ಸಾರಾಂಶ
ಚಾಮರಾಜನಗರ : ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಊರು ತೊರೆದ ನೂರಾರು ಕುಟುಂಬಗಳ ಜನರ ನೆರವಿಗೆ ಶನಿವಾರ ಇಡೀ ತಾಲೂಕು ಆಡಳಿತ ಧಾವಿಸಿದೆ.
ಚಾಮರಾಜನಗರ ತಾಲೂಕಿನ ಹೆಗ್ಗವಾಡಿಪುರ ಮತ್ತು ದೇಶವಳ್ಳಿ ಗ್ರಾಮಗಳಿಗೆ ತಹಸೀಲ್ದಾರ್ ಗಿರಿಜಾ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್, ಶಿರಸ್ತೇದಾರ್ ವಿನು, ರಾಜಸ್ವ ನಿರೀಕ್ಷಕರಾದ ಸತೀಶ್, ಪಿಡಿಒ ಮಮತಾ ಮತ್ತು ಗ್ರಾಮ ಆಡಳಿತ ಅಧಿಕಾರಿ ದಿಲೀಪ್, ಲೀಡ್ ಬ್ಯಾಂಕ್ ಪ್ರತಿನಿಧಿ ಮಧುಸೂಧನ್ ಖುದ್ದು ಭೇಟಿ ನೀಡಿ ಅಹವಾಲು ಆಲಿಸಿದ್ದಾರೆ.
ಸಾಲು ಸಾಲು ದೂರು:
ಈ ವೇಳೆ ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳು ರಾತ್ರಿ ಬಂದು ಬಾಗಿಲು ತಟ್ಟುತ್ತಾರೆ. ಬಾಯಿಗೆ ಬಂದಂತೆ ಮಾತಾನಾಡ್ತಾರೆ. ಅವಾಚ್ಯವಾಗಿ ನಿಂದಿಸುತ್ತಾರೆ ಎಂದು ಸಂತ್ರಸ್ತರು ಸಾಲು ಸಾಲು ಆರೋಪ ಮಾಡಿದರು.
ಬಾಲಕನ ನೋವಿಗೆ ಸ್ಪಂದನೆ:
ವಿಶೇಷವಾಗಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಎದುರು ಸಾಲ ತೀರಿಸುವುದಕ್ಕಾಗಿ ಕಿಡ್ನಿ ಮಾರಲು ಅವಕಾಶ ಕೊಡಿಸಿ ಎಂದು ಅಲವತ್ತುಗೊಂಡಿದ್ದ ಹೆಗ್ಗವಾಡಿಪುರ ಗ್ರಾಮದ ವಿದ್ಯಾರ್ಥಿ ಮೋಹನ್ ಮನೆಗೆ ತೆರಳಿದ ಅಧಿಕಾರಿಗಳು, ಅವರ ತಾಯಿ ದಿವ್ಯಮಣಿ ಬಳಿ ಸಾಲದ ವಿವರ ಪಡೆದುಕೊಂಡರು. ಫೈನಾನ್ಸ್ ಪ್ರತಿನಿಧಿಗಳ ಕಿರುಕುಳದಿಂದ ಮಗನ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ ಎಂದು ದಿವ್ಯಮಣಿ ಆಪಾದಿಸಿದರು. ಈ ವೇಳೆ ಸಂಬಂಧಪಟ್ಟವರ ವಿರುದ್ದ ಅಗತ್ಯ ಕೈಗೊಳ್ಳುವುದಾಗಿ ತಹಸೀಲ್ದಾರ್ ಗಿರಿಜಾ ಭರವಸೆ ನೀಡಿದರು.
ಸಂಕ್ರಾತಿ ಬಳಿಕ ಗ್ರಾಮಸಭೆ:
ದೇಶವಳ್ಳಿ ಗ್ರಾಮದ ಶೋಭಾ , ಸುಮಾ, ಶಾರದಾ ಮತ್ತು ಹೆಗ್ಗವಾಡಿಪುರ ಗ್ರಾಮದ ನಾಗಮ್ಮ , ಪುಟ್ಟತಾಯಮ್ಮ ಸೇರಿ ಒಟ್ಟು 6 ಮಂದಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಹೆದರಿ ಊರು ಬಿಟ್ಟಿದ್ದಾರೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿರುವುದಾಗಿ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸಂಕ್ರಾಂತಿ ಹಬ್ಬದ ಬಳಿಕ ಗ್ರಾಮಸಭೆ ನಡೆಸುವುದಾಗಿ ತಹಸೀಲ್ದಾರ್ ಗಿರಿಜಾ ತಿಳಿಸಿದರು.
ರೈತ ಮುಖಂಡರಾದ ಮಹೇಶ್ ಕುಮಾರ್, ಹೆಬ್ಬಸೂರು ಬಸವಣ್ಣ, ಭಾಸ್ಕರ್, ಗ್ರಾಮ ಪಂಚಾಯಿತಿ ಸದಸ್ಯರಾದ ಪಿ.ರಾಜು, ಶಿವಕುಮಾರ್, ಮನು, ರಾಜು ಹಾಜರಿದ್ದು ವಿವರ ನೀಡಿದರು.
ಜಿಲ್ಲಾಡಳಿತದಿಂದ ಪ್ರಕಟಣೆ:
ಈ ನಡುವೆ ಊರು ತೊರೆದ ಜನರಲ್ಲಿ ಧೈರ್ಯ ತುಂಬುವ ಸಂಬಂಧ ಜಿಲ್ಲಾಡಳಿತ ಶನಿವಾರ ಪ್ರಕಟಣೆಯೊಂದನ್ನು ಹೊರಡಿಸಿದೆ. ಖಾಸಗಿ ಫೈನಾನ್ಸ್‌ಗಳು, ಸಂಘ ಸಂಸ್ಥೆಗಳು, ಮೈಕ್ರೋ ಫೈನಾನ್ಸ್‌ಗಳು ಹಾಗೂ ಇತರೆ ಬ್ಯಾಂಕ್‌ಗಳಿಂದ ಸಾಲ ವಸೂಲಿಗಾಗಿ ರಿಕವರಿ ಏಜೆಂಟ್‌ಗಳು ದೌರ್ಜನ್ಯ, ಕಿರುಕುಳ, ಮಾನಸಿಕ ಹಿಂಸೆ ನೀಡಿದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ 08226223160 ಹಾಗೂ ವಾಟ್ಸಾಪ್ ಸಂಖ್ಯೆ 9740942901 , ಇ-ಮೇಲ್- ffmcchamarajanagar@gmail.com ಗೆ ಮತ್ತು ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 9480804600 ಗೆ ದೂರು ನೀಡುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದ್ದಾರೆ.