಿತು ಸಿಬ್ಬಂದಿಗಳೊಂದಿಗೆ ಚರ್ಚಿಸಿ, ಮಾಹಿತಿ ಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಸಖಿ ಒನ್ ಕೇಂದ್ರದ ಕುರಿತು ಅರಿವು ಕಾರ್ಯಕ್ರಮ ಆಯೋಜಿಸಲು ಕ್ರಮವಹಿಸಲಾಗುವುದೆಂದು ತಿಳಿಸಿದರು.


ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಡಾ. ಎಚ್.ಎಚ್. ಕುಕನೂರ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಸ್.ಎಂ. ಹೊನಕೇರಿ ಮತ್ತಿತರರು ಇದ್ದರು.

ಕಳೆದ ಮೂರು ವರ್ಷಗಳಲ್ಲಿ 18 ವರ್ಷಗಳಿಗೆ ಕಡಿಮೆ ಇರುವ ಮಕ್ಕಳ 83 ಪೋಕ್ಸೋ ಕೇಸ್ ಪ್ರಕರಣಗಳಾಗಿವೆ. ಸಖಿ ಒನ್ ಸ್ಟಾಪ್ ಕೇಂದ್ರದಿಂದ ದಾಖಲೆ ತೆಗೆದುಕೊಂಡಿದ್ದೇನೆ. ಇದರಲ್ಲಿ 12 ಜನ ಮಕ್ಕಳಿಗೆ ಬಾಲ್ಯವಿವಾಹ ಆಗಿ ಗರ್ಭಿಣಿ ಆಗಿದ್ದಾರೆ. 33 ಜನ ಅಪ್ರಾಪ್ತ ಹೆಣ್ಣು ಮಕ್ಕಳು ಅತ್ಯಾಚಾರಕ್ಕೆ ಒಳಪಟ್ಟು ತಾಯಿ ಆಗಿದ್ದಾರೆ. 22 ಜನರು ಮಕ್ಕಳು ಬೇಡ ಎಂದು ಸ್ವ-ಇಚ್ಛೆಯಿಂದ ಗರ್ಭಪಾತಕ್ಕೆ ಒಳಪಟ್ಟಿದ್ದಾರೆ. ಇಂತಹ ಅಮಾನವಿಯ ಪ್ರಕರಣಗಳು ನಡೆಯುತ್ತಿರುವುದು ದೊಡ್ಡ ದುರಂತ ಮತ್ತು ಆಂತಕ ಪಡುವ ಬೆಳವಣಿಗೆ.

ಡಾ. ನಾಗಲಕ್ಷ್ಮಿ ಚೌಧರಿ, ಮಹಿಳಾ ಆಯೋಗದ ಅಧ್ಯಕ್ಷೆ