ಸಾರಾಂಶ
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ದೃಢತೆಗೆ ಕ್ರೀಡೆ ಪರಿಣಾಮಕಾರಿಯಾಗುತ್ತದೆ ಎಂದು ಶನಿವಾರಸಂತೆ ಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಜಗನ್‍ಪಾಲ್ ಅಭಿಪ್ರಾಯ ಪಟ್ಟರು.ಅವರು ಶನಿವಾರಸಂತೆ ಭಾರತಿ ಪ್ರಥಮ ದರ್ಜೆ ಕಾಲೇಜು ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ನೆಹರು ಯುವ ಕೇಂದ್ರ ವತಿಯಿಂದ ಭಾರತಿ ವಿದ್ಯಾಸಂಸ್ಥೆ ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪದವಿ ಪೂರ್ವ ವಿದ್ಯಾರ್ಥಿಗಳ ತಾಲೂಕು ಮಟ್ಟದ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಸದಾ ಪಠ್ಯ ಚಟುವಟಿಕೆಯ ಒತ್ತಡದಲ್ಲಿರುತ್ತಾರೆ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಕ್ರೀಡೆ ಮುಂತಾದ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ವೃದ್ದಿಸಿಕೊಳ್ಳುವಂತೆ ಸಲಹೆ ನೀಡಿದರು.ರಾಷ್ಟ್ರೀಯ ಸೇವಾ ಯೋಜನೆ ಘಟಕದ ಯೋಜನಾಧಿಕಾರಿ ಎಂ.ಎನ್.ಹರೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯ ಸಮಿಪಿಸುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಓದಿಗೆ ಸಮಸ್ಯೆಯಾಗದಂತೆ ಒಂದು ದಿನದ ಕ್ರೀಡಾಕೂಟವನ್ನು ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾರತಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಎನ್‌ಕೆ ಅಪ್ ಸ್ವಾಮಿ, ಉಪಾಧ್ಯಕ್ಷ ಮಹಮ್ಮದ್ ಪಾಷ, ನಿರ್ದೇಶಕ ಎ ಎಂ ಆನಂದ, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಇ.ಎಂ.ದಯಾನಂದ್, ಉಪನ್ಯಾಸಕರಾದ ಮೋಹನ್ ಕುಮಾರ್, ಸುರೇಂದ್ರ, ಶೋಭ, ಪ.ಪೂ.ಕಾಲೇಜು ಪ್ರಾಂಶುಪಾಲ ಅಶೋಕ್, ಉಪನ್ಯಾಸಕ ಸೋಮಶೇಖರ್, ದೈಹಿಕ ಶಿಕ್ಷಣ ಶಿಕ್ಷಕ ಪವನ್, ಆದರ್ಶ್, ವಿಘ್ನೇಶ್ವರ ಬಾಲಕಿಯರ ಪ.ಪೂ.ಕಾಲೇಜಿನ ಉಪನ್ಯಾಸಕ ಸರ್ಪರಾಜ್ ಆಹಮ್ಮದ್ ಮುಂತಾದವರಿದ್ದರು.ಹಮ್ಮಿಕೊಂಡಿದ್ದ ಕ್ರೀಡೆ:- ಬಾಲಕರಿಗೆ ವಾಲಿಬಾಲ್, ಬಾಲಕಿಯರಿಗೆ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವೈಯುಕ್ತಿಕ ಕ್ರೀಡೆಯಲ್ಲಿ ಬಾಲಕರಿಗೆ ಷಟಲ್ ಕಾಕ್ ಮತ್ತು ನಿಂಬೆಹಣ್ಣು ಚಮಚ ನಡಿಗೆ ಸ್ಪರ್ಧೆ ಹಾಗೂ ಬಾಲಕಿಯರಿಗೆ 100 ಮೀಟರ್ ಓಟ ಮತ್ತು ಸ್ಲೋ ಸೈಕ್ಲಿಂಗ್ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.