ಸೆಂಟ್ ಆನ್ಸ್ ಶಾಲೆಯಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ

| Published : Sep 21 2024, 01:54 AM IST

ಸಾರಾಂಶ

ಶಿರಾ ನಗರದ ಸೆಂಟ್ ಆನ್ಸ್ ಶಾಲೆಯಲ್ಲಿ ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಾರ್ಯಾಲಯ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಶಿರಾ ಮಕ್ಕಳ ಕಲಿಕೆ ಜೊತೆಗೆ, ಮನೋ ಉಲ್ಲಾಸವನ್ನು ಹೆಚ್ಚಿಸಿ ಕಲಿಕೆಯಲ್ಲಿ ಹೆಚ್ಚು ಆಸಕ್ತಿಯನ್ನು ಮೂಡಿಸಲು ಶಿಕ್ಷಣ ಇಲಾಖೆಯಿಂದ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, ಇದರಿಂದ ಗ್ರಾಮೀಣ ಪ್ರದೇಶದ ಮಕ್ಕಳು ತನ್ನಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಅನುಕೂಲವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ಕೃಷ್ಣಪ್ಪ ಹೇಳಿದರು. ಅವರು ನಗರದ ಸೆಂಟ್ ಆನ್ಸ್ ಶಾಲೆಯಲ್ಲಿ ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಾರ್ಯಾಲಯ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜ್ಯದ ವಿವಿಧ ಭಾಗಗಳ ಕಲೆಗಳು ಇಂದು ಪ್ರತಿಭಾ ಕಾರಂಜಿ ವೇದಿಕೆಯಲ್ಲಿ ಪ್ರದರ್ಶನವಾಗುತ್ತವೆ. ಈ ಮೂಲಕ ಗ್ರಾಮೀಣ ಭಾಗದ ಕಲೆಗಳು ರಾಜ್ಯದ ವಿವಿಧ ಭಾಗಗಳಿಗೆ ಪರಿಚಯವಾಗುತ್ತಿರುವುದು ಸಂತಸದ ವಿಷಯ. ಶಾಲಾ ಮಕ್ಕಳ ಸುಪ್ತ ಪ್ರತಿಭೆಗೆ, ಪುರಸ್ಕಾರ ನೀಡುವ ಉದ್ದೇಶದಿಂದ ಶಿಕ್ಷಣ ಇಲಾಖೆ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಆಯೋಜನೆ ಮಾಡಿ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಬೆಳಗುವಂತಾಗಲಿ ಎಂದು ಆಶಿಸಿದರು.ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಲ್.ರಾಮಚಂದ್ರಪ್ಪ ಮಾತನಾಡಿ ಗ್ರಾಮೀಣ ಕಲೆಗಳು ಇನ್ನೂ ಜೀವಂತವಾಗಿದ್ದು ಅವುಗಳಿಗೆ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳ ಮೂಲಕ ಸೂಕ್ತ ಪ್ರೋತ್ಸಾಹ ನೀಡುವಲ್ಲಿ ಶಿಕ್ಷಣ ಇಲಾಖೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಶಾಲೆಯ ತರಗತಿ ಕೋಣೆಯಲ್ಲಿ ಶಿಕ್ಷಕರು ಪ್ರತಿ ವಿದ್ಯಾರ್ಥಿಯ ಪ್ರತಿಭೆಯನ್ನು ಗುರುತಿಸಿ ಅವುಗಳಿಗೆ ಸೂಕ್ತ ವೇದಿಕೆ ಕಲ್ಪಿಸಿ, ಉನ್ನತ ಮಟ್ಟಕ್ಕೆ ಬೆಳೆಯಲು ಪೋಷಕರು ಹಾಗೂ ಶಿಕ್ಷಕರು ಶ್ರಮಿಸುವಂತೆ ತಿಳಿಸಿದರು. ಜಿನಿ ಆಹಾರ ಉತ್ಪಾದನಾ ಸಂಸ್ಥೆಯ ದಿಲೀಪ್ ಕುಮಾರ್ ಮಾತನಾಡಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಉತ್ತಮ ಪ್ರತಿಭೆ ಅಡಗಿದ್ದು, ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಕೆಲಸ ಶಿಕ್ಷಣ ಇಲಾಖೆ ಮಾಡುತ್ತಿರುವುದು ಶ್ಲಾಘನೀಯ. ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪಾಲ್ಗೊಳ್ಳುವ 2 ಸಾವಿರ ಮಕ್ಕಳು ಮತ್ತು ಶಿಕ್ಷಕರಿಗೆ ಊಟದ ವ್ಯವಸ್ಥೆ ಕಲ್ಪಿಸಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದರು. ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಆರ್.ರಂಗಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತರಾಜು ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಬಡ್ತಿ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಎಚ್.ಹಿಮಂತರಾಜು, ಸೆಂಟ್ ಆನ್ಸ್ ಶಾಲೆಯ ಮುಖ್ಯೋಪಾಧ್ಯಾಯರಾದ ವನಿತಾ, ಜಯಂತಿ, ಶಿಕ್ಷಣ ಸಂಪನ್ಮೂಲ ವ್ಯಕ್ತಿ ಸಿದ್ದಣ್ಣ, ಇಸಿಓ ಗೋವಿಂದಪ್ಪ, ಪ್ರತಿಭಾ ಕಾರಂಜಿ ನೋಡಲ್ ಅಧಿಕಾರಿ ನಾಗಭೂಷಣ್, ನರಸಿಂಹರಾಜು, ಸರ್ಕಾರಿ ನೌಕರ ಸಂಘದ ನಿರ್ದೇಶಕರಾದ ಓಂಕಾರೇಶ್ವರ, ದೇವರಾಜು ಸೇರಿದಂತೆ ಶಿಕ್ಷಣ ಇಲಾಖೆಯ ವಿವಿಧ ಅಧಿಕಾರಿಗಳು ಹಾಜರಿದ್ದರು.