ಡೆಂಘೀ ನಿಯಂತ್ರಣಕ್ಕೆ ಚಳ್ಳಕೆರೆ ತಾಲೂಕು ಆಡಳಿತ ವಿಫಲ

| Published : Jul 19 2024, 12:53 AM IST

ಸಾರಾಂಶ

Taluk Administrate failure to stom dengue, action must

-ರೈತ ಸಂಘದ ರಾಜ್ಯ ಮುಖಂಡ ಬೇಡರೆಡ್ಡಿ ಹಳ್ಳಿ ಬಸವರೆಡ್ಡಿ ಆರೋಪ । ರೋಗದ ತೀವ್ರತೆ ಬಗ್ಗೆ ಅಸಡ್ಡೆ ಭಾವನೆ । ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹ

-----

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಡೆಂಘೀ ನಿಯಂತ್ರಣಕ್ಕೆ ಚಳ್ಳಕೆರೆ ತಾಲೂಕು ಆಡಳಿತ ಪೂರ್ಣ ಪ್ರಮಾಣದಲ್ಲಿ ವಿಫಲವಾಗಿದೆ ಎಂದು ರೈತ ಸಂಘದ ರಾಜ್ಯ ಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಆರೋಪಿಸಿದ್ದಾರೆ.

ಜಿಲ್ಲೆಯಲ್ಲಿ ಡೆಂಘೀ ಜ್ವರ ಹರಡುವ ತೀವ್ರತೆಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ರೋಗ ಹತೋಟಿಗೆ ಜಾಥಾ, ಸಭೆಗಳ ಮೂಲಕ ಪ್ರಯತ್ನಿಸುತ್ತಿದೆ. ಜಿಲ್ಲಾಡಳಿತಕ್ಕೆ ಇರುವ ತೀವ್ರತೆ ತಾಲೂಕು ಆಡಳಿತಕ್ಕೆ ಇದ್ದಂತಿಲ್ಲ. ನೆಪ ಮಾತ್ರಕ್ಕೆ ಸಭೆ ಜಿಪಿಎಸ್ ಫೋಟೋಗಳನ್ನು ಜಿಲ್ಲಾಡಳಿತಕ್ಕೆ ರವಾನಿಸಿ ಅವರವರ ಸ್ವಂತ ಕೆಲಸದಲ್ಲಿ ತೊಡಗಿಸಿಕೊಂಡು ರೋಗದ ತೀವ್ರತೆ ಬಗ್ಗೆ ಅಸಡ್ಡೆ ಭಾವನೆ ತೋರಿಸುತ್ತಿದ್ದು, ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಡೆಂಘೀ ಜ್ವರ ಜನರಲ್ಲಿ ಹೆಚ್ಚುತ್ತಿರುವ ಬಗ್ಗೆ ಮಾಧ್ಯಮ ವರದಿ ನೋಡಿ ಹೈಕೋರ್ಟ್ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ, ಜ್ವರ ನಿಯಂತ್ರಣಕ್ಕೆ ಅನುಸರಿಸುತ್ತಿರುವ ಬಗ್ಗೆ ಸರ್ಕಾರಕ್ಕೆ ವರದಿ ಕೇಳಿ ಜನರ ಜೀವದ ಬಗ್ಗೆ ಕಾಳಜಿ ವಹಿಸಿದೆ. ಆದರೆ, ಅಧಿಕಾರಿಗಳು ಮಾತ್ರ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಾ ಮೈ-ಮರೆತಿದ್ದಾರೆ. ಮೇಲಾಧಿಕಾರಿಗಳ ಒತ್ತಡಕ್ಕೆ ಸಭೆ ಜಾಥಾ ನಡೆಸಿ ಪ್ರಚಾರ ನೀಡಿ ಕೈತೊಳೆದು ಕೊಳ್ಳುತ್ತಿದ್ದಾರೆ.

ಚಳ್ಳಕೆರೆ ತಹಸೀಲ್ದಾರ್‌ ಅವರಿಗೆ ರೈತರು ಪ್ರತಿಭಟನೆ ಮೂಲಕ 2 ಬಾರಿ ರೋಗದ ತೀವ್ರತೆ ಬಗ್ಗೆ ತಾಲೂಕು ಪಂಚಾಯ್ತಿಗೂ 2 ಬಾರಿ ಮನವಿ ಕೊಟ್ಟು ಮುಂದೆ ಆಗಬಹುದಾದ ಪ್ರಾಣಹಾನಿ ತಪ್ಪಿಸಲು ಹಳ್ಳಿಗಳಲ್ಲಿ ಭೇಟಿ ನೀಡಿ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತೆ ಮನವಿ ಮಾಡಲಾಗಿತ್ತು. ಈವರೆಗೂ ಹಳ್ಳಿಗಳಿಗೆ ಭೇಟಿ ನೀಡದೇ ನಿರ್ಲಕ್ಷ್ಯ ವಹಿಸಿದ್ದಾರೆ.

ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಕಚೇರಿಗೆ ಬರುತ್ತಾರೆ. ಕೇಂದ್ರಸ್ಥಾನದಲ್ಲಿ ವಾಸವಿಲ್ಲದೆ ದಾವಣಗೆರೆ, ಚಿತ್ರದುರ್ಗ ದಿಂದ ಓಡಾಡುತ್ತಿದ್ದಾರೆ. ಕಛೇರಿಯಲ್ಲಿ ಕೇಳಿದರೆ ಸಾಹೇಬರು ಸ್ಪಾಟ್ ಬಳ್ಳಾರಿ ವಿಜಿಟ್‌ಗೆ ಹೋಗಿದ್ದಾರೆಂದು ಉತ್ತರ ಸಿಗುತ್ತದೆ. ಜನರೇ ಬಂದು ಇಂತಹ ಕಡೆ ಸಮಸ್ಯೆ ಇದೆಯೆಂದು ದೂರು ನೀಡಿದ್ದರೂ 2 ತಿಂಗಳಿಂದ ಸಮಸ್ಯೆ ಬಗೆಹರಿಸದೇ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಸಮಸ್ಯೆ ಇರುವ ಸ್ಥಳಗಳಿಗೆ ಅಧಿಕಾರಿಗಳು ಭೇಟಿ ನೀಡಿಲ್ಲ. ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರೂ ಜಿಲ್ಲಾಡಳಿತ ಸಮಸ್ಯೆ ಪರಿಹರಿಸುವಂತೆ ಸೂಚನೆ ನೀಡಿದ್ದರೂ ಕ್ರಮವಹಿಸಿಲ್ಲ.

ತಳಕು ಗ್ರಾ.ಪಂ ವ್ಯಾಪ್ತಿಯ ಬಸವನಾಲ ಪಕ್ಕದ ಮನೆಯವರು ನಾಲೆಗೆ ಕೊಳಚೆ ನೀರು ಬಿಡುತ್ತಿದ್ದು, ನೀರು ಮುಂದೆ ಸಾಗದೇ ಅಲ್ಲಿಯೇ ಪಾಚಿಕಟ್ಟಿ ನಿಂತಿದ್ದು ಈ ಬಗ್ಗೆ ಪಂಚಾಯಿತಿ ಗಮನಕ್ಕೆ ತಂದಾಗ, ಮನೆಯವರಿಗೆ ನೋಟೀಸ್ ನೀಡಿ ಗ್ರಾ.ಪಂ ಗೆ ಕೈತೊಳೆದು ಕೊಂಡಿದೆ. ಇದರಿಂದ ವಾಂತಿ, ಭೇದಿ, ಜ್ವರದಿಂದ ಅನೇಕರು ಆಸ್ಪತ್ರೆ ಸೇರಿ ಅಪಾಯದಿಂದ ಪಾರಾಗಿದ್ದಾರೆ. ಖಾಸಗಿ ಶುದ್ಧ ನೀರಿನ ಘಟಕದ ಕಲುಷಿತ ನೀರು ಸಂಗ್ರಹವಾಗಿ ಸೊಳ್ಳೆ ಉತ್ಪತ್ತಿಯಾಗಿ ತೊಂದರೆ ನೀಡುತ್ತಿದ್ದರೂ ಅಧಿಕಾರಿಗಳು ನೀರು ನಿಲ್ಲುವ ಸ್ಥಳದ ಸ್ವಚ್ಚತೆ ಕೈಗೊಂಡಿಲ್ಲವೆಂದು ಬಸವರೆಡ್ಡಿ ಆರೋಪಿಸಿದ್ದಾರೆ.

--------------

ಫೋಟೋ: ಬಸವರೆಡ್ಡಿ