ಕನ್ನಡಪ್ರಭ ವಾರ್ತೆ ಹುಣಸೂರು ಒಳಮೀಸಲಾತಿ ಅನುಸರಿಸದೇ 56 ಸಾವಿರ ಸರ್ಕಾರಿ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ನೀತಿಯನ್ನು ಖಂಡಿಸಿ ಮಾದಿಗ ಹೋರಾಟ ಸಮಿತಿಯ ತಾಲೂಕು ಘಟಕದ ಸದಸ್ಯರು ಪಟ್ಟಣದಲ್ಲಿ ಗುರುವಾರ ಪ್ರತಿಭಟಿಸಿದರು. ಪಟ್ಟಣದ ಸಂವಿಧಾನ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಕೈಗೊಂಡು ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದರು. ದಾರಿಯದ್ದಕ್ಕೂ ರಾಜ್ಯಸರ್ಕಾರ ಮೀಸಲಾತಿ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಘೋಷಣೆಗೆಳನ್ನು ಕೂಗಿದರು. ತಾಲೂಕು ಕಚೇರಿಯ ಮುಂಭಾಗ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾದಿಗ ಹೋರಾಟ ಸಮಿತಿ ಹಿರಿಯ ಹೋರಾಟಗಾರ ಹಾಗೂ ವಕೀಲ ಅರುಣ್ ಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ಒಳ ಮೀಸಲಾತಿ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ ಪಡೆದ ದಿನದಂದೇ ಒಳ ಮೀಸಲಾತಿ ಅನ್ವಯವಾಗದಂತೆ 56432 ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು, ಫೆಬ್ರವರಿ 26ರಂದು ಕರ್ನಾಟಕ ಸರ್ಕಾರದ ಸಚಿವ ಸಂಪುಟವು ತೀರ್ಮಾನ ಕೈಗೊಂಡಿರುವುದು ಅಸಂವಿಧಾನಿಕ ನಡೆಯಾಗಿದೆ. ಅಲ್ಲದೆ ಸಂವಿಧಾನ ಮತ್ತು ಸಾಮಾಜಿಕ ನ್ಯಾಯಕ್ಕೆ ಬಗೆದ ಮಹಾದ್ರೋಹವೆಂದೇ ನಾವು ಪರಿಗಣಿಸಿದ್ದೇವೆ. ಸುದೀರ್ಘ 35 ವರ್ಷಗಳ ಕಾಲ ನಮ್ಮ ಸಾಂವಿಧಾನಿಕ ಹಕ್ಕು ಆಗಿರುವ ಒಳ ಮೀಸಲಾತಿಗಾಗಿ ಜನತಾಂತ್ರಿಕವಾಗಿ ಹೋರಾಟ ನಡೆಸಿದ ಮಾದಿಗ ಸಮುದಾಯಕ್ಕೆ ಎಸಗಿದ ಘೋರ ಅನ್ಯಾಯವಾಗಿದೆ. ಹಾಗಾಗಿ ಕರ್ನಾಟಕ ರಾಜ್ಯ ಸರ್ಕಾರದ ಈ ಕರಾಳ ತೀರ್ಮಾನವನ್ನು ಸಾಮಾಜಿಕ ನ್ಯಾಯದ ನಿರೀಕ್ಷೆಯಲ್ಲಿರುವ ಮಾದಿಗ ಸಮುದಾಯ ತೀವ್ರವಾಗಿ ಖಂಡಿಸುತ್ತದೆ ಎಂದರು.ಮುಖಂಡ ಪ್ರಸನ್ನ ಚಕ್ರವರ್ತಿ ಮಾತನಾಡಿ, ಸರ್ಕಾರವು ಒಳ ಮೀಸಲಾತಿಯನ್ನು ವೋಟ್ ಬ್ಯಾಂಕ್ ದೃಷ್ಟಿಯಿಂದ ನೋಡದೆ ಮಾತೃ ಹೃದಯದಿಂದ ನೋಡಬೇಕಾಗಿದೆ, ಆಗ ಮಾತ್ರ ಅಲೆಮಾರಿಗಳ ಸಮಸ್ಯೆಯು ಬಗೆಹರಿಯುತ್ತದೆ. ಇಲ್ಲವಾದರೇ ಚಾರಿತ್ರಿಕ ಪ್ರಮಾದ ಸರ್ಕಾರ ಮತ್ತು ಅದರ ಮುಖ್ಯಸ್ಥರಾದ ಮುಖ್ಯಮಂತ್ರಿಗಳ ಹೆಗಲಿಗೆ ಅಂಟಿಕೊಳ್ಳುತ್ತದೆ ಎಂದು ಎಚ್ಚರಿಸಿದರು. ತಾಲೂಕು ಆದಿಜಾಂಬವ ಸಂಘದ ಅಧ್ಯಕ್ಷ ಎಂ. ಶಿವಣ್ಣ, ಜೆ. ಮಹದೇವ್, ಬೆಳ್ತೂರು ವೆಂಕಟೇಶ್, ರಾಯನಹಳ್ಳಿ ಸ್ವಾಮಿ ಮಾತನಾಡಿದರು. ಮಹಿಳಾ ಘಟಕದ ಅಧ್ಯಕ್ಷೆ ಶಿವಮ್ಮ, ತಾಲೂಕು ಗೌರವಾಧ್ಯಕ್ಷ ರಾಚಯ್ಯ, ಮುಖಂಡರಾದ ಕಿಟ್ಟು, ಎಂ. ಮಲ್ಲೇಶ್, ಎಂ. ಶಿವಕುಮಾರ್, ಎಚ್.ಪಿ. ಸತೀಶ್ ಕುಮಾರ್, ಬಸವರಾಜ ಗುರೂಜಿ, ಮಹದೇವಸ್ವಾಮಿ, ಆರ್. ಮಹದೇವ್, ಹರೀಶ್, ಆಂಜನೇಯ, ಕೆಂಪರಾಮಯ್ಯ, ಸಣ್ಣಮಾದಯ್ಯ, ಶಿವರಾಮು, ಸಂತೋಷ್ ಇದ್ದರು. ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯರಾಣಿ ಮನವಿ ಸ್ವೀಕರಿಸಿದರು.
ರಾಜ್ಯ ಸರ್ಕಾರದ ನೀತಿ ಖಂಡಿಸಿ ಮಾದಿಗ ಹೋರಾಟ ಸಮಿತಿಯಿಂದ ಪ್ರತಿಭಟನೆ
ರಾಜ್ಯ ಸರ್ಕಾರ ಒಳ ಮೀಸಲಾತಿ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ ಪಡೆದ ದಿನದಂದೇ ಒಳ ಮೀಸಲಾತಿ ಅನ್ವಯವಾಗದಂತೆ 56432 ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು, ಫೆಬ್ರವರಿ 26ರಂದು ಕರ್ನಾಟಕ ಸರ್ಕಾರದ ಸಚಿವ ಸಂಪುಟವು ತೀರ್ಮಾನ ಕೈಗೊಂಡಿರುವುದು ಅಸಂವಿಧಾನಿಕ ನಡೆ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.