ಸಾರಾಂಶ
ಕನ್ನಡಪ್ರಭ ವಾರ್ತೆ ರಾವಂದೂರು
ವಿದ್ಯಾರ್ಥಿಗಳಿಗೆ ಮನಸ್ಸನ್ನು ಕೇಂದ್ರೀಕರಿಸಿಕೊಳ್ಳಲು ಧ್ಯಾನ ಮುಖ್ಯವಾಗಿರುತ್ತದೆ ಎಂದು ರಾವಂದೂರು ಮುರುಘಾಮಠ ಬಸವ ಕೇಂದ್ರ ಮೋಕ್ಷಪತಿ ಸ್ವಾಮೀಜಿ ಹೇಳಿದರು.ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಚರ್ಚಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿದಿನ 10 ನಿಮಿಷಗಳ ಕಾಲ ಧ್ಯಾನ ಮಾಡಿದರೆ, ಇಡೀ ದಿನ ಮನಸ್ಸನ್ನು ಶಾಂತಿಯುತವಾಗಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಪಾಠ ಕೇಳಲು ಮತ್ತು ಓದಲು ಸಹಕಾರಿಯಾಗಲಿದೆ ಎಂದು ತಿಳುವಳಿಕೆ ಹೇಳಿದರು.ಶಿಕ್ಷಣ ತಜ್ಞ ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿ ಆರ್.ಡಿ. ಸತೀಶ್ ಮಾತನಾಡಿ, ಹಿರಿಯರು ಈ ಶಾಲೆಯನ್ನು ಆರಂಭಿಸಿದ್ದರಿಂದ ನಾವುಗಳೆಲ್ಲ ಗ್ರಾಮೀಣ ಪ್ರದೇಶದಲ್ಲಿ ಓದಿ ವಿದ್ಯಾವಂತರಾಗಲು ಸಾಧ್ಯವಾಯಿತು. ಹಿಂದೆ ಇದೇ ಶಾಲೆಯಲ್ಲಿ ನಡೆಯುತ್ತಿದ್ದ ಚರ್ಚಾ ಸ್ಪರ್ಧೆಗೆ ಜಿಲ್ಲಾಮಟ್ಟದಿಂದ ಬಂದ ವಿದ್ಯಾರ್ಥಿಗಳು ಒಬ್ಬರಿಗಿಂತ ಒಬ್ಬರು ಉತ್ತಮವಾಗಿ ಮಾತನಾಡಿ ಬಹುಮಾನ ಪಡೆದುಕೊಳ್ಳುತ್ತಿದ್ದರು. ಕಾರಣಾಂತರದಿಂದ ಈ ಸ್ಪರ್ಧೆ ನಿಂತುಹೋಗಿತ್ತು. ಇದೀಗ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಮತ್ತೆ ಆರಂಭಿಸಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆರ್.ಎಸ್. ದೊಡ್ಡಣ್ಣ ಮಾತನಾಡಿ, ಪ್ರಜಾಪ್ರಭುತ್ವ ಬಲಗೊಳ್ಳಬೇಕಾದರೆ ಉತ್ತಮ ನಾಯಕರ ಅಗತ್ಯವಿದೆ. ಇಂಥ ನಾಯಕರನ್ನು ಶಾಲಾ ಕಾಲೇಜುಗಳಲ್ಲಿ ತಯಾರು ಮಾಡಬೇಕಾಗಿದೆ. ಇದರಿಂದ ದೇಶ ಉತ್ತಮ ನಾಯಕರನ್ನು ಹೊಂದಿ ಅಭಿವೃದ್ಧಿ ಪಥದತ್ತ ಸಾಗಲು ಅನುಕೂಲವಾಗಲಿದೆ ಎಂದು ತಿಳಿಸಿದರು.ಪಿಎಂ ಪೋಷಣ ಶಕ್ತಿ ನಿರ್ಮಾಣ ಯೋಜನೆ ತಾಲೂಕು ಸಹಾಯಕ ನಿರ್ದೇಶಕ ಎಂ.ಸಿ. ಪ್ರಶಾಂತ್, ಪ್ರಾಂಶುಪಾಲ ಲಕ್ಷ್ಮಿಕಾಂತ್, ಉಪ ಪ್ರಾಂಶುಪಾಲ ಆರ್. ಸುರೇಶ್, ಬೆಟ್ಟದಪುರ ಅನಿಕೇತನ ಪದವಿ ಪೂರ್ವ ಕಾಲೇಜಿನ ಕಾರ್ಯದರ್ಶಿ ಜೆ. ಸೋಮಣ್ಣ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ಸುಜಾತ ವಾಸು, ರಾವಂದೂರಿನ ಮಾನಸ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಆರ್.ಎಸ್. ಚಿಕ್ಕವೀರಪ್ಪ ಬಹುಮಾನ ವಿತರಿಸಿದರು.ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಲಿಲ್ಲಿ ಮೇರಿ, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಎಚ್.ಆರ್. ಕುಮಾರ್, ಅನ್ವರ್ ಪಾಷಾ, ಖಜಾಂಚಿ ಆರ್. ರಮೇಶ್ ಮೂರ್ತಿ, ನಿರ್ದೇಶಕರಾದ ಆರ್ .ಎಸ್. ಮಹೇಶ್, ಆರ್. ಎಸ್. ಸುರೇಶ್, ಶಿವಕುಮಾರಿ, ಆರ್.ಸಿ. ರಾಜೇಂದ್ರ ಇದ್ದರು.
ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಚರ್ಚಾ ಸ್ಪರ್ಧೆಯಲ್ಲಿ ಬೆಟ್ಟದಪುರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿನಿ ಪ್ರೀತಿ ಪ್ರಥಮ ಬಹುಮಾನ ಪಡೆದರು.ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆ ಪೂರಕವು ಅಥವಾ ಮಾರಕವೋ ಎಂಬ ವಿಷಯದ ಬಗ್ಗೆ ನಡೆದ ಚರ್ಚಾ ಸ್ಪರ್ಧೆಯಲ್ಲಿ ಉತ್ತಮವಾಗಿ ಮಾತನಾಡಿದ ಹುಣಸವಾಡಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಮಾನಸ ದ್ವಿತೀಯ ಬಹುಮಾನ ಗಳಿಸಿದರು. ಪಿರಿಯಾಪಟ್ಟಣ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿ ಸಂಕೀರ್ತನ ತೃತೀಯ ಬಹುಮಾನ ಪಡೆದುಕೊಂಡರು.
ಅತ್ತಿಗೋಡು ಸರ್ಕಾರಿ ಪ್ರೌಢಶಾಲೆಯ ಶ್ರಾವ್ಯ ಹಾಗೂ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಪುಷ್ಪಲತಾ ಸಮಾಧಾನಕರ ಬಹುಮಾನ ಗಳಿಸಿದರು.ಚರ್ಚಾ ಸ್ಪರ್ಧೆಯಲ್ಲಿ ಒಟ್ಟು 29 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.