ಸಾರಾಂಶ
ಪಟ್ಟಣದ ತಾಪಂ ಕಚೇರಿಯಿಂದ ತಾಲೂಕು ಆಡಳಿತ ಸೌಧದವರೆಗೆ ಪ್ರತಿಭಟನಾಕಾರರು ಮೆರವಣಿಗೆ ನಡೆಸಿ ತಾಲೂಕಿನಾದ್ಯಂತ ಒತ್ತುವರಿಯಾಗಿರುವ ಸರ್ಕಾರಿ ಭೂಮಿ ತೆರವುಗೊಳಿಸಿ ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ನಾಗಮಂಗಲ
ಒತ್ತುವರಿಯಾಗಿರುವ ಕೆರೆ ಮತ್ತು ಸ್ಮಶಾನ ಜಾಗವನ್ನು ತೆರವುಗೊಳಿಸುವಂತೆ ಆಗ್ರಹಿಸಿ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಹಾಗೂ ತಾಲೂಕಿನ ಅದ್ದೀಹಳ್ಳಿ ಗ್ರಾಮಸ್ಥರು ಪಟ್ಟಣದಲ್ಲಿ ಶುಕ್ರವಾರ ತಮಟೆ ಚಳವಳಿ, ಅಣಕು ಶವಯಾತ್ರೆ ಮೂಲಕ ಪ್ರತಿಭಟನೆ ನಡೆಸಿದರು.ಪಟ್ಟಣದ ತಾಪಂ ಕಚೇರಿಯಿಂದ ತಾಲೂಕು ಆಡಳಿತ ಸೌಧದವರೆಗೆ ಪ್ರತಿಭಟನಾಕಾರರು ಮೆರವಣಿಗೆ ನಡೆಸಿ ತಾಲೂಕಿನಾದ್ಯಂತ ಒತ್ತುವರಿಯಾಗಿರುವ ಸರ್ಕಾರಿ ಭೂಮಿ ತೆರವುಗೊಳಿಸಿ ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ತಾಲೂಕು ಆಡಳಿತ ಸೌಧದ ಮುಂಭಾಗ ಕೆಲಕಾಲ ಧರಣಿ ನಡೆಸಿದ ಪ್ರತಿಭಟನಾಕಾರರು, ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಕೆರೆ- ಕಟ್ಟೆಗಳು, ಗೋಮಾಳ, ಗೋಕಟ್ಟೆ ಮತ್ತು ಗುಂಡು ತೋಪುಗಳು ಒತ್ತುವರಿಯಾಗಿವೆ. ಇವುಗಳನ್ನು ತೆರವುಗೊಳಿಸಿ ಜನ ಜಾನುವಾರುಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.ಗ್ರಾಮಗಳಲ್ಲಿ ಸ್ಮಶಾನಕ್ಕೆ ಮೀಸಲಿಟ್ಟಿರುವ ಜಾಗ ಒತ್ತುವರಿಯಾಗಿದ್ದರೆ ಅದನ್ನು ಈ ಕೂಡಲೇ ತೆರವುಗೊಳಿಸಿ, ಆ ಜಾಗದಲ್ಲಿ ಗ್ರಾಪಂ ವತಿಯಿಂದ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು. ಬಹುತೇಕ ಕೆರೆಗಳೂ ಸಹ ಒತ್ತುವರಿಯಾಗಿದ್ದು, ಸರ್ವೇಕಾರ್ಯ ನಡೆಸಿ ಒತ್ತುವರಿಯಾಗಿರುವ ಜಾಗವನ್ನು ತೆರವು ಮಾಡಿ ಕೆರೆಗಳನ್ನು ಸಂರಕ್ಷಣೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕೆಆರ್‌ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ್‌ಗೌಡ, ಜಿಲ್ಲಾಧ್ಯಕ್ಷ ಡಿ.ಜಿ.ನಾಗರಾಜು, ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಸಿರಾಜ್ ಅಹಮ್ಮದ್, ಪದಾಧಿಕಾರಿಗಳಾದ ಶ್ರೀನಿವಾಸ್, ಸಿದ್ದಲಿಂಗಯ್ಯ, ದೀಪಿಕಾ, ಅನುಸ್ವಾಮಿ, ಇಲಿಯಾಜ್, ಅದ್ದೀಹಳ್ಳಿ ಗ್ರಾಮದ ಸಂದೀಪ್, ಶ್ರೀಧರ್, ಗಂಗರಾಜು, ಯಲ್ಲಮ್ಮ, ಸುನೀತ, ವಿದ್ಯಾಶ್ರೀ, ಅನಸೂಯ, ಜಯಮ್ಮ, ರೂಪ, ಪುಟ್ಟಲಕ್ಷ್ಮೀ, ವೀಣಾ, ಲಕ್ಷ್ಮೀ, ಸುಶೀಲ ಸೇರಿದಂತೆ ಹಲವರು ಇದ್ದರು.