ಸಾರಾಂಶ
ಪರಿಶಿಷ್ಟ ಜಾತಿಯೊಳಗಿನ ಉಪಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರಗಳಿಗೆ ಸಂವಿಧಾನ ಬದ್ಧ ಅಧಿಕಾರ ಇದೆ ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿರುವುದು ಸ್ವಾಗತಾರ್ಹ ವಾಗಿದೆ. ಅಲ್ಲದೇ, ಇದುವರೆಗೆ ಒಳ ಮೀಸಲಾತಿ ವಿಚಾರದಲ್ಲಿ ಇದ್ದ ಗೊಂದಲ ಪರಿಹಾರವಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಪರಿಶಿಷ್ಟ ಜಾತಿಯೊಳಗಿನ ಉಪ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸರ್ವೋಚ್ಚ ನ್ಯಾಯಾಲಯ ನೀಡಿರುವ ಐತಿಹಾಸಿಕ ತೀರ್ಪನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಡ್ಯದಲ್ಲಿ ತಮಟೆ ಚಳವಳಿ ನಡೆಸಿದರು.ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ತಮಟೆ ಸದ್ದಿನೊಂದಿಗೆ ಮೆರವಣಿಗೆ ಹೊರಟ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಚಳವಳಿ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಪತ್ರ ರವಾನಿಸಿದರು.
ಪರಿಶಿಷ್ಟ ಜಾತಿಯೊಳಗಿನ ಉಪಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರಗಳಿಗೆ ಸಂವಿಧಾನ ಬದ್ಧ ಅಧಿಕಾರ ಇದೆ ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿರುವುದು ಸ್ವಾಗತಾರ್ಹ ವಾಗಿದೆ. ಅಲ್ಲದೇ, ಇದುವರೆಗೆ ಒಳ ಮೀಸಲಾತಿ ವಿಚಾರದಲ್ಲಿ ಇದ್ದ ಗೊಂದಲ ಪರಿಹಾರವಾಗಿದೆ. ಆದರೆ, ತೀರ್ಪು ಬಂದು ಒಂದು ತಿಂಗಳು ಆಗಿದ್ದರೂ ರಾಜ್ಯ ಸರ್ಕಾರ ಆದೇಶ ಅನುಷ್ಠಾನ ಮಾಡದೆ ನಿರ್ಲಕ್ಷ್ಯ ತೋರಿದೆ ಎಂದು ಕಿಡಿಕಾರಿದರು.ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿ ಪರಿಶಿಷ್ಟ ಜಾತಿಯೊಳಗಿನ ಉಪಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಬೇಕು, ಬಾಕಿ ಇರುವ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು, ಒಳ ಮೀಸಲು ಜಾರಿಯಾಗುವವರೆಗೆ ಹೊಸ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯಬೇಕು ಎಂದು ಒತ್ತಾಯಿಸಿದರು.
ಸಮಿತಿಯ ಮೈಸೂರು ವಿಭಾಗೀಯ ಸಂಚಾಲಕ ಶಿವರಾಜ್ ಮರಳಿಗ, ಜಿಲ್ಲಾ ಸಂಚಾಲಕ ಮದ್ದೂರು ಶ್ರೀನಿವಾಸ್, ಪ್ರಕಾಶ್ ನಿಡಘಟ್ಟ, ಪುಟ್ಟಲಿಂಗಯ್ಯ ಬೂದಗುಪ್ಪೆ, ಶಂಕರ್ ನಿಡಘಟ್ಟ, ವೆಂಕಟರಾಮು, ಸವಿತಾ,ಸೌಭಾಗ್ಯ, ಮಾದೇವಿ , ಗುರುಲಿಂಗಯ್ಯ, ಸಿ.ಡಿ.ಶೇಖರ್ ನೇತೃತ್ವ ವಹಿಸಿದ್ದರು.