ಶಾಂತಿಯುತ ಮತದಾನಕ್ಕೆ ತಾಲೂಕು ಆಡಳಿತ ಸಿದ್ಧತೆ: ತಹಸೀಲ್ದಾರ್ ಲೋಕೇಶ್

| Published : Mar 29 2024, 12:45 AM IST

ಶಾಂತಿಯುತ ಮತದಾನಕ್ಕೆ ತಾಲೂಕು ಆಡಳಿತ ಸಿದ್ಧತೆ: ತಹಸೀಲ್ದಾರ್ ಲೋಕೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಸೂಕ್ಷ್ಮ ಮತಗಟ್ಟೆ ಕೇಂದ್ರಗಳಲ್ಲಿ ಒಂದಾದ ಸೋಮನಹಳ್ಳಿಯಲ್ಲಿ ಈಗಾಗಲೇ ಸಾರ್ವಜನಿಕರ ಸಭೆ ನಡೆಸಿ ಶಾಂತಿಯುತ ಮತದಾನಕ್ಕೆ ಸಹಕಾರ ಕೋರಲಾಗಿದೆ. ಗ್ರಾಮದಲ್ಲಿ ಪೊಲೀಸ್ ಪಥಸಂಚಲನ ನಡೆಸಿ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್. ಪೇಟೆ

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಶಾಂತಿಯುತ ಮತದಾನಕ್ಕೆ ತಾಲೂಕು ಆಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ತಹಸೀಲ್ದಾರ್ ಡಾ.ಎಸ್.ವಿ.ಲೋಕೇಶ್ ತಿಳಿಸಿದರು.

ಪಟ್ಟಣದ ತಾಲೂಕು ಆಡಳಿತಸೌಧದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಸಂಬಂಧಿಸಿದಂತೆ ಕೃಷ್ಣರಾಜಪೇಟೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಾಲೂಕು ಆಡಳಿತ ಕೈಗೊಂಡಿರುವ ಪೂರ್ವ ಸಿದ್ಧತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿದಂತೆ 261 ಮತಗಟ್ಟೆಗಳಿದ್ದು, ಇದರಲ್ಲಿ 68 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಕ್ಷೇತ್ರ ವ್ಯಾಪ್ತಿ ಚುನಾವಣಾ ಕರ್ತವ್ಯಕ್ಕೆ 1500 ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದರು.

ಮತಗಟ್ಟೆ ಅಧಿಕಾರಿಗಳಿಗೆ ಏಪ್ರಿಲ್ 7 ರಂದು ಮೊದಲ ಹಂತದ ತರಬೇತಿ ನೀಡಲಾಗುತ್ತಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ 1,30,744 ಪುರುಷರು, 1,29,913 ಮಹಿಳೆಯರು ಸೇರಿದಂತೆ ಒಟ್ಟು 2,60,657 ಮತದಾರರಿದ್ದಾರೆ. ಇದರಲ್ಲಿ 1402 ಪುರುಷ ಹಿರಿಯ ಮತದಾರರು , 2499 ಮಹಿಳಾ ಹಿರಿಯ ಮತದಾರರು, 1542 ವಿಶೇಷ ಚೇತನ ಮತದಾರರು ಮತ್ತು 11 ಜನ ತೃತೀಯ ಲಿಂಗಿ ಮತದಾರರಿದ್ದಾರೆ ಎಂದು ಹೇಳಿದರು.

ವಿಶೇಷ ಚೇತನ ಮತದಾರರಿಗೆ ಮತ ಚಲಾಯಿಸಲು ವೀಲ್ ಚೇರ್ ವ್ಯವಸ್ಥೆ ಮಾಡಲಾಗುತ್ತಿದೆ. 261 ಮತಗಟ್ಟೆಗಳಲ್ಲಿ ಶೇ.50 ರಷ್ಟು ಮತಗಟ್ಟೆಗಳನ್ನು ಸಿಸಿ ಟಿವಿ ಪರಿವೀಕ್ಷಣೆಗೆ ಒಳಪಡಿಸಲಾಗಿದೆ. ಮತದಾನಕ್ಕೆ ಅಗತ್ಯವಾದ ಮತಯಂತ್ರಗಳು ಈಗಾಗಲೇ ಕ್ಷೇತ್ರಕ್ಕೆ ಬಂದಿದ್ದು, ಎಲ್ಲಾ ಮತಯಂತ್ರಗಳನ್ನು ಪೊಲೀಸ್ ಭದ್ರತೆಯಲ್ಲಿ ಪಟ್ಟಣದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಸ್ಟ್ರಾಂಗ್ ರೂಂನಲ್ಲಿಡಲಾಗಿದೆ ಎಂದು ತಿಳಿಸಿದರು.

ಪ್ರತಿ ಮತಗಟ್ಟೆಗೂ ನಾನು ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದು, ಮತಗಟ್ಟೆ ಕೇಂದ್ರಗಳಲ್ಲಿ ವಿದ್ಯುತ್ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸೇರಿ ಎಲ್ಲಾ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ವಹಿಸಲಾಗಿದೆ. ಬಿಸಿಲಿನ ಪ್ರಕರತೆ ಹೆಚ್ಚಿರುವುದರಿಂದ ಸಾಧ್ಯವಾದಷ್ಟು ನೆರಳಿನ ವ್ಯವಸ್ಥೆ ಕಲ್ಪಿಸಲು ಯತ್ನಿಸಲಾಗುತ್ತಿದೆ ಎಂದರು.

ಸೂಕ್ಷ್ಮ ಮತಗಟ್ಟೆ ಕೇಂದ್ರಗಳಲ್ಲಿ ಒಂದಾದ ಸೋಮನಹಳ್ಳಿಯಲ್ಲಿ ಈಗಾಗಲೇ ಸಾರ್ವಜನಿಕರ ಸಭೆ ನಡೆಸಿ ಶಾಂತಿಯುತ ಮತದಾನಕ್ಕೆ ಸಹಕಾರ ಕೋರಲಾಗಿದೆ. ಗ್ರಾಮದಲ್ಲಿ ಪೊಲೀಸ್ ಪಥಸಂಚಲನ ನಡೆಸಿ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗಿದೆ ಎಂದು ಹೇಳಿದರು.

ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಎಲ್ಲಾ ಸಿಬ್ಬಂದಿಗೂ ಸೂಚಿಸಲಾಗಿದೆ. ತಾಲೂಕು ವ್ಯಾಪ್ತಿಯಲ್ಲಿನ ಎಲ್ಲಾ ಚೆಕ್ ಪೋಸ್ಟ್ ಗಳಿಗೂ ತಾವು ಭೇಟಿ ನೀಡಿ ಪರಿಶೀಲಿಸಲಾಗಿದೆ. ಯಾವುದೇ 50 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ತನ್ನ ಜೊತೆ ಇಟ್ಟುಕೊಳ್ಳುವಂತಿಲ್ಲ. ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಹಣವಿದ್ದರೆ ಅದಕ್ಕೆ ಸೂಕ್ತ ದಾಖಲಾತಿಗಳನ್ನು ನೀಡಬೇಕಾಗುತ್ತದೆ ಎಂದರು.

ವ್ಯಾಪಾರಿಗಳು ತಾವು ಸಾಗಿಸುವ ಸರಕಿಗೆ ಜಿಎಸ್‌ಟಿ ಬಿಲ್ ಕಡ್ಡಾಯವಾಗಿ ಹೊಂದಿರಬೇಕು. ಇಲ್ಲದಿದ್ದರೆ ದಾಖಲೆಯಿಲ್ಲದ ಹಣ ಮತ್ತು ಸಾಮಗ್ರಿಗಳನ್ನು ವಶಕ್ಕೆ ಪಡೆದು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.