ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡುದಿ. ಆರ್. ಧ್ರುವನಾರಾಯಣ ಅವರು ಸ್ನೇಹಶೀಲ ವ್ಯಕ್ತಿತ್ವ, ಸಾಮಾಜಿಕ ಬದ್ದತೆಯನ್ನು ಹೊಂದಿದ್ದ ಅಪರೂಪದ ರಾಜಕಾರಣಿ ಎಂದು ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಹೇಳಿದರು.ತಾಲೂಕಿನ ಹೆಡತಲೆ ಗ್ರಾಮದಲ್ಲಿ ದಿ. ಆರ್. ಧ್ರುವನಾರಾಯಣ ಅವರ 63ನೇ ವರ್ಷದ ಹುಟ್ಟಹಬ್ಬದ ಅಂಗವಾಗಿ ತಾಲೂಕು ಕಾಂಗ್ರೆಸ್ ಸಮಿತಿ ಮತ್ತು ಯಂಗ್ ಯುವ ಬ್ರಿಗೇಡ್ ಕಾರ್ಯಕರ್ತರು ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಧ್ರುವನಾರಾಯಣ ಅಭಿವೃದ್ದಿಯ ಹರಿಕಾರ ಎಂದೇ ಹೆಸರು ಪಡೆದಿದ್ದವರು, ಅಭಿವೃದ್ದಿಯಲ್ಲಿ ದೇಶಕ್ಕೆ 4ನೇ ಸಂಸದರಾಗಿ ರಾಜ್ಯಕ್ಕೆ ಮೊದಲನೆ ಸಂಸದರೆಂದು ಹೆಗ್ಗಳಿಕೆ ಪಡೆದಿದ್ದ ಅತ್ಯಂತ ಕ್ರಿಯಾಶೀಲ ಸಂಸದರು. ಅಲ್ಲದೆ ಹೆಚ್ಚು ಪ್ರಶ್ನೆಗಳನ್ನು ಕೇಳಿ ಕ್ಷೇತ್ರಕ್ಕೆ ಹೆಚ್ಚು ಅನುದಾನವನ್ನು ತರುತ್ತಿದ್ದವರು. ಅವರ ನೆನಪಿನಲ್ಲಿ ಕಾಂಗ್ರೆಸ್ ಸಮಿತಿ, ಯಂಗ್ ಯುವ ಬ್ರಿಗೇಡ್ ಕಾರ್ಯಕರ್ತರು ರಕ್ತದಾನ ಶಿಬಿರ ಏರ್ಪಡಿಸಿರುವುದು ಉತ್ತಮ ಬೆಳವಣಿಗೆ ಎಂದರು.ಕಾಂಗ್ರೆಸ್ ಎಸ್ಟಿ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ದೊರೆಸ್ವಾಮಿ ನಾಯಕ ಮಾತನಾಡಿ, ದಿ.ಆರ್. ಧ್ರುವನಾರಾಯಣ ಅವರ ಹುಟ್ಟುಹಬ್ಬದ ಅಂಗವಾಗಿ ಯಂಗ್ ಯುವ ಬ್ರಿಗೇಡ್ ಮತ್ತು ಕಾಂಗ್ರೆಸ್ ಸಮಿತಿಯವರು ತಾಲೂಕಿನ ಗೋಳೂರು ಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ, ರಕ್ತದಾನ ಶಿಬಿರದಂತಹ ಸಾಮಾಜಿಕ ಚಟುವಟಿಕೆಗಳ ಮೂಲಕ ಆಚರಣೆ ನಡೆಸುವ ಮೂಲಕ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ. ಶಂಕರ್, ಹುಲ್ಲಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಂಠನಾಯಕ, ತಾಪಂ ಮಾಜಿ ಅಧ್ಯಕ್ಷ ನಾಗೇಶ್ ರಾಜ್, ಯಂಗ್ ಯುವ ಬ್ರಿಗೇಡ್ ಜಿಲ್ಲಾಧ್ಯಕ್ಷ ಪ್ರವೀಣ್, ತಾಲೂಕು ಅಧ್ಯಕ್ಷ ರಾಜು, ಮುಖಂಡರಾದ ಶ್ರೀನಿವಾಸಮೂರ್ತಿ, ಎನ್.ಎಂ. ಮಂಜುನಾಥ್, ಶಿವಪ್ಪದೇವರು, ನಾಗರಾಜಯ್ಯ, ಗೋಳುರು ಮುದ್ದು ಮಾದಶೆಟ್ಟಿ, ಕಾಂಗ್ರೆಸ್ ಯುವ ಅಧ್ಯಕ್ಷ ಅಶೋಕ್ ಇದ್ದರು.--------------